ಎಲ್ಲೆಲ್ಲೂ ಕೊರೋನಾ ಭೀತಿ: ಇಂದಿನಿಂದ ಒಂದು ವಾರ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ?

ಇಡೀ ರಾಜ್ಯದಲ್ಲಿ ಇಂದಿನಿಂದ ಮುಂದಿನ ಒಂದು ವಾರದ ಮಟ್ಟಿಗೆ ಹಲವು ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ.

Written by - Yashaswini V | Last Updated : Mar 14, 2020, 07:34 AM IST
ಎಲ್ಲೆಲ್ಲೂ ಕೊರೋನಾ ಭೀತಿ: ಇಂದಿನಿಂದ ಒಂದು ವಾರ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ? title=

ಬೆಂಗಳೂರು: ಮಾರಣಾಂತಿಕ ಕೊರೋನಾ ಭೀತಿಗೆ ಎಲ್ಲೆಲ್ಲೂ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಇನ್ನು ಕೊರೋನಾ ವೈರಸ್ ನಿಂದಾಗಿ ರಾಜ್ಯದ ಕಲಬುರ್ಗಿಯ ವ್ಯಕ್ತಿ ಮೃತ ಪಟ್ಟಿದ್ದಾರೆ. ಇದು ಇಡೀ ದೇಶದಲ್ಲೇ ಕೊರೋನಾಗೆ ಮೊದಲ ಬಲಿಯಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಮಹಾಮಾರಿ ಕೊರೊನಾವೈರಸ್‌ನ(Coronavirus)   ಕುರಿತಂತೆ ಅರೋಗ್ಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿನಿಂದ ಮುಂದಿನ ಒಂದು ವಾರದ ಮಟ್ಟಿಗೆ ಹಲವು ನಿರ್ಬಂಧಗಳನ್ನು ಜಾರಿಗೆ ಬರುವಂತೆ ತಾತ್ಕಾಲಿಕ ನಿಯಮಾವಳಿಗಳನ್ನು ಹೊರಡಿಸುತ್ತಾ, ಕಾಯಿಲೆ ಸ್ಫೋಟ ಮತ್ತು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ. ಪರಿಸ್ಥಿತಿ ಪರಿಶೀಲಿಸಿ ಮುಂದಿನ ತೀರ್ಮಾನ ಕೈಗೊಳ್ಳುವವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ. ಒಂದು ವಾರದ ಬೆಳವಣಿಗೆಯನ್ನು ಗಮನಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಲಾಗಿದೆ.

ಇಂದಿನಿಂದ ಒಂದು ವಾರ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ?

ಏನಿದೆ?
* ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

* ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಯಾವುದೇ ತೊಂದರೆ ಇಲ್ಲ.

* ನಿತ್ಯ ಬಳಕೆ ವಸ್ತುಗಳು ಲಭ್ಯ.

* ನಿಗದಿತ ಪರೀಕ್ಷೆಗಳನ್ನು ಸೂಕ್ತ ಮುಂಜಾಗೃತಾ ಕ್ರಮದಿಂದ ನಡೆಸುವುದು.

ಏನಿಲ್ಲ?
* ಇಂದಿನಿಂದ ಒಂದು ವಾರಗಳ ಕಾಲ ಶಾಲಾ-ಕಾಲೇಜು ಮತ್ತು ವಿಶ್ವ ವಿದ್ಯಾಲಯಗಳು, ಕೋಚಿಂಗ್ ಸೆಂಟರ್ ಗಳನ್ನು ಮುಚ್ಚಲಾಗುವುದು.

* ಸರ್ಕಾರದ ಎಲ್ಲಾ ಕಾರ್ಯಕ್ರಮಗಳು ನಿಷೇಧ.

* ಹೆಚ್ಚು ಜನರು ಬಳಸುವು ಸ್ವಿಮ್ಮಿಂಗ್ ಫೂಲ್ಸ್, ಜಿಮ್ ಮುಂತಾದವುಗಳು ಬಂದ್.

* ಐಟಿ, ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ನಿರ್ದೇಶನ.

* ಮದುವೆ, ಗೃಹ ಪ್ರವೇಶ, ಜಾತ್ರೆ ಸೇರಿದಂತೆ ಹೆಚ್ಚಿನ ಜನ ಸೇರುವಂತಹ ಎಲ್ಲಾ ಕಾರ್ಯಕ್ರಮಗಳಿಗೂ ನಿಷೇಧ.

* ಒಂದು ವಾರಗಳ ಕಾಲ ಮಾಲ್, ಸಿನಿಮಾ ಹಾಲ್, ಪಬ್, ಬಾರ್ ಬಂದ್.

* ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ವೀಕ್ಷಿಸುವ ಕ್ರೀಡಾ ಕೂಟಗಳಾದ ಕ್ರಿಕೆಟ್, ಫುಟ್ಬಾಲ್, ಬಾಸ್ಕೆಟ್ ಬಾಳ್, ಹಾಕಿ ಸೇರಿದಂತೆ ಹಲವು ಕ್ರೀಡಾಕೂಟಗಳನ್ನು ನಡೆಸದಂತೆ ಸೂಚನೆ.

* ಜನರು ಹೆಚ್ಚಾಗಿ ಗುಂಪು ಗುಂಪಾಗಿ ಸೇರದಂತೆ, ಯಾರೂ ಕೈ ಕುಲುಕದಂತೆ ಎಚ್ಚರಿಕೆ ವಹಿಸಲು ನಿರ್ದೆಶನ.

Trending News