ಬಳ್ಳಾರಿ: ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಕಿಡಿಕಾರಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿಪುರದಲ್ಲಿ ಅನರ್ಹ ವ್ಯಕ್ತಿಯನ್ನು ಚುನಾವಣೆಯಲ್ಲಿ ನಿಲ್ಲಲು ಅವಕಾಶ ಮಾಡಿಕೊಡುವ ಮೂಲಕ ಚುನಾವಣಾ ಆಯೋಗ ದ್ವಂದ್ವ ನಿಲುವು ಪ್ರದರ್ಶಿಸುತ್ತಿದೆ. ಈ ಮೂಲಕ ಆಯೋಗ ಕುಂಭಕರ್ಣ ನಿದ್ದೆಯಲ್ಲಿದೆ ಎಂದು ಟೀಕಿಸಿದರು.
ಇದೇ ವೇಳೆ ಹಂಪಿ ಉತ್ಸವದ ಕುರಿತು ಮಾತನಾಡಿದ ಅವರು, ಮೈಸೂರಿನಲ್ಲಿ ದಸರಾ ಆಚರಣೆಯಂತೆಯೇ ಹಂಪಿ ಉತ್ಸವ ಸಹ ಮಾಡಬೇಕು. ಕಳೆದ ವರ್ಷ ಸರ್ಕಾರಕ್ಕೆ ಒತ್ತಡ ಹೇರಿ ಹಂಪಿ ಉತ್ಸವ ಮಾಡಿದ್ದೆವು. ಆದರೆ, ಈ ಬಾರಿ ಆ ಬಗ್ಗೆ ಯಾವುದೇ ಪ್ರಯತ್ನ ನಡೆದಿಲ್ಲ. ಇದು ನಿಜಕ್ಕೂ ನೋವಿನ ಸಂಗತಿ. ಸೋಮಶೇಖರ್ ರೆಡ್ಡಿ ಅವರು ಕಳೆದ ವರ್ಷ ಹಂಪಿ ಉತ್ಸವಕ್ಕಾಗಿ ಭಿಕ್ಷೆ ಬೇಡುವುದಾಗಿ ಹೇಳಿದ್ದರು. ಈ ಬಾರಿಯಾದರೂ ಆ ಕೆಲಸ ಮಾಡ್ತಾರಾ ಎಂದು ವ್ಯ್ಕಗ್ಯ ವಾಡಿದ ಉಗ್ರಪ್ಪ ಅವರು, ಪ್ರತಿ ವರ್ಷ ಹಂಪಿ ಉತ್ಸವಕ್ಕೆ 10 ಕೋಟಿ ರೂ. ಮೀಸಲಿಡಲು ಸರ್ಕಾರವನ್ನು ಒತ್ತಾಯಿಸಿದರು.
ಬಿಜೆಪಿಯಲ್ಲಿ ಲಿಂಗಾಯಿತರನ್ನು ಹೊರಹಾಕಲಾಗುತ್ತಿದೆ ಎಂದು ಆರೋಪಿಸಿದ ಅವರು, ಪಕ್ಷದಲ್ಲಿ ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಈಶ್ವರಪ್ಪ ಎಂಬ ಗುಂಪುಗಳು ಸೃಷ್ಟಿಯಾಗುತ್ತಿವೆ. ಹೀಗೆ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಆರಂಭವಾಗಿದೆ ಎಂದು ಉಗ್ರಪ್ಪ ನುಡಿದರು.