ಸಂಪುಟ ವಿಸ್ತರಣೆಗೆ ಅಂಕಿತ ಪಡೆಯಲು ಶೀಘ್ರದಲ್ಲೇ ದೆಹಲಿಗೆ ಸಿ ಎಂ ಬೊಮ್ಮಾಯಿ

ಸಂಪುಟ ಪುನಾರಚನೆ ಕುರಿತಂತೆ ವರಿಷ್ಠರನ್ನು ಭೇಟಿ ಮಾಡಲಿರುವ ಮುಖ್ಯಮಂತ್ರಿ ಬೊಮ್ಮಾಯಿ, ಪ್ರಾಥಮಿಕವಾಗಿ 11 ಮಂದಿಯ ಪಟ್ಟಿಯನ್ನು ತಯಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

Written by - Zee Kannada News Desk | Last Updated : Jan 17, 2022, 07:43 AM IST
  • ಶೀಘ್ರದಲ್ಲೇ ದೆಹಲಿಗೆ ಸಿ ಎಂ ಬೊಮ್ಮಾಯಿ
  • ಸಂಪುಟ ವಿಸ್ತರಣೆ ಬಗ್ಗೆ ನಾಯಕರೊಂದಿಗೆ ಚರ್ಚೆ
  • ಪ್ರಾಥಮಿಕವಾಗಿ 11 ಮಂದಿಯ ಪಟ್ಟಿ ಸಿದ್ದ
ಸಂಪುಟ ವಿಸ್ತರಣೆಗೆ ಅಂಕಿತ ಪಡೆಯಲು ಶೀಘ್ರದಲ್ಲೇ ದೆಹಲಿಗೆ ಸಿ ಎಂ ಬೊಮ್ಮಾಯಿ title=
ಶೀಘ್ರದಲ್ಲೇ ದೆಹಲಿಗೆ ಸಿ ಎಂ ಬೊಮ್ಮಾಯಿ (file photo)

ಬೆಂಗಳೂರು : ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕೋವಿಡ್-19 ಎರಡನೇಯ ಪರೀಕ್ಷೆಯ ವರದಿ ನಡೆಯಲಿದ್ದು, ಕೋವಿಡ್ (COVID) ನೆಗೆಟಿವ್ ಬಂದ ಕೆಲವೇ ದಿನಗಳಲ್ಲಿ ದೆಹಲಿಗೆ ಪ್ರಯಾಣ ನಡೆಸಲು ತೀರ್ಮಾನಿಸಿದ್ದಾರೆ. ಸಂಪುಟ ವಿಸ್ತರಣೆ (Cabinet expansion) ಹಾಗೂ ಕೆಲ ನಾಯಕರನ್ನ ಸಂಪುಟದಿಂದ ಕೈಬಿಟ್ಟು ಪಕ್ಷ ಸಂಘಟನೆಗೆ  ಬಿಜೆಪಿ ಹೈಕಮಾಂಡ್ ಸಮ್ಮತಿ ಪಡೆಯಲು ದೆಹಲಿಗೆ ಹೋಗಲು ಸಿಎಂ ನಿರ್ಧರಿಸಿದ್ದಾರೆ.

ಕೋವಿಡ್ ನಿಂದ (COVID-19) ಸಂಪೂರ್ಣ ಚೇತರಿಕೆಯಾದ ನಂತರ ಬೊಮ್ಮಾಯಿ ಪಯಣ ಸಾಧ್ಯತೆ ಇದೆ.  ಸಂಪುಟ ಪುನಾರಚನೆ (Cabinet expansion) ಕುರಿತಂತೆ ವರಿಷ್ಠರನ್ನು ಭೇಟಿ ಮಾಡಲಿರುವ ಮುಖ್ಯಮಂತ್ರಿ ಬೊಮ್ಮಾಯಿ (Basavaraj Bommai), ಪ್ರಾಥಮಿಕವಾಗಿ 11 ಮಂದಿಯ ಪಟ್ಟಿಯನ್ನು ತಯಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಒಂದೇ ದಿನದಲ್ಲಿ 34 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲು..!

ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆಯಲು ಮುಖ್ಯಮಂತ್ರಿ ಪ್ರಯತ್ನ ಮಾಡುತ್ತಿದ್ದು, ವರಿಷ್ಠರಿಂದ ಅನುಮತಿ ಸಿಕ್ಕರೆ ಶಿವರಾತ್ರಿಯೊಳಗೆ ಸಂಪುಟ ಪುನಾರಚನೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಇದರ ಜತೆಗೆ 6 ರಿಂದ 7 ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೂಡಾ ಕೇಳಿಬರುತ್ತಿವೆ.

ಸದ್ಯ ನಾಲ್ಕು ಖಾತೆಗಳ ಭರ್ತಿಗೆ ಸಿಎಂ ಬೊಮ್ಮಾಯಿ ಚಿಂತನೆ ಮಾಡುತ್ತಿದ್ದಾರೆ. ಸಂಪುಟ ವಿಳಂಬಕ್ಕೆ ಶಾಸಕರ ಅಸಮಾಧಾನ ಭುಗಿಲೆದ್ದಿದೆ. ಹೀಗಾಗಿ ಸಂಪುಟ ಪುನಾರಚನೆ ಮಾಡಿದರೆ ಸಮಸ್ಯೆಗೆ ಸಮಾಧಾನ ಕಲ್ಪಿಸಬಹುದು. ಹಾಗೂ 2023ರ ಚುನಾವಣೆಗೆ ತಯಾರಿ ಮಾಡಿಕೊಳ್ಳಬಹುದೆಂಬ ಲೆಕ್ಕಾಚಾರವನ್ನ ರಾಜ್ಯ ಬಿಜೆಪಿ (BJP) ಮುಂದಿಟ್ಟಿದೆ.

ಇದನ್ನೂ ಓದಿ : ವೃದ್ಧೆಗೆ ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ

ಶಾಸಕರಾದ ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ್ ಎಂ.ಪಿ.ರೇಣುಕಾಚಾರ್ಯ, ಉಪಸಭಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ರಾಜ್ ಕುಮಾರ್ ಪಾಟೀಲ್ ಸೇಡಂ, ಪೂರ್ಣಿಮಾ ಶ್ರೀನಿವಾಸ್, ರಾಮದಾಸ್, ಪ್ರೀತಂಗೌಡ, ರಾಜುಗೌಡ, ಶಿವನಗೌಡ ನಾಯಕ್, ತಿಪ್ಪಾರೆಡ್ಡಿ ,ರಾಮಣ್ಣ ಲಮಾಣಿ ಸೇರಿ ಹಲವರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಇದಲ್ಲದೆ ಬೆಳಗಾವಿ ಸಾಹುಕಾರ ಎಂದೇ ಹೆಸರು ಪಡೆದಿರುವ ಶಾಸಕ ರಮೇಶ್ ಜಾರಕಿಹೊಳಿ (Ramesh Jarakiholi) ತಮ್ಮ ಅಪ್ತ ಮಹೇಶ್ ಕುಮಟೊಳ್ಳಿಗೆ ಸಚಿವ ಸ್ಥಾನ ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ರಮೇಶ್ ಜಾರಕಿಹೊಳಿ ಈಗಾಗಲೇ RSS ಮುಖಂಡರನ್ನ ಭೇಟಿಯಾಗಿದ್ದಾರೆ.

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ COVID-19 ಪರೀಕ್ಷಾ ವರದಿ ಬರಲಿದೆ. ಸದ್ಯ ಸಿ ಎಂ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಒಂದು ವೇಳೆ ನೆಗೆಟಿವ್ ಬಂದರೆ ಇನ್ನುಳಿದ ಒಂದು ವಾರದ home isolation ಅವಧಿ ಮುಗಿಸಿ, ಡೆಲ್ಲಿಗೆ ಪ್ರಯಾಣ ಮಾಡಲಿದ್ದಾರೆ ಎಂದು ಸಿಎಂ ಆಪ್ತ ವಲಯ ತಿಳಿಸಿದೆ.

ಇದನ್ನೂ ಓದಿ : ನಾರಾಯಣ ಗುರುಗಳಿಗೆ ಮಾಡಿರುವ ಅವಮಾನಕ್ಕಾಗಿ ಕೇಂದ್ರ ಸರ್ಕಾರ ದೇಶದ ಕ್ಷಮೆ ಕೇಳಬೇಕು-ಸಿದ್ಧರಾಮಯ್ಯ

ಒಟ್ಟಿನಲ್ಲಿ ನಡೆಸುತ್ತಿರುವ ಸಂಪುಟ ವಿಸ್ತರಣೆ ತಾಲೀಮು, 2023 ರ ಚುನಾವಣೆಗೆ ಬುನಾದಿ ಆಗಲಿದೆ. ಹೊಸ ನಾಯಕರಿಗೆ ಪಕ್ಷ ಅವಕಾಶ ನೀಡಲಿದೆಯಾ, ಅಥವಾ ಭುಗಿಲೆದ್ದ ಅಸಮಾಧಾನ ಶಮನಗೊಳ್ಳಲಿದೆಯಾ ಎಂದು ಕಾದುನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News