"ಜಾತಿ ಭಾವನೆ ವಿದ್ಯಾವಂತರಲ್ಲಿಯೇ ಹೆಚ್ಚು. ಇದು ಅತ್ಯಂತ ಅಪಾಯಕಾರಿ"

  ಜಾತಿ ಭಾವನೆ ವಿದ್ಯಾವಂತರಲ್ಲಿಯೇ ಹೆಚ್ಚು. ಇದು ಅತ್ಯಂತ ಅಪಾಯಕಾರಿ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

Last Updated : Feb 24, 2021, 09:51 PM IST
  • ಚುನಾವಣಾ ವ್ಯವಸ್ಥೆ ಬದಲಾಗದ ಹೊರತು ಸಂವಿಧಾನದ ಮೌಲ್ಯಗಳ ಕುಸಿತ ತಪ್ಪಿಸಲು ಸಾಧ್ಯವಿಲ್ಲ. ಚುನಾವಣೆಯನ್ನು ಸರ್ಕಾರವೇ ನಡೆಸುವ ವ್ಯವಸ್ಥೆ ಜಾರಿಗೆ ತರಬೇಕು. ನಾಮಪತ್ರ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಪ್ರಚಾರಕ್ಕೆ ಹೋಗುವಂತಿರಬಾರದು. ಸುಧಾರಣೆ ತರಬೇಕಾದರೆ ರಾಜಕೀಯ ಪಕ್ಷಗಳಲ್ಲಿಯೂ ಬದಲಾವಣೆ ಅನಿವಾರ್ಯ.
"ಜಾತಿ ಭಾವನೆ ವಿದ್ಯಾವಂತರಲ್ಲಿಯೇ ಹೆಚ್ಚು. ಇದು ಅತ್ಯಂತ ಅಪಾಯಕಾರಿ" title=
file photo

ಬೆಂಗಳೂರು:  ಜಾತಿ ಭಾವನೆ ವಿದ್ಯಾವಂತರಲ್ಲಿಯೇ ಹೆಚ್ಚು. ಇದು ಅತ್ಯಂತ ಅಪಾಯಕಾರಿ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಕಾಮನ್‍ವೆಲ್ತ್ ಸಂಸದೀಯ ಸಂಘದ ಕರ್ನಾಟಕ ಶಾಖೆ ಆಯೋಜಿಸಿದ್ದ “ಸಂಸದೀಯ ಮೌಲ್ಯಗಳ ಕುಸಿತವನ್ನು ತಡೆಯುವ ನಿಟ್ಟಿನಲ್ಲಿ ಒಂದು ಆತ್ಮಾವಲೋಕನ” ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಸಿದ್ಧರಾಮಯ್ಯ (Siddaramaiah) ಮಾತನಾಡಿದ್ದಾರೆ.

ಚುನಾವಣಾ ವ್ಯವಸ್ಥೆ ಬದಲಾಗದ ಹೊರತು ಸಂವಿಧಾನದ ಮೌಲ್ಯಗಳ ಕುಸಿತ ತಪ್ಪಿಸಲು ಸಾಧ್ಯವಿಲ್ಲ. ಚುನಾವಣೆಯನ್ನು ಸರ್ಕಾರವೇ ನಡೆಸುವ ವ್ಯವಸ್ಥೆ ಜಾರಿಗೆ ತರಬೇಕು. ನಾಮಪತ್ರ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಪ್ರಚಾರಕ್ಕೆ ಹೋಗುವಂತಿರಬಾರದು. ಸುಧಾರಣೆ ತರಬೇಕಾದರೆ ರಾಜಕೀಯ ಪಕ್ಷಗಳಲ್ಲಿಯೂ ಬದಲಾವಣೆ ಅನಿವಾರ್ಯ.

ಇದನ್ನೂ ಓದಿ: Siddaramaiah: ಸಿದ್ದರಾಮಯ್ಯ ಅಖಾಡಕ್ಕಿಳಿದ್ರೂ 'ಕೈ' ತಪ್ಪಿದ ಮೈಸೂರು ಮೇಯರ್‌ ಪಟ್ಟ!

ಮಾತೃ ಹೃದಯದವರು ಮಾತ್ರ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬಲ್ಲರು. ಕಲಾಪ ಎಷ್ಟು ದಿನ ನಡೆಸಬೇಕು ಎಂಬ ಸ್ವಾತಂತ್ಯ ವಿಧಾನಸಭೆಯ ಅಧ್ಯಕ್ಷರು ಮತ್ತು ವಿಧಾನ ಪರಿಷತ್ತಿನ ಸಭಾಪತಿಗಳಿಗೆ ಇರಬೇಕು. ಕಲಾಪದ ಅವಧಿಯನ್ನು ಸರ್ಕಾರ ನಿರ್ಧಾರ ಮಾಡುವುದು ಸರಿಯಲ್ಲ. ವರ್ಷದಲ್ಲಿ 60 ದಿನಗಳ ಕಾಲ ಕಲಾಪ ನಡೆಯಬೇಕು ಎಂಬ ನಿಯಮವಿದೆ. ಆ ನಿಯಮಕ್ಕೆ ಬದ್ಧವಾಗಿ ಎಲ್ಲರೂ ನಡೆದುಕೊಳ್ಳಬೇಕು.

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1973ರಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತರಲಾಯಿತು. ಇದಕ್ಕೆ ಪೂರ್ವಭಾವಿಯಾಗಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಭಾರಿ ಚರ್ಚೆ ನಡೆದಿತ್ತು. ಆದರೆ ಈಗ ತರಾತುರಿಯಲ್ಲಿ ಕಾನೂನುಗಳನ್ನು ರೂಪಿಸಿ ಜಾರಿಗೆ ತರಲಾಗುತ್ತಿದೆ.

ಯಾವುದೇ ಕಾನೂನು ಜಾರಿಗೆ ತರುವ ಮುನ್ನ ಚರ್ಚೆಗೆ ಅವಕಾಶ ಸಿಗಲೇಬೇಕು. ಅವಸರ ಮಾಡಬಾರದು. ವಿಧೇಯಕ ಮಂಡಿಸಿ ಒಂದೇ ದಿನದಲ್ಲಿ ಅಂಗೀಕಾರ ಮಾಡಿ, ಸುಗ್ರೀವಾಜ್ಞೆ ಜಾರಿಗೆ ತರುವ ಅಭ್ಯಾಸ ಒಳ್ಳೆಯದಲ್ಲ.

ಶಾಸಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವುದನ್ನು ತಪ್ಪಿಸಲು ಕಾನೂನು ಜಾರಿಗೆ ತರಲಾಯಿತು. ಆದರೂ ಶಾಸಕರು ರಂಗೋಲಿ ಕೆಳಗೆ ನುಸುಳುತ್ತಾರೆ. ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆ ತರದಿದ್ದರೆ ಸಂವಿಧಾನದ ಮೌಲ್ಯಗಳು ಕುಸಿಯುವುದನ್ನು ತಪ್ಪಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: Laxmi Hebbalkar: 'ರಮೇಶ್ ಜಾರಕಿಹೊಳಿಯನ್ನು ಮಂತ್ರಿ ಮಾಡಿದ್ದು ನಾನೇ'

ಚುನಾವಣೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳಿಗೆ ಮೊದಲು ಮತದಾರರೇ ಹಣ ಕೊಟ್ಟು ಆಶೀರ್ವಾದ ಮಾಡುತ್ತಿದ್ದರು. ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಮತ ಕೇಳಬೇಕಾದರೆ ಹಣ ಕೊಡಲೇಬೇಕು. ಕ್ರಿಮಿನಲ್‍ಗಳು, ಶ್ರೀಮಂತರು, ಹೊಡಿ-ಬಡಿ ಸಂಸ್ಕೃತಿಯವರು ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ.

ಚುನಾವಣೆ ಎಂದರೆ ವ್ಯಾಪಾರ, ಹರಾಜು ಎನ್ನುವಂತಾಗಿದೆ. ಹೀಗಾಗಿ ಚುನಾವಣಾ ವ್ಯವಸ್ಥೆ ದಿಕ್ಕಾಪಾಲಾಗಿದೆ. ಮಾಧ್ಯಮದವರಂತೂ ಉದ್ಯಮಿ, ಪತ್ರಕರ್ತ, ರಾಜಕಾರಣಿ ಹೀಗೆ ಎಲ್ಲ ಪಾತ್ರ ನಿಭಾಯಿಸುವುದರಿಂದ ನಾಲ್ಕನೇ ಆಧಾರ ಸ್ಥಂಭ ಗಟ್ಟಿಯಾಗಿ ನಿಲ್ಲುವುದಾದರೂ ಹೇಗೆ?

ವಾಟಾಳ್ ನಾಗರಾಜ್ ಅವರು ಶಾಸಕರಾಗಿದ್ದಾಗ ಬೆಳಗ್ಗೆ ಬಂದರೆ ಕಲಾಪ ಮುಗಿಯುವ ವರೆಗೆ ಹೋಗುತ್ತಿರಲಿಲ್ಲ. ಸಚಿವರೇ ಈಗ ಕಲಾಪದಲ್ಲಿ ಭಾಗವಹಿಸುವುದಿಲ್ಲ. ಇನ್ನು ಶಾಸಕರಿಗೆ ಬುದ್ಧಿ ಹೇಳುವುದಾದರೂ ಹೇಗೆ? ಸಂಸದೀಯ ವ್ಯವಸ್ಥೆ ನಮ್ಮ ದೇಶಕ್ಕೆ ಹೊಸದೇನೂ ಅಲ್ಲ. ಬುದ್ಧ ಮತ್ತು ಬಸವಣ್ಣನವರ ಕಾಲದಲ್ಲಿಯೇ ಸಂಸದೀಯ ವ್ಯವಸ್ಥೆ ಇತ್ತು. ಈ ಕಾರಣಕ್ಕಾಗಿಯೇ ಬಸವಣ್ಣನವರು ಅನುಭವ ಮಂಟಪ ಸ್ಥಾಪನೆ ಮಾಡಿದರು.

 ಮೌಲ್ಯಗಳ ರಕ್ಷಣೆ ಮತ್ತು ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ಈಗ ಗಂಭೀರವಾದ ಚಿಂತನೆ ನಡೆಯಬೇಕು. ಸರ್ವಾಧಿಕಾರಿ ಮನಸ್ಥಿತಿ ನಮ್ಮಿಂದ ದೂರ ಆಗಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿ. ಕೇವಲ ರಾಜಕೀಯವಾಗಿ ಮಾತ್ರವಲ್ಲ, ಸಾಮಾಜಿಕವಾಗಿಯೂ ಪ್ರಜಾಪ್ರಭುತ್ವ ಇರಬೇಕು. ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವವನ್ನು ಪ್ರಜಾಪ್ರಭುತ್ವ ಒಳಗೊಂಡಿರಬೇಕು. ಈ ಯಾವುದೂ ಇಲ್ಲದಿದ್ದರೆ ದೇಶ ಉಳಿಯುವುದು ಕಷ್ಟ.

ಯಾವುದೇ ಬದಲಾವಣೆಗೆ ನಮ್ಮ ಸಂಪೂರ್ಣ ಸಹಮತ ಇದೆ. ಓದಿಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸಭೆ, ವಿಧಾನ ಪರಿಷತ್ತು ಮತ್ತು ಸಂಸತ್ತಿಗೆ ಆಯ್ಕೆಯಾಗಿ ಬರಬೇಕು ಎಂಬುದೇನೋ ಸರಿ. ಆದರೆ ಜಾತಿ ಭಾವನೆ ವಿದ್ಯಾವಂತರಲ್ಲಿಯೇ ಹೆಚ್ಚು. ಇದು ಅತ್ಯಂತ ಅಪಾಯಕಾರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News