ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಸಿಕ್ತು ಫೇಸ್ಬುಕ್ ಪ್ರಶಸ್ತಿ ಗರಿ

ಸಾಮಾಜಿಕ ಜಾಲತಾಣವನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಸರ್ಕಾರಿ ಸಂಸ್ಥೆಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. 2017ರ ಜನವರಿ 1 ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಫೇಸ್ಬುಕ್ ಪೇಜ್ ಗಳ ಜನಪ್ರಿಯತೆಯಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಪೇಜ್ ನಂ.1

Last Updated : Jul 25, 2018, 11:27 AM IST
ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಸಿಕ್ತು ಫೇಸ್ಬುಕ್ ಪ್ರಶಸ್ತಿ ಗರಿ title=

ಬೆಂಗಳೂರು: ಸಮಕಾಲೀನ ಜಾಗೃತ ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣವೂ ಒಂದು. ಸೋಷಿಯಲ್ ಮೀಡಿಯಾದಲ್ಲಿ ಫೇಸ್ಬುಕ್ ಸದ್ಯ ಅತ್ಯಂತ ಪ್ರಬಲ ಮಾಧ್ಯಮವಾಗಿದೆ. ಸಾಮಾಜಿಕ ಜಾಲತಾಣವನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಸರ್ಕಾರಿ ಸಂಸ್ಥೆಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು ನಿರ್ವಹಿಸುತ್ತಿರುವ ಫೇಸ್ ಬುಕ್ ಪೇಜ್ ಈಗ ಫೇಸ್ ಬುಕ್ ನಲ್ಲಿ ನಂ. 1 ಪೇಜ್ ಸ್ಥಾನವನ್ನು ಪಡೆದಿದೆ. 

ದೇಶದ ವಿವಿಧ ನಗರಗಳ ಟ್ರಾಫಿಕ್ ಪೊಲೀಸ್ ಪೇಜ್ ಗಳಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಪೇಜ್ ನಂ.1 ಸ್ಥಾನ ಪಡೆದಿದೆ. ಬೆಂಗಳೂರು ಟ್ರಾಫಿಕ್ ಪೊಲೀಸ್ ಪೇಜ್ ಸರ್ಕಾರಿ ಸಂಸ್ಥೆಯ ಪೇಜ್ ಗಳಲ್ಲಿ ಟಾಪ್ ಮೂರರಲ್ಲಿ ಗುರುತಿಸಿ ಕೊಂಡಿದೆ ಎಂದು ಫೇಸ್ ಬುಕ್ ತಿಳಿಸಿದೆ. 

2017ರ ಜನವರಿ 1 ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಫೇಸ್ಬುಕ್ ಪೇಜ್ ನಲ್ಲಿ ಸಾರ್ವಜನಿಕರ ಜತೆ ಸಂವಹನ, ಅದಕ್ಕೆ ಬರುವ ಪ್ರತಿಕ್ರಿಯೆಗಳು, ಶೇರ್ ಎಲ್ಲವನ್ನೂ ಗಮನಿಸಿ ರ್ಯಾಂಕ್ ನೀಡಲಾಗಿದೆ. ಸಾರ್ವಜನಿಕರು ಫೇಸ್ಬುಕ್​ನಲ್ಲಿ ನೀಡುವ ದೂರಿಗೆ ಇವರು ತತ್​ಕ್ಷಣವೇ ಸ್ಪಂದಿಸುತ್ತಾರೆ. ಅಂತಹ ಹಲವು ನಿದರ್ಶನಗಳನ್ನು ನಾವು ಬೆಂಗಳೂರು ಟ್ರಾಫಿಕ್ ಪೊಲೀಸರ ಫೇಸ್ಬುಕ್ ಮತ್ತು ಟ್ವಿಟ್ಟರ್ ಹ್ಯಾಂಡಲ್​ಗಳಲ್ಲಿ ನೋಡಬಹುದು. 

ಫೇಸ್ಬುಕ್​ನಿಂದ ಪ್ರಶಂಸೆ ಪಡೆದ ಬೆಂಗಳೂರು ಟ್ರಾಫಿಕ್ ಪೊಲೀಸ್ ವಿಭಾಗಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಕೂಡ ಶಹಬ್ಬಾಸ್ ಹೇಳಿ ಟ್ವೀಟ್ ಮಾಡಿದ್ದಾರೆ. ಬೆಂಗಳೂರು ಸಿಟಿ ಪೊಲೀಸ್ ಮತ್ತು ಟ್ರಾಫಿಕ್ ಪೊಲೀಸ್ ಎರಡೂ ವಿಭಾಗಗಳು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿವೆ. ಈ ಮೂಲಕ ಜನತೆಯೊಂದಿಗೆ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಪರಮೇಶ್ವರ್ ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಶ್ಲಾಘಿಸಿದ್ದಾರೆ.
 

Trending News