ಡಿನೋಟಿಫಿಕೇಶನ್ ಪ್ರಕರಣ: ಇಂದು ಕೋರ್ಟಿಗೆ ಹಾಜರಾಗಬೇಕಿರುವ ಸಿಎಂ ಎಚ್ಡಿಕೆ

ಥಣಿಸಂದ್ರದಲ್ಲಿ ಜಮೀನು ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 5 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.  

Last Updated : Jul 5, 2018, 10:36 AM IST
ಡಿನೋಟಿಫಿಕೇಶನ್ ಪ್ರಕರಣ: ಇಂದು ಕೋರ್ಟಿಗೆ ಹಾಜರಾಗಬೇಕಿರುವ ಸಿಎಂ ಎಚ್ಡಿಕೆ title=

ಬೆಂಗಳೂರು: ಒಂದೆಡೆ ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಇಂದು ಮಂಡನೆಯಾಗಲಿದೆ. ಇನ್ನೊಂದೆಡೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಥಣಿಸಂದ್ರದಲ್ಲಿ ಜಮೀನು ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೇ ವಿಚಾರಣೆಗೆ ಹಾಜರಾಗಬೇಕಿದೆ.

ಥಣಿಸಂದ್ರದಲ್ಲಿ ಜಮೀನು ಡಿನೋಟಿಫಿಕೇಶನ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 5 ರಂದು ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇಲ್ಲಿನ 82ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. 

ಇಂದು ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವುದರಿಂದ ಕೋರ್ಟ್ ಹಾಜರಾತಿಗೆ ವಿನಾಯಿತಿ ಕೋರಿ ಎಚ್.ಡಿ. ಕುಮಾರಸ್ವಾಮಿ ಪರ ವಕೀಲರು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

2006ರಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಆಗಿನ ಸಮ್ಮಿಶ್ರ ಸರ್ಕಾರದಲ್ಲಿ ಅರಣ್ಯ ಸಚಿವರಾಗಿದ್ದ ಚೆನ್ನಿಗಪ್ಪ ಅವರ ಒತ್ತಾಯದ ಮೇರೆಗೆ ಶ್ರೀರಾಮ್‌ ಮತ್ತು ರವಿಪ್ರಕಾಶ್‌ ಎನ್ನುವವರಿಗೆ ಬಿಡಿಎ ವಶಪಡಿಸಿಕೊಂಡು ಪರಿಹಾರ ನೀಡಿ ನಿವೇಶನ ಹಂಚಿಕೆ ಮಾಡಿದ್ದ ಬೆಂಗಳೂರಿನ ಥಣಿಸಂದ್ರದ 3 ಎಕರೆ 24 ಗುಂಟೆ ಭೂಮಿಯನ್ನು ಡಿ ನೋಟಿಫೈ ಮಾಡಿದ್ದರು. ಡಿನೋಟಿಫಿಕೇಶನ್‌ ಮಾಡಿದ್ದ ಜಮೀನು ಮಾರಾಟದ ಹಣದಲ್ಲಿ ಕುಮಾರಸ್ವಾಮಿ ಮತ್ತು ಚೆನ್ನಿಗಪ್ಪ ಪಾಲು ಪಡೆದಿದ್ದರು ಎಂದು 2012 ರಲ್ಲಿ ಚಾಮರಾಜನಗರದ ಮಹದೇವ ಸ್ವಾಮಿ ಎನ್ನುವವರು ಲೋಕಾಯುಕ್ತ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು.

Trending News