ಪ್ರೀತಂ ಗೌಡ ಮನೆ ಮೇಲೆ ಕಲ್ಲುತೂರಾಟ ಪ್ರಕರಣ; ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೆಡಿಎಸ್​ನ 8, ಬಿಜೆಪಿಯ 5 ಮಂದಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

Last Updated : Feb 14, 2019, 11:21 AM IST
ಪ್ರೀತಂ ಗೌಡ ಮನೆ ಮೇಲೆ ಕಲ್ಲುತೂರಾಟ ಪ್ರಕರಣ; ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ title=
Pic Courtesy: ANI

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ 'ಆಪರೇಶನ್ ಆಡಿಯೋ' ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆಡಿಯೋ ಕ್ಲಿಪ್ ನಲ್ಲಿ ಶಾಸಕ ಪ್ರೀತಂ ಗೌಡ ಅವರ ಧ್ವನಿಯಿದೆ ಮತ್ತು ಆ ಧ್ವನಿ ಮಾಜೀ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕುರಿತು ಲಘುವಾಗಿ ಮಾತನಾಡಿದ್ದಾರೆ ಎಂಬ ವಿಷಯ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಜೆಡಿ(ಎಸ್) ಪಕ್ಷದ ಕಾರ್ಯಕರ್ತರು ಸಹಜವಾಗಿಯೇ ಕೆರಳಿದೆ. ಹಾಸನದಲ್ಲಿ ಇರುವ ಪ್ರೀತಂ ಗೌಡ ಅವರ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಎಸೆದ ಕಲ್ಲೊಂದು ಮನೆಯ ಮುಂದೆ ನಿಂತಿದ್ದ ಬಿಜೆಪಿ ಕಾರ್ಯಕರ್ತರ ಹಣೆಗೆ ಬಡಿದು ಅವರು ಗಾಯಗೊಂಡರು.

ಪ್ರಬಲ ಅಸ್ತ್ರವಾದ ಪ್ರಕರಣ:
ಆಪರೇಷನ್ ಕಮಲದ ಆಡಿಯೋ ಬಿಡುಗಡೆಯಿಂದ ಮುಖಭಂಗಕ್ಕೊಳಗಾಗಿರುವ ಬಿಜೆಪಿಗೆ ಈಗ ಪ್ರೀತಂ ಗೌಡ ಪ್ರಕರಣ ಪ್ರಬಲ ಅಸ್ತ್ರವಾಗಿದೆ. ಈ ಪ್ರಕರಣವನ್ನು ಖಂಡಿಸಿ  ಗುರುವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಇಂದು ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಲು ಕಮಲ ಪಡೆ ಮುಂದಾಗಿದೆ.

ಕಲ್ಲೇಟಿಗೆ ಗುರಿಯಾದ ಕಮಲ ಕಾರ್ಯಕರ್ತ ಬೆಂಗಳೂರಿಗೆ ಶಿಫ್ಟ್​:
ಶಾಸಕ ಪ್ರೀತಂ ಗೌಡ ಮನೆ ಬಳಿ ಜೆಡಿಎಸ್ ಕಾರ್ಯಕರ್ತರು ನಡೆಸಿದ್ದಾರೆ ಎನ್ನಲಾದ ಕಲ್ಲು ತೂರಾಟದಲ್ಲಿ ಗಾಯಗೊಂಡಿರುವ ಬಿಜೆಪಿ ಬೆಂಬಲಿಗ ರಾಹುಲ್ ಕಿಣಿಯನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆದೇಶದಂತೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಯಿಂದ ಬೆಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 

ಪ್ರೀತಂ ಗೌಡ ಒಬ್ಬ ಜನಪ್ರಿಯ ಶಾಸಕ. ಹಾಸನದಲ್ಲಿ ಇವರ ಬೆಳವಣಿಗೆಯನ್ನು ಸಹಿಸದೆ ಈ ಗಲಾಟೆ ಮಾಡಲಾಗುತ್ತಿದೆ. ಇದು ಗೂಂಡಾ ಸರ್ಕಾರ. ಈ ದಾಳಿ ಘಟನೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಹೆಚ್.ಡಿ. ರೇವಣ್ಣ ಅವರೇ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಈ ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಬಳಿ ದೂರು ನೀಡುವುದಾಗಿಯೂ ಬಿಎಸ್​ವೈ ಹೇಳಿದ್ದಾರೆ.

Trending News