ಧಾರವಾಡ: ಕೋವಿಡ್-19 ರ ಮೊದಲ ಅಲೆ ಬಂದಾಗ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲಾಗುತ್ತಿದ್ದರು. 2ನೇ ಅಲೆ ಬಂದಾಗ ಆಸ್ಪತ್ರೆಗಳಿಗೆ ಹೆಚ್ಚು ಸೋಂಕಿತರು ದಾಖಲಾದರು. ಈಗ 3ನೇ ಅಲೆ ಬಂದಿದ್ದು, ಸೋಂಕಿನ ತೀವೃತೆ ಕಡಿಮೆ ಇರುವುದರಿಂದ 94% ರಿಂದ 95% ಜನ ಸೋಂಕಿತರು ಹೋಮ್ ಐಸೋಲೇಷನ್ ಆಗುತ್ತಿದ್ದಾರೆ.
ಇದನ್ನೂ ಓದಿ: Watch: ಉಲ್ಟಾ ಬ್ಲೌಸ್ ಧರಿಸಿ ಸುದ್ದಿಯಾದ ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್..!
ಹೋಮ್ ಐಸೋಲೇಷನ್ದಲ್ಲಿರುವ ಸೋಂಕಿತರು ಮಾರ್ಗಸೂಚಿಗಳ ಪಾಲನೆಯೊಂದಿಗೆ ಆರೋಗ್ಯವಂತರಾಗಿ, ರೋಗದಿಂದ ಗುಣಮುಖರಾಗಲು ಧಾರವಾಡ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ಹೊಸ ಉಪಾಯ ಹುಡುಕಿ, ಅನುಷ್ಠಾನಗೊಳಿಸಿವೆ. ಅದುವೇ “ಸೋಂಕಿತರ ಮನೆ ಬಾಗಿಲಿಗೆ ಔಷಧಿ ಕಿಟ್” ವಿತರಣೆ. ಕಳೆದ ಮೂರ್ನಾಲ್ಕು ದಿನಗಳಿಂದ ಇದು ಉತ್ತಮ ರೀತಿಯಿಂದ ಅನುಷ್ಠಾನವಾಗುತ್ತಿದೆ.
ಮನೆ ಬಾಗಿಲಿಗೆ ಏಕೆ ವಿತರಣೆ : ಕೋವಿಡ್ ಸೋಂಕಿತ ವ್ಯಕ್ತಿ ಸಾರ್ವಜನಿಕವಾಗಿ ಸಂಚರಿಸುವುದರಿಂದ ರೋಗ ಇತರರಿಗೂ ಬೇಗ ಹರಡುತ್ತದೆ. ಕೆಮ್ಮು, ನೆಗಡಿ, ಜ್ವರ ಇವುಗಳಿಂದ ಪರಸ್ಪರರಿಗೆ ಬೇಗ ತಗಲುವ ಸಾಧ್ಯತೆ ಇರುತ್ತದೆ.
ಸೋಂಕಿತ ವ್ಯಕ್ತಿಯು ಸಾರ್ವಜನಿಕವಾಗಿ, ಅನಗತ್ಯವಾಗಿ ಸಂಚರಿಸುವುದನ್ನು ನಿಯಂತ್ರಿಸಲು, ಚಿಕಿತ್ಸೆ, ಔಷಧಿ ಹಾಗೂ ಆಸ್ಪತ್ರೆಗಳಿಗೆ ಅಲೆಯದಂತೆ ಮಾಡಲು ಔಷಧಿ ಕಿಟ್ಗಳನ್ನು ಸೋಂಕಿತರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಮತ್ತು ಸೋಂಕಿತನ ಕುಟುಂಬವನ್ನು ಜಾಗೃತಗೊಳಿಸಲಾಗುತ್ತದೆ.
ಔಷಧಿ ಕಿಟ್ ಹೇಗೆ ಪಡೆಯುವುದು : ಮಹಾನಗರ ಪಾಲಿಕೆಯಲ್ಲಿ ಕೋವಿಡ್ ಸೋಂಕಿತರಿಗೆ ಔಷಧಿ ವಿತರಣೆಗಾಗಿ ಸಹಾಯವಾಣಿ ಆರಂಭಿಸಲಾಗಿದೆ. ದಿನದ 24 ಗಂಟೆಯೂ ಮೂರು ಶಿಫ್ಟ್ ಮೇಲೆ ಸಿಬ್ಬಂದಿಗಳು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಮಹಾನಗರದ ಯಾವುದೇ ಭಾಗದಿಂದ ಕೋವಿಡ್ ಸೋಂಕಿತರು ಔಷಧಿ ಕಿಟ್ ಕೇಳಿ ಕರೆ ಮಾಡಿದರೆ, ತಕ್ಷಣ ಸಂಬಂಧಿತ ವಲಯ ಕಚೇರಿ ಮೂಲಕ ಆಯಾ ವಾರ್ಡ್ನಲ್ಲಿರುವ ಸೋಂಕಿತರ ಮನೆ ಬಾಗಿಲಿಗೆ ಔಷಧಿ ತಲುಪಿಸಲಾಗುತ್ತಿದೆ. ಮತ್ತು ಸೋಂಕು ದೃಢಪಟ್ಟ ಪ್ರತಿಯೊಬ್ಬರ ಮನೆಗೂ ಔಷಧಿ ಕಿಟ್ ತಲುಪಿಸಲಾಗುತ್ತದೆ. ರಾತ್ರಿಯೂ ಸಹ ಈ ಸೇವೆ ಲಭ್ಯವಿದೆ.ಗ್ರಾಮೀಣ ಪ್ರದೇಶದಲ್ಲೂ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕಾ ಆಸ್ಪತ್ರೆಗಳಿಂದ ಔಷಧಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ಔಷಧಿ ಕಿಟ್ ವಿತರಕರು : ಔಷಧಿ ಕಿಟ್ ವಿತರಣೆಗಾಗಿ ಸುಮಾರು 30 ಕ್ಕೂ ಹೆಚ್ಚು ವಾಹನಗಳನ್ನು ಸಿದ್ಧಗೊಳಿಸಲಾಗಿದೆ. ಪಾಲಿಕೆಯ ಪ್ರತಿ ವಲಯಕ್ಕೆ 2 ರಿಂದ 3 ವಾಹನ ನೀಡಲಾಗಿದೆ. ಪ್ರತಿ ತಂಡದಲ್ಲಿ ಹೆಲ್ತ್ ಇನ್ಸ್ಪೆಕ್ಟರ್, ಬಿಲ್ ಕಲೆಕ್ಟರ್ ಮತ್ತು ಅಗತ್ಯವಿದ್ದಲ್ಲಿ ಆರೋಗ್ಯ ಸಿಬ್ಬಂದಿ ಇರುತ್ತಾರೆ.
ಸೋಂಕು ದೃಢಪಟ್ಟ ವ್ಯಕ್ತಿಗೆ ಮತ್ತು ಕರೆ ಮಾಡಿದ ಸೋಂಕಿತರ ಮನೆಗೆ ತಂಡವು ಭೇಟಿ ನೀಡಿ, ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ಕಿಟ್ ನೀಡಿ, ಸೋಂಕಿತನ ಆರೋಗ್ಯ ವಿಚಾರಿಸುತ್ತದೆ. ಹೋಮ್ ಐಸೋಲೇಷನ್ ಮಾರ್ಗಸೂಚಿಗಳನ್ನು ವಿವರಿಸಿ, ಸೋಂಕಿತರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ ಅವರನ್ನು ಎಜ್ಯುಕೇಟ್ ಮಾಡುತ್ತದೆ. ಆಪ್ತ ಸಮಾಲೋಚನೆ ಮೂಲಕ ಧೈರ್ಯ, ಆತ್ಮವಿಶ್ವಾಸ ಮೂಡಿಸುತ್ತದೆ.
ಇದನ್ನೂ ಓದಿ : Gold price today : ಚಿನ್ನಾಭರಣ ಪ್ರಿಯರ ಗಮನಕ್ಕೆ : ಇಂದು ಮತ್ತೆ ಚಿನ್ನ - ಬೆಳ್ಳಿ ಬೆಲೆ ಏರಿಕೆ
ಸೋಂಕಿತ ಮಕ್ಕಳಿಗಾಗಿ ವಿಶೇಷ ತಂಡ : ಕೋವಿಡ್ 3ನೇ ಅಲೆಯು ಮಕ್ಕಳನ್ನು ಬಾಧಿಸುತ್ತಿದ್ದು, ಜಿಲ್ಲೆಯ ಹಲವಾರು ಮಕ್ಕಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಮತ್ತು ಸೋಂಕಿತ ಮಕ್ಕಳಿಗೆ ಅಗತ್ಯ ಚಿಕಿತ್ಸೆ, ಔಷಧಿ ನೀಡಿ ಅವರನ್ನು ಗುಣಮುಖರನ್ನಾಗಿ ಮಾಡಲಾಗಿದೆ.ಕೋವಿಡ್ ಸೋಂಕು ದೃಢಪಟ್ಟ ಮಕ್ಕಳಿಗೆ ವಿಶೇಷ ಕಾಳಜಿ ವಹಿಸಲು ಈಗ ಮಕ್ಕಳ ವೈದ್ಯರಿರುವ ಏಳು ವಿಶೇಷ ತಂಡಗಳನ್ನು ರಚಿಸಲಾಗಿದೆ.ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ನೇಮಕಗೊಂಡಿರುವ ವೈದ್ಯರು ಈ ವಿಶೇಷ ತಂಡದಲ್ಲಿದ್ದು, ಅವರು ಮಕ್ಕಳಿಗೆ ಆಪ್ತ ಸಮಾಲೋಚನೆ ಮಾಡಿ, ನಿಯಮಿತ ಆಹಾರ, ಔಷಧಿ ಪ್ರಮಾಣ, ವ್ಯಾಯಾಮ ಕುರಿತು ತಿಳುವಳಿಕೆ ನೀಡುತ್ತಾರೆ. ಇಂತಹ ಮಕ್ಕಳ ಬಗ್ಗೆ ಜಾಗೃತಿ ವಹಿಸುವ ಮತ್ತು ಕಾಲಕಾಲಕ್ಕೆ ಮುಂಜಾಗೃತೆ ವಹಿಸುವ ವಿಷಯಗಳ ಕುರಿತು ಪಾಲಕರಿಗೂ ಸಹ ಏಜ್ಯುಕೇಟ್ ಮಾಡುತ್ತಾರೆ.
ಔಷಧಿ ಕಿಟ್ ವಿತರಣೆಗೆ ಕ್ರಮ : ಔಷಧಿ ಕಿಟ್ಗಳನ್ನು ಸೋಂಕಿತರಿಗೆ ಹಾಗೂ ಕೋವಿಡ್ ಪರೀಕ್ಷೆ ಬಂದಿರುವ, ಲಕ್ಷಣಗಳಿರುವ ವ್ಯಕ್ತಿಗೂ ಸಹ ನೀಡಲಾಗುತ್ತಿದೆ. ಔಷಧಿ ಕಿಟ್ಗಳನ್ನು ಸಿದ್ದಗೊಳ್ಳಿಸಿ ವಿತರಣೆಗಾಗಿ ಮಹಾನಗರ ಪಾಲಿಕೆ ಹಾಗೂ ವಿವಿಧ ಆಸ್ಪತ್ರೆಗಳಿಗೆ ನೀಡಲಾಗಿದೆ. ಜಿಲ್ಲಾಡಳಿತ ಹೋಮ್ ಐಸೋಲೇಷನ್ ಆಗುವವರಿಗೆ ಔಷಧಿ ಕಿಟ್ ತಲುಪಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಅಗತ್ಯವಾಗಬಹುದಾದ ಔಷಧಿಗಳ ದಾಸ್ತಾನು ಸಹ ಹೊಂದಿದ್ದು, ಎಲ್ಲಾ ಪಿಎಚ್ಸಿ ತಾಲೂಕಾ ಅಸ್ಪತ್ರೆಗಳಿಗೆ ಮತ್ತು ಜಿಲ್ಲಾ ಆಸ್ಪತ್ರೆಗೆ ಈಗಾಗಲೇ ಔಷಧಿಗಳನ್ನು ವಿತರಿಸಿ ಸ್ಟಾಕ್ ಹೊಂದಿಸಲಾಗಿದೆ. ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು, ಸೋಂಕಿತರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆಯುಕ್ತರ ಮನವಿ : ಮಹಾನಗರ ವ್ಯಾಪ್ತಿಯಲ್ಲಿ ಸೋಂಕು ನಿಯಂತ್ರಣಕ್ಕೆ ಮೊದಲು ಸೋಂಕಿತರ ಸಂಚಾರ ನಿಯಂತ್ರಣ ಮತ್ತು ಅವರ ಸಹಕಾರ ಬೇಕು. ಸೋಂಕಿತರ ಮನೆ ಬಾಗಿಲಿಗೆ ಔಷಧಿ ತಲುಪಿಸಿ, ಆರೋಗ್ಯ ಸೇವೆ ನೀಡುತ್ತಿದ್ದೇವೆ. ಪಾಲಿಕೆಯ ಸಹಾಯವಾಣಿಗೆ ಕರೆ ಮಾಡಿ ಸೋಂಕಿತರು ಔಷಧಿ, ಆಸ್ಪತ್ರೆ ಅಥವಾ ಕೋವಿಡ್ ಕೇರ್ ಸೆಂಟರ್ಗೆ ದಾಖಲಾಗುವ ಬಗ್ಗೆ ಕೇಳಿದಲ್ಲಿ ತಕ್ಷಣ ಅಗತ್ಯವಿರುವ ಸೇವೆ ನೀಡಲು ಪಾಲಿಕೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಇದನ್ನೂ ಓದಿ: Watch: ಉಲ್ಟಾ ಬ್ಲೌಸ್ ಧರಿಸಿ ಸುದ್ದಿಯಾದ ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್..!
ಹೋಮ್ ಐಸೋಲೇಷನ್ ಆಗಿರುವ ಸೋಂಕಿತರು ಸರ್ಕಾರ ನೀಡಿರುವ ಹೋಮ್ ಐಸೋಲೇಷನ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸಹಕಾರ ನೀಡಬೇಕು. ಮನೆ ಬಾಗಿಲಿಗೆ ತಲುಪಿಸುವ ಔಷಧಿ ಕಿಟ್ ಬಳಸಿಕೊಂಡು ಸೋಂಕು ನೆಗೆಟಿವ್ ಆಗುವವರೆಗೆ ಸುರಕ್ಷಿತವಾಗಿ ಮನೆಯಲ್ಲಿರಬೇಕೆಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಅವರು ತಿಳಿಸಿದ್ದಾರೆ.
ಸೋಂಕಿತರಿಗೆ ಔಷಧಿ ಕಿಟ್ ಪಡೆಯಲು ಸಹಾಯವಾಣಿ : ಮಹಾನಗರ ಪಾಲಿಕೆಯಲ್ಲಿ ತೆರೆಯಲಾದ ಸಹಾಯವಾಣಿ ಸಂಖ್ಯೆ : 0836-2213803 ಹಾಗೂ 08362213806 ಮತ್ತು ಮೊಬೈಲ್ ಸಂಖ್ಯೆ: 9141051611 ಗೆ ಕರೆ ಮಾಡಿ ಔಷಧಿ ಕಿಟ್ ಅಗತ್ಯವಿರುವ ಕುರಿತು ತಿಳಿಸಬಹುದು. ದಿನದ 24 ಗಂಟೆ ಇದು ಕಾರ್ಯನಿರ್ವಹಿಸುತ್ತದೆ ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.