ಇಂದಿರಾ ಕ್ಯಾಂಟೀನ್ ಊಟಕ್ಕೆ ರೊಟ್ಟಿ,ಪಲ್ಯ, ಸ್ವೀಟ್ ಸೇರ್ಪಡೆ : ಸಬ್ಸಿಡಿ ಹೆಚ್ಚಳ

Indira Canteen : ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 188 ಹೊಸ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

Written by - RACHAPPA SUTTUR | Edited by - Savita M B | Last Updated : Aug 19, 2023, 10:58 PM IST
  • ಊಟದ ಮೆನುವಿನಲ್ಲಿ ಸಿಹಿ ಹಾಗೂ ಎರಡು ರೀತಿಯ ಪಲ್ಯ ಸೇರಿಸಲು ತೀರ್ಮಾನಿಸಲಾಗಿದೆ.
  • 188 ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪನೆ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧ
  • ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಯಾ ಭಾಗದ ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡಿ ಮೆನು ಬದಲಿಸುವುದು.
ಇಂದಿರಾ ಕ್ಯಾಂಟೀನ್ ಊಟಕ್ಕೆ ರೊಟ್ಟಿ,ಪಲ್ಯ, ಸ್ವೀಟ್ ಸೇರ್ಪಡೆ : ಸಬ್ಸಿಡಿ ಹೆಚ್ಚಳ title=

ಬೆಂಗಳೂರು : ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್,188 ಹೊಸ ಇಂದಿರಾ ಕ್ಯಾಂಟೀನ್ ಸ್ಥಾಪನೆ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಹಾಗೂ ಹಾಲಿ ಇರುವ ಕ್ಯಾಂಟೀನ್‌ಗಳ ದುರಸ್ಥಿ, ನವೀಕರಣ ಹಾಗೂ ಗುಣಮಟ್ಟ ಉತ್ತಮಪಡಿಸಲು ಒಟ್ಟು 21 ಕೋಟಿ ರೂ. ಅನುದಾನ ಮೀಸಲಿಡಲು ನಿರ್ಧರಿಸಲಾಗಿದೆ ಎಂದರು.

ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಯಾ ಭಾಗದ ಸ್ಥಳೀಯ ಆಹಾರಕ್ಕೆ ಆದ್ಯತೆ ನೀಡಿ ಮೆನು ಬದಲಿಸುವುದು. ಊಟದ ಮೆನುವಿನಲ್ಲಿ ಸಿಹಿ ಹಾಗೂ ಎರಡು ರೀತಿಯ ಪಲ್ಯ ಸೇರಿಸಲು ತೀರ್ಮಾನಿಸಲಾಗಿದೆ. ಸರ್ಕಾರ ಆಹಾರ ಗುತ್ತಿಗೆದಾರರಿಗೆ ನೀಡುತ್ತಿರುವ ಒಂದು ದಿನದ ಆಹಾರ (ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ) ಬೆಲೆಯನ್ನು 57 ರೂ.ಗಳಿಂದ 62 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. 

ಈ ಹೆಚ್ಚುವರಿ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು, ಸಾರ್ವಜನಿಕರಿಗೆ ಎಂದಿನಂತೆ ಬೆಳಗಿನ ತಿಂಡಿ 5 ರೂ.,ಮಧ್ಯಾಹ್ನದ ಊಟ 10 ರೂ. ಹಾಗೂ ರಾತ್ರಿ ಊಟ 10 ರೂ.ಗಳಿಗೆ ಲಭ್ಯವಾಗಲಿದೆ. 

ಕಲಿಕಾ ಬಲವರ್ಧನೆ: 
ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯು 2022-23 ಹಾಗೂ 2023-24ನೇ ಸಾಲಿನ ವಿವಿಧ ಕಾರ್ಯಕ್ರಮಗಳ ಅಡಿ ಲಭ್ಯವಾಗುವ ಪಿ.ಎ.ಬಿ. ಅನುಮೋದಿತ ಅನುದಾನದಲ್ಲಿ 1 ರಿಂದ 9ನೇ ತರಗತಿವರೆಗಿನ ಎಲ್ಲ ಮಾಧ್ಯಮಗಳ ವಿದ್ಯಾರ್ಥಿಗಳಿಗೆ ಚಟುವಟಿಕೆ ಪುಸ್ತಕ ಹಾಗೂ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಎಲ್ಲ ಶಿಕ್ಷಕರಿಗೆ ಚಟುವಟಿಕೆ ಬ್ಯಾಂಕ್ ವಿನ್ಯಾಸಗೊಳಿಸಿ ಮುದ್ರಿತ ಸರಬರಾಜು ಕೈಗೊಳ್ಳಲು 78.13 ಕೋಟಿ ರೂ. ಮೊತ್ತದ ಅನುದಾನವನ್ನು ಮರು ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಕಲಿಕಾ ಬಲವರ್ಧನೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ಇದನ್ನೂ ಓದಿ-ರೈಲಿನಲ್ಲಿ ತಾಂತ್ರಿಕ ಸಮಸ್ಯೆ, ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ

ಸಂಪುಟದ ಪ್ರಮುಖ ತೀರ್ಮಾನ ಏನು?:
ಲೋಕಾಯುಕ್ತ ದಾಳಿಗೊಳಗಾಗಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಪಾಪಣ್ಣ ವಿರುದ್ಧದ ಆರೋಪ ಸಾಬೀತಾಗಿದ್ದು, ನ್ಯಾಯಾಲಯದಲ್ಲಿ ಅವರು ಹಣ ವಾಪಸ್ ನೀಡುವುದಾಗಿ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಸರಕಾರಿ ಸೇವೆಯಿಂದ ವಜಾಗೊಳಿಸಲು ನಿರ್ಧರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಗೊಬ್ಬರಗುಂಟೆ ಗ್ರಾಮದ ಸ.ನಂ.64ರಲ್ಲಿನ 5 ಎಕರೆ ಸರಕಾರಿ ಜಮೀನನ್ನು ರಾಜ್ಯ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್‌ಗೆ ನೀಡಲು ಉದ್ದೇಶಿಸಲಾಗಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಉದ್ದೇಶಿತ ಜಮೀನಿಗೆ ರಸ್ತೆ ಸಂಪರ್ಕ ಸೇರಿದಂತೆ ಇನ್ನಿತರ ತಾಂತ್ರಿಕ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಹಿನ್ನೆಲೆ, ಅಂತಿಮ ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗೆ ಅಧಿಕಾರ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸಂಗಮ ಗ್ರಾಮವನ್ನು ಕಂದಾಯ ಇಲಾಖೆಯ ದಾಖಲಾತಿಗಳಲ್ಲಿ ಕೂಡಲ ಸಂಗಮವೆಂದು ಮರು ನಾಮಕರಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರ

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಹಾಸ್ಟೆಲ್ ಕಟ್ಟಡ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ 27.88 ಕೋಟಿ ರೂ.ಗಳಿಗೆ ಹಾಗೂ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿನ 450 ಹಾಸಿಗೆಗಳ ಸಾಮರ್ಥ್ಯದ ನೂತನ ಬೋಧಕ ಆಸ್ಪತ್ರೆ ಕಟ್ಟಡ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ 138 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ

ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಎಚ್.ಜಿ.ನಾಗರತ್ನ ಎಂಬುವರನ್ನು ಕ್ರಿಸ್ಟಿಫ್ರೈಡ್ ಗ್ರಾಂ ಇಂಡಸ್ಟ್ರೀಸ್ ಸಂಸ್ಥೆಯು ಹೂಡಿದ ಆರ್ಬಿಟ್ರೇಷನ್ ಪ್ರಕರಣದಲ್ಲಿ ಕಾನೂನು ನೆರವು ನೀಡುವುದಕ್ಕಾಗಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾನೂನು ಸಲಹೆಗಾರರನ್ನಾಗಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಸಚಿವ ಸಂಪುಟ ಅನುಮೋದನೆ. 

ಆರ್ಬಿಟ್ರೇಷನ್ ಪ್ರಕರಣದಲ್ಲಿ ಆರ್ಬಿಟ್ರೇಟರ್ ನ್ಯಾಯಾಲಯ 2018ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 171.47 ಕೋಟಿ ರೂ.ಗಳನ್ನು ಈ ಸಂಸ್ಥೆಗೆ 90 ದಿನಗಳೊಳಗಾಗಿ ಪಾವತಿಸುವಂತೆ ಸೂಚಿಸಿತ್ತು. ಅಲ್ಲದೆ, ತಡವಾಗಿ ಪಾವತಿ ಮಾಡಿದರೆ ಶೇ.12-14ರಷ್ಟು ಬಡ್ಡಿ ಪಾವತಿಸುವಂತೆ ಐ-ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ದಾಖಲಿಸಲಾದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ 2021ರಲ್ಲಿ ವಜಾಗೊಳಿಸಿತ್ತು.

ಈ ತೀರ್ಪನ್ನು 220 ದಿನಗಳಾದರೂ ಪ್ರಶ್ನಿಸಿರಲಿಲ್ಲ. ಹೀಗಾಗಿ ಹೈಕೋರ್ಟ್‌ನಲ್ಲಿಯೂ ಹಿನ್ನಡೆಯುಂಟಾಗಿ 274 ಕೋಟಿ ರೂ.ಗಳು ಪಾವತಿಸುವಂತಾಗಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ 4 ವಾರಗಳ ಕಾಲಾವಕಾಶ ಕೋರಲು ನಿರ್ಧರಿಸಲಾಗಿದೆ.

ನಿವೃತ್ತ ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿದ್ದ ಎಚ್.ಡಿ. ನಾಗರತ್ನ ಅವರನ್ನು  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾನೂನು ಸಲಹೆಗಾರ ಹುದ್ದೆಗೆ  1 ವರ್ಷದ ಮಟ್ಟಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸಂಪುಟದಲ್ಲಿ ತೀರ್ಮಾನ

ಇದನ್ನೂ ಓದಿ-ಕವಾಡಿಗರಹಟ್ಟಿ, ಕಲುಷಿತ ನೀರು ಸೇವನೆ ಪ್ರಕರಣ

 

Trending News