ನಮ್ಮದು ಸ್ಥಿರ ಸರ್ಕಾರ; ರಾಹುಲ್ ಭೇಟಿ ಬಳಿಕ ದಿನೇಶ್ ಗುಂಡೂರಾವ್

ಕಾಂಗ್ರೆಸ್ ನಾಯಕರು ಯಾವುದೇ ರೀತಿಯ ಟೀಕೆಗಳನ್ನು ಮಾಡಬಾರದು ಎಂದು ಸೂಚಿಸಿರುವ ಹೈಕಮಾಂಡ್.

Updated: May 19, 2019 , 03:19 PM IST
ನಮ್ಮದು ಸ್ಥಿರ ಸರ್ಕಾರ; ರಾಹುಲ್ ಭೇಟಿ ಬಳಿಕ ದಿನೇಶ್ ಗುಂಡೂರಾವ್
File Image

ನವದೆಹಲಿ: ನಮ್ಮದು ಸ್ಥಿರ ಸರ್ಕಾರ, ಈ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನವದೆಹಲಿಯಲ್ಲಿಂದು ತಿಳಿಸಿದ್ದಾರೆ.

ದೆಹಲಿಯ ತುಘಲಕ್ ಮಾರ್ಗದಲ್ಲಿರುವ ರಾಹುಲ್ ಗಾಂಧಿ ನಿವಾಸದಲ್ಲಿ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಹಾಗೂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ರಾಜ್ಯದ ಮೈತ್ರಿ ಸರ್ಕಾರದ ಸ್ಥಿತಿಗತಿ ಬಗ್ಗೆ  ಜೊತೆಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ನಮ್ಮದು ಸ್ಥಿರ ಸರ್ಕಾರ, ಈ ಬಗ್ಗೆ ಯಾವುದೇ ಅನುಮಾನ ಇಲ್ಲ. ಎರಡು ಕ್ಷೇತ್ರಗಳ ಉಪ ಚುನಾವಣೆ ಗೆಲ್ಲುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ಯಾವುದೇ ರೀತಿಯ ಟೀಕೆಗಳನ್ನು ಮಾಡಬಾರದು ಎಂದು ಖಡಕ್ ಸಂದೇಶ ರವಾನಿಸಿರುವ ಕಾಂಗ್ರೆಸ್ ಹೈಕಮಾಂಡ್, ಮೈತ್ರಿ ಕುರಿತು ಪಕ್ಷದ ನಾಯಕರಿಂದ ಭಿನ್ನಾಭಿಪ್ರಾಯ ಸಹಿಸಲು ಸಾಧ್ಯವಿಲ್ಲ. ಪಕ್ಷದಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಅಗತ್ಯ, ಶಿಸ್ತು ಉಲ್ಲಂಘಿಸುವ ನಾಯಕರಿಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ.

ರಾಹುಲ್ ಗಾಂಧಿಯವರೊಂದಿಗಿನ ಭೇಟಿ ವೇಳೆ ರಾಜ್ಯದ ರಾಜ್ಯದ ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಮಾಡಲಾಗಿದೆ. ಅಂತೆಯೇ ರಾಜ್ಯದ ಮೈತ್ರಿ ಸರ್ಕಾರದ ಸ್ಥಿತಿಗತಿ ಬಗ್ಗೆ ಸಮಾಲೋಚನೆಯನ್ನು ನಡೆಸಲಾಗಿದ್ದು, ಜೆಡಿಎಸ್ ಜೊತೆಗಿನ ಭಿನ್ನಾಭಿಪ್ರಾಯದ ಕುರಿತು ಪ್ರಸ್ತಾಪಿಸಲಾಗಿದೆ. ಈ ವೇಳೆ ಮೈತ್ರಿ ಸರ್ಕಾರ ಸುಸೂತ್ರವಾಗಿ ಮುಂದುವರೆಯುವ ನಿಟ್ಟಿನಲ್ಲಿ ಯಾವುದೇ ವ್ಯತಿರಿಕ್ತ ಹೇಳಿಕೆ ನೀಡದಂತೆ ರಾಹುಲ್ ರಾಜ್ಯ ನಾಯಕರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.