ಒಕ್ಕಲಿಗ ಸಂಪ್ರದಾಯದಂತೆ 'ಅಂಬರೀಷ್‌' ಅಂತ್ಯ ಕ್ರಿಯೆ

ಕಂಠೀರವ ಸ್ಟುಡಿಯೋದಲ್ಲಿ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದ್ದು, ಒಕ್ಕಲಿಗರ ಸಂಪ್ರದಾಯದ ಪ್ರಕಾರ ಅಂಬಿ ಪುತ್ರ ಅಭಿಷೇಕ್ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಿದ್ದಾರೆ.

Last Updated : Nov 26, 2018, 10:09 AM IST
ಒಕ್ಕಲಿಗ ಸಂಪ್ರದಾಯದಂತೆ 'ಅಂಬರೀಷ್‌' ಅಂತ್ಯ ಕ್ರಿಯೆ title=

ಬೆಂಗಳೂರು: ಶನಿವಾರ ರಾತ್ರಿ ಕೊನೆಯುಸಿರೆಳೆದ ಕನ್ನಡ ಚಿತ್ರರಂಗದ ಮೇರು ನಟ, ಮಾಜಿ ಸಚಿವ ಅಂಬರೀಶ್ ಅವರ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಸಂಸ್ಕಾರಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇಂದು ಮಧ್ಯಾಹ್ನ 2 ಗಂಟೆಗೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಒಕ್ಕಲಿಗರ ಸಂಪ್ರದಾಯದ ಪ್ರಕಾರ ಅಂಬಿ ಪುತ್ರ ಅಭಿಷೇಕ್ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಿದ್ದಾರೆ.

ಅಂತ್ಯಕ್ರಿಯೆಯ ಉಸ್ತುವಾರಿಯನ್ನು ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕ ಗೋಪಾಲಯ್ಯ, ಬಿಬಿಎಂಪಿ ವಹಿಸಿಕೊಂಡಿದೆ. ಖ್ಯಾತ ವೈದಿಕ ಡಾ. ಭಾನುಪ್ರಕಾಶ್ ಶಿಷ್ಯರ ತಂಡದಿಂದಲೇ ಅಂತಿಮ ವಿಧಿವಿಧಾನ ನೆರವೇರಲಿದೆ. ಭಾನುಪ್ರಕಾಶ್ ಅವರು ಅಮೆರಿಕದಲ್ಲಿರುವ ಕಾರಣ ಶಿಷ್ಯರಿಗೆ ಫೋನ್​​ನಲ್ಲಿಯೇ ಮಾರ್ಗದರ್ಶನ ನೀಡಲಿದ್ದಾರೆ. 

ಅಂತ್ಯ ಸಂಸ್ಕಾರಕ್ಕಾಗಿಯೇ ನೀಲಗಿರಿ, ಅತ್ತಿ, ಸಾಮೆ, ಗಂಧದ ಕಡ್ಡಿಗಳನ್ನ ತರಿಸಲಾಗಿದೆ. 13 ಕೆ.ಜಿ ಗಂಧದ ಚೆಕ್ಕೆ, ಹತ್ತು ಕೆ.ಜಿ ಕೊಬ್ಬರಿ, 30 ಕೆ.ಜಿ ತುಪ್ಪ, 5 ಕೆ.ಜಿ ಕರ್ಪೂರ, ಒಂದು ಚೀಲ ಹಸುವಿನ ಬೆರಣಿ, ಹುಣಸೆ ಮರದ ಕೊಂಬೆಗಳನ್ನು ಅಂತ್ಯ ಕ್ರಿಯೆಗೆ ಬಳಸಲಾಗುತ್ತದೆ. ಅಂತ್ಯ ಸಂಸ್ಕಾರಕ್ಕೆ ಕಟ್ಟೆಯನ್ನ ಕಟ್ಟಿ ಬಿಳಿ ಬಣ್ಣ ಬಳಿಯಲಾಗಿದೆ. ಈಗಾಗಲೇ ಸಮಾಧಿ ನಿರ್ಮಾಣದ ಜಾಗವನ್ನು ಸರ್ಕಾರಿ ಸಿಬ್ಬಂದಿ ಸ್ವಚ್ಛತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂಬರೀಷ್ ಅಂತ್ಯಕ್ರಿಯೆ ವೀಕ್ಷಣೆಗೆ ಒಟ್ಟಾರೆ 6000 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಗಣ್ಯರಿಗಾಗಿ ಪ್ರತ್ಯೇಕ 1 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಮತ್ತು ಅಭಿಮಾನಿಗಳಿಗಾಗಿ ಐದು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗಾಗಿ ನಂದಿನಿ ಲೇಔಟ್‌ನ ಹಿಂಬದಿ ಗೇಟ್ ಮೂಲಕ ಪ್ರವೇಶ ಮತ್ತು ರಿಂಗ್ ರಸ್ತೆಯ ಮುಖ್ಯದ್ವಾರದಲ್ಲಿ ವಿಐಪಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಸಿಸಿಟಿವಿಗಳ ಅಳವಡಿಸಲಾಗಿದ್ದು, ದೂರ ನಿಂತಿರುವ ಅಭಿಮಾನಿಗಳಿಗೆ ಅಂತ್ಯ ಸಂಸ್ಕಾರ ಸರಿಯಾಗಿ ಕಾಣಿಸುವಂತೆ ಮಾಡಲು ದೊಡ್ಡ ಎಲ್‌ಇಡಿ ಸ್ಕ್ರೀನ್‌ಗಳನ್ನು ಹಾಕಲಾಗಿದೆ. 

Trending News