ಕನ್ನಡಿಗರಿಗೆ ಭರ್ಜರಿ ಸಿಹಿಸುದ್ದಿ!

ಬದಲಾಗುತ್ತಿರುವ ವಾತಾವಾರಣದಲ್ಲಿ ನಾಡಿನ ಆರ್ಥಿಕತೆಗೆ ಶಕ್ತಿ ತುಂಬಿ, ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರದ ಉದ್ದೇಶ; ಉಪಮುಖ್ಯಮಂತ್ರಿ ಡಾ. ಸಿಎನ್‌ ಅಶ್ವತ್ಥನಾರಾಯಣ 

Last Updated : Dec 16, 2019, 03:29 PM IST
ಕನ್ನಡಿಗರಿಗೆ ಭರ್ಜರಿ ಸಿಹಿಸುದ್ದಿ! title=

ಬೆಂಗಳೂರು: ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ನಮ್ಮ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡು ಶೀಘ್ರದಲ್ಲೇ ಪರಿಣಾಮಕಾರಿ ಪರಿಹಾರ ಒದಗಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ(Dr CN Ashwathnarayan) ಹೇಳಿದ್ದಾರೆ. 

ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಬೆಂಗಳೂರಿನಲ್ಲಿ ನಡೆಸುತ್ತಿರುವ ಸತ್ಯಾಗ್ರಹದ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಸಚಿವರು, ಅಹವಾಲು  ಸ್ವೀಕರಿಸಿ ಮಾತನಾಡಿದರು. "ಡಾ. ಸರೋಜಿನಿ ಮಹಿಷಿ ಆಯೋಗದ ವರದಿಯಂತೆ  ಸಿ ಮತ್ತು ಡಿ ದರ್ಜೆಯಲ್ಲಿ ಕನ್ನಡಿಗರಿಗೆ 80%  ಉದ್ಯೋಗ ಮೀಸಲು ಕಡ್ಡಾಯ.  ಆದರೆ, ಎ ಮತ್ತು ಬಿ ದರ್ಜೆಯಲ್ಲಿ ಇದನ್ನು ಕಡ್ಡಾಯ ಮಾಡುವುದು ಸವಾಲಿನ ವಿಷಯ. ಆದರೆ, ನಾಡಿನ ಜನರಿಗೆ ಉದ್ಯೋಗ ದೊರೆತು, ಬದುಕು ಕಟ್ಟಿಕೊಳ್ಳಲೇ ಬೇಕು. ಪ್ರತಿ ಕುಟುಂಬಕ್ಕೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿಯಾಗಿದ್ದು ಇದಕ್ಕೆ ನಾವು ಬದ್ಧ,'' ಎಂದರು. 

"ಬದಲಾಗುತ್ತಿರುವ ವಾತಾವಾರಣದಲ್ಲಿ ನಾಡಿನ ಆರ್ಥಿಕತೆಗೆ ಶಕ್ತಿ ತುಂಬಿ, ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರದ ಉದ್ದೇಶ. ವ್ಯಾಪಾರ, ವ್ಯವಹಾರದಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ.  ಜಾಗತಿಕರಣ ಹಾಗೂ ಆರ್ಥಿಕ ಹಿಂಜರಿತ ಮುಂತಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಕಂಡುಕೊಳ್ಳಲು ಸಜ್ಜಾಗಿದ್ದೇವೆ," ಎಂದು ಅವರು ಹೇಳಿದರು. 

"ಉನ್ನತ ಶಿಕ್ಷಣ ಸಚಿವನಾಗಿ,  ಜನಪ್ರತಿನಿಧಿಯಾಗಿ ಮುಖ್ಯವಾಗಿ  ಕನ್ನಡಿಗನಾಗಿ  ಭುವನೇಶ್ವರಿ ತಾಯಿಯ ಮಕ್ಕಳಿಗೆ ಒಳ್ಳೆಯ ಸ್ಥಾನಮಾನ ಕೊಡಿಸುವ ಅವಕಾಶ ಒದಗಿದೆ. ನಮ್ಮ ಜನರಿಗೆ ಸಲ್ಲಬೇಕಾದ್ದನ್ನು ಕೊಡಿಸಲು ಬದ್ಧ.  ಈ ಸಮಸ್ಯೆ ಬಗೆಹರಿಸಲು  ಪರಿಣಾಮಕಾರಿ  ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು," ಎಂದು ಅವರು ಭರವಸೆ ನೀಡಿದರು.

ಪರಿಹಾರ ಕ್ರಮ:
"ಉದ್ಯೋಗಾಕಾಂಕ್ಷಿಗಳ ಕೌಶಲ್ಯ ಹೆಚ್ಚಿಸಲು ಎಲ್ಲ ಏಜೆನ್ಸಿಗಳನ್ನು ಒಂದೇ ವೇದಿಕೆಗೆ ತಂದು ಏಕ ಗವಾಕ್ಷಿ ಯೋಜನೆಯಡಿ ಉದ್ಯೋಗ ಕೌಶಲ್ಯ ಕಲಿಸಲು ಸರ್ಕಾರ ಕಾರ್ಯ ಪ್ರವೃತ್ತವಾಗಿದೆ. ಈ ಮೂಲಕ ಉದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದೇ ದಾರಿಯಲ್ಲಿ ಶಿಕ್ಷಣ ಸಂಸ್ಥೆಗಳು ಸಹ ವಿದ್ಯಾರ್ಥಿಗಳಿಗೆ ಅವರ ಮುಂದಿನ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ಕಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎಲ್ಲಿ , ಯಾವ ರೀತಿಯ ಉದ್ಯೋಗ ಇದೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಹಾಗಾಗಿ ಈ ವೇದಿಕೆಯನ್ನು ತರಲಾಗಿದೆ,'' ಎಂದರು.

"ಉದ್ಯೋಗಕ್ಕೆ ಬೇಕಿರುವ ಎಲ್ಲ ಕೌಶಲ್ಯವನ್ನು ಕಲಿಕೆ ವೇಳೆಯಲ್ಲೇ ಕಲಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ.  ವಿದ್ಯಾಭ್ಯಾಸದ ವೇಳೆಯಲ್ಲೇ  ಪ್ರಾಜೆಕ್ಟ್‌, ಇಂಟರ್ನ್‌ಶಿಪ್,‌ ಅಪ್ರೆಂಟಿಶಿಪ್‌ ಮಾಡಲು ಅವಕಾಶ ಮಾಡಿಕೊಲಾಗುತ್ತದೆ.  ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಕಂಪನಿಗಳ ಜತೆ  ಸಂಬಂಧ ಬೆಸೆಯಲಾಗುತ್ತಿದೆ. ಓದು ಮುಗಿದ ನಂತರ ಕೆಲಸ ಹುಡುಕುವ ಬದಲಿಗೆ ಕಲಿಕೆ ವೇಳೆಯಲ್ಲಿ ಉದ್ಯೋಗಾವಕಾಶ  ಪಡೆಯಬಹುದು,'' ಎಂದು ವಿವರಿಸಿದರು. 

"ಎಲ್ಲಿಂದಲೋ ಬಂದವರು ಇಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ  ಇಲ್ಲಿಯವರು  ಇಲ್ಲಿನ  ಕಂಪನಿಗಳ  ಜತೆ ಸಂಪರ್ಕ ಬೆಳೆಸಿಕೊಳ್ಳಲು ಪೂರಕ ಕ್ರಮಗಳನ್ನು ಕೈಗೊಂಡಿದ್ದೇವೆ.  ಸಂಪರ್ಕದ ಕೊರತೆಯ ಸಣ್ಣ ಸಮಸ್ಯೆಯೇ ದೊಡ್ಡ ಸಮಸ್ಯೆ ಆಗಿ ಕಾಡುತ್ತಿತ್ತು. ಈಗ ಅದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ.  ಓದುವ ಸಂದರ್ಭದಲ್ಲೇ ಉದ್ಯೋಗಾವಕಾಶದ ಮಾಹಿತಿ ಮತ್ತು ಅಗತ್ಯ ತರಬೇತಿ ಮತ್ತು ವೃತ್ತಿ ಪರ ಅವಕಾಶ ಸೃಷ್ಟಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ," ಎಂದು ಡಿಸಿಎಂ ತಿಳಿಸಿದರು.

Trending News