ನವದೆಹಲಿ : ಕರ್ನಾಟಕದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರ ಸೇವಾ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಪರಿಶಿಷ್ಟ ಜಾತಿಗೆ ಸೇರಿದ ಕರ್ನಾಟಕದ ಮೊದಲ ಮಹಿಳಾ ಮುಖ್ಯ ಕಾರ್ಯದರ್ಶಿಯಾಗಿದ್ದ ರತ್ನಪ್ರಭಾ ಅವರು ಇದೇ ಮಾರ್ಚ್ 31ಕ್ಕೆ ಸೇವಾ ನಿವೃತ್ತಿ ಹೊಂದಬೇಕಿತ್ತು. ಆದರೆ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರತ್ನಪ್ರಭಾ ಅವರ ಸೇವಾವಧಿಯನ್ನು ಮೂರು ತಿಂಗಳುಗಳ ಕಾಲ ವಿಸ್ತರಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
ಇದೀಗ ಈ ಮನವಿಯನ್ನು ಪರಿಗಣಿಸಿರುವ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಜೂ.30ರವರೆಗೆ ರತ್ನಪ್ರಭಾ ಅವರ ಸೇವಾವಧಿಯನ್ನು ವಿಸ್ತರಿಸಲು ಅನುಮತಿ ನೀಡಿದೆ. ಇದರಿಂದಾಗಿ ಈ ಹುದ್ದೆಗೆ ಹಿರಿತನದ ಆಧಾರದ ಮೇಲೆ ಬಡ್ತಿ ಹೊಂದಲಿದ್ದ ಹಿರಿಯ ಐಎಎಸ್ ಅಧಿಕಾರಿ ಟಿ.ಎಂ.ವಿಜಯಭಾಸ್ಕರ್ ಇನ್ನು ಮೂರು ತಿಂಗಳುಗಳ ಕಾಲ ಕಾಯಬೇಕಿದೆ.
ಕೆ. ರತ್ನಪ್ರಭಾ : ಹೈದರಾಬಾದ್ ಮೂಲದ ಅಧಿಕಾರಿಯಾದ ರತ್ನಪ್ರಭಾ 1981 ರ ಐಎಎಸ್ ಬ್ಯಾಚ್ ಅಧಿಕಾರಿ. ರತ್ನಪ್ರಭಾ ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ 36 ವರ್ಷಗಳ ಅಪಾರ ಅನುಭವ ಹೊಂದಿದ್ದಾರೆ. 1981 ರಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಬೀದರ್'ನಿಂದ ತಮ್ಮ ವೃತ್ತಿಯನ್ನು ಆರಂಭಿಸಿದ ರತ್ನಪ್ರಭ ಅವರು ಪ್ರಸ್ತುತ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದಕ್ಕೂ ಮುನ್ನ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಪಾರದರ್ಶಕ ಆಡಳಿತದಿಂದ ಕೈಗಾರಿಕಾ ವಲಯದಲ್ಲಿ ಭಾರೀ ಸುಧಾರಣೆ ಕಂಡು ಬಂದಿತ್ತು. ಇವರು ನವೆಂಬರ್ 28, 2017ರಿಂದ ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.