ಬೆಂಗಳೂರು: ನೀವೇನಾದರೂ ಕೈಯಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದು ಹೊರಗೆ ನಡೆದಿದ್ದೇ ಆದಲ್ಲಿ, ಮೊದಲೇ ಒಂದಷ್ಟು ಹಣ ಹೆಚ್ಚಾಗಿ ತೆಗೆದುಕೊಂಡು ಹೋಗಿ.. ಯಾಕಂದ್ರೆ ನಿಮ್ಮ ಕೈಲಿರೋ ಪ್ಲಾಸ್ಟಿಕ್ ಕವರ್ ಇರೋದು ನಮ್ಮ ಬಿಬಿಎಂಪಿ ಅಧಿಕಾರಿಗಳ ಕಣ್ಣಿಗೆ ಬಿತ್ತಂದ್ರೆ ಅಲ್ಲಿಗೆ ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ!
ಹೌದು, ನಗರದಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಅಲ್ಲಿ, ಇಲ್ಲಿ ಕದ್ದು ಮುಚ್ಚಿ ಪ್ಲಾಸ್ಟಿಕ್ ಕವರ್ ಬಳಕೆ, ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಹಲವು ಬಾರಿ ದಂಡ ವಿಧಿಸುವ ಬಗ್ಗೆ ಹೇಳಿದ್ದರೂ, ಅಧಿಕಾರಿಗಳ ಮುಂದೆ ಪ್ಲಾಸ್ಟಿಕ್ ಬಳಸುತ್ತಿಲ್ಲ ಎಂದು ತೋರಿಸಿಕೊಳ್ಳುವ ಅಂಗಡಿಯವರು, ಅಧಿಕಾರಿಗಳು ಅತ್ತ ಹೋಗುತ್ತಿದ್ದಂತೆಯೇ ಇತ್ತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಪ್ಲಾಸ್ಟಿಕ್ ಬಳಕೆ ಮಾಡುವ ಗ್ರಾಹಕರಿಗೆ ದಂಡ ವಿಧಿಸುವ ನಿರ್ಧಾರವನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದೆ.
ಹೀಗಾಗಿ ಜನರು ಕೈಯಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದು ಸಾಮಾನು ತೆಗೆದುಕೊಂಡು ಹೋಗುವುದು ಬಿಬಿಎಂಪಿ ಅಧಿಕಾರಿಗಳ ಕಣ್ಣಿಗೆ ಬಿದ್ದರೆ, ಜನರು ಸ್ಥಳದಲ್ಲೇ 500 ರೂ.ದಂಡ ಕಟ್ಟಬೇಕಾಗುತ್ತದೆ. ಈ ನಿಯಮ ಜುಲೈ 11 ರಿಂದ ಜಾರಿಗೆ ಬರಲಿದ್ದು, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಇದಲ್ಲದೆ, ವಾಣಿಜ್ಯ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕಂಡುಬಂದರೆ ಮೊದಲಬಾರಿ 25 ಸಾವಿರ, ಎರಡನೇ ಬಾರಿ 50 ಸಾವಿರ ದಂಡ, ಸಣ್ಣಪುಟ್ಟ ಅಂಗಡಿಗಳಿಗೆ ಮೊದಲನೇ ಬಾರಿ 500 ರೂ., ಎರಡನೇ ಬಾರಿಗೆ 1000 ರೂ. ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.