ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 88 ಟಿಎಂಸಿ ನೀರಿನ ಸಂಗ್ರಹ ಇದ್ದು, ಎಡದಂಡೆ ಮುಖ್ಯಕಾಲುವೆಗೆ 4100 ಕ್ಯೂಸೆಕ್ಸ್ ನಂತೆ ನ.30ರವರೆಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ. ಮುನಿರಾಬಾದ್ ಕಾಡಾ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತುಂಗಭದ್ರಾ ಯೋಜನೆ ಹಾಗೂ ವಿಜಯನಗರ ಕಾಲುವೆಗಳ 119ನೇ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಜಲಾಶಯದಲ್ಲಿನ ನೀರಿನ ಸಂಗ್ರಹ ಲಭ್ಯತೆಯ ಮೇರೆಗೆ ನೀರಿನ ಬಳಕೆ ಮಾಡಲಾಗುತ್ತಿದೆ. ನ 30 ರವರೆಗೆ ಬಲದಂಡೆ ಮೇಲ್ಮಟ್ಟದ ಕಾಲುವೆಗೆ 1300 ಕ್ಯೂಸೆಕ್ಸ್, ಬಲದಂಡೆಯ ಕೆಳಮಟ್ಟದ ಕಾಲುವೆಗೆ 850 ಕ್ಯೂಸೆಕ್ಸ್ , ರಾಯ ಬಸವಣ್ಣ ಕಾಲುವೆಗೆ 270 ಕ್ಯೂಸೆಕ್ಸ್ ಹಾಗೂ ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ನ.30ರವರೆಗೆ 25 ಕ್ಯೂಸೆಕ್ ಅಥವಾ ಕಾಲುವೆಯಡಿ ನೀರಿನ ಲಭ್ಯತೆ ಆಧಾರದ ಮೇರೆಗೆ ನೀರು ಹರಿಸಲು ಸಲಹಾ ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದು ಅಕ್ಷಮ್ಯ ಅಪರಾಧ: ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ!
ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ ಇರುವ 88 ಟಿಎಂಸಿ ನೀರಿನ ಪೈಕಿ ರಾಜ್ಯದ ಪಾಲಿಗೆ 65 ಟಿಎಂಸಿ ಇದೆ. ಈಗಾಗಲೇ 10 ಟಿಎಂಸಿ ಬಳಕೆ ಮಾಡಿದ್ದು, ಆಂಧ್ರಕ್ಕೆ 3 ಟಿಎಂಸಿ ನೀರು ಹರಿಸಲಾಗಿದೆ. ಒಳ ಹರಿವಿನ ಆಧಾರದ ಮೇರೆಗೆ ಪ್ರಸ್ತುತ ಕಾಲುವೆಗೆ ಈ ಮೇಲಿನ ಪ್ರಮಾಣದ ನೀರು ಹರಿಸಲು ನಿರ್ಧಾರಿಸಲಾಗಿದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಎರಡು ಬೆಳೆಗೂ ನೀರು ಬಿಡಬೇಕು ಎಂಬುದು ನಮ್ಮ ಆಶಯ ಕೂಡ. ಎರಡನೇ ಬೆಳೆಗೆ ನೀರು ಬಿಡುವ ಬಗ್ಗೆ ಅಕ್ಟೋಬರ್ ನಲ್ಲಿ ನಿರ್ಧಾರ ಮಾಡಲಾಗುವುದು. ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆದಿದ್ದು, ರೈತರು ಹಲವು ಬೇಡಿಕೆಗಳನ್ನು ಸಭೆಯ ಮುಂದೆ ಇಟ್ಟಿದ್ದಾರೆ. ನಾಲ್ಕು ಜಿಲ್ಲೆಯ ಸಚಿವರು ಸಭೆ ನಡೆಸುವ ಬಗ್ಗೆ ಶೀಘ್ರವೇ ದಿನಾಂಕ ನಿಗದಿಪಡಿಸಲಾಗುವುದು ಎಂದು ಶಿವರಾಜ್ ತಂಗಡಗಿ ಮಾಹಿತಿ ನೀಡಿದರು.
ಅನಧಿಕೃತವಾಗಿ ನೀರು ಬಳಕೆ ತಡೆ ಸಂಬಂಧ ಜಿಲ್ಲಾಧಿಕಾರಿಗಳು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸಭೆಯಲ್ಲಿ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್, ಎನ್.ಎಸ್.ಬೋಸರಾಜ್, ಬಿ.ನಾಗೇಂದ್ರ, ಸಂಸದರಾದ ಕರಡಿ ಸಂಗಣ್ಣ, ವೈ.ದೇವೇಂದ್ರಪ್ಪ, ಅಮರೇಶ ನಾಯಕ್, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್, ಎಚ್.ಆರ್.ಗವಿಯಪ್ಪ, ಹಂಪನಗೌಡ ಬಾದರ್ಲಿ, ಜಿ.ಜನಾರ್ದನ್ ರೆಡ್ಡಿ, ಬಸವನಗೌಡ ತುರುವಿಹಾಳ್, ಎಸ್.ಶಿವರಾಜ್ ಪಾಟೀಲ್, ಬಿ.ಎಂ.ನಾಗರಾಜ್, ಶರಣೇಗೌಡ ಬಯ್ಯಾಪುರ, ರೈತ ಮುಖಂಡ ಚಾಮರಾಸ ಪಾಟೀಲ್, ಹಾಗೂ ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲಾಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ಇದನ್ನೂ ಓದಿ: ಭ್ರಷ್ಟಾಚಾರದಲ್ಲಿ ಸಚಿವ ಚಲುವರಾಯಸ್ವಾಮಿಗೆ ಮೊದಲ ಸ್ಥಾನ: ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ
ಬಿಜೆಪಿ, ಜೆಡಿಎಸ್ ಗೆ ಇನ್ನೂ ಭವಿಷ್ಯ ಇಲ್ಲ: ಪಕ್ಷ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡಿದ್ದ ಬಾಂಬೆ ಬಾಯ್ಸ್ ಮತ್ತೆ ಕಾಂಗ್ರೆಸ್ ಗೆ ಮರಳುತ್ತಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಗೆ ಭವಿಷ್ಯ ಇಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಆ ಪಕ್ಷಗಳಲ್ಲಿ ಯಾವೊಬ್ಬ ಶಾಸಕರು ಇರುವುದಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹತಾಶೆ ಗೊಳಗಾಗಿದ್ದು, ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಗಳಿಗೆ ಯಾವುದೇ ಕಿಮ್ಮತ್ತಿಲ್ಲ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.