ಪ್ರವಾಹದ ವಿಷಯದಲ್ಲೂ ರಾಜ್ಯ ಬಿಜೆಪಿಯಲ್ಲಿ ಶೀತಲ ಸಮರ: ಸಿಎಂ ಆದೇಶಕ್ಕೆ ಡೋಂಟ್ ಕೇರ್ ಎಂದಿರುವ ಸಿ.ಟಿ. ರವಿ

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಬಂದಿದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ 'ಕೂಡಲೇ ನಿಮ್ಮ ನಿಮ್ಮ ಉಸ್ತುವಾರಿ ಜಿಲ್ಲೆಗಳಿಗೆ ಹೋಗಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಿ' ಎಂದು ಸೂಚನೆ ನೀಡಿದ್ದರು. 

Last Updated : Aug 7, 2020, 03:17 PM IST
  • ರಾಜ್ಯ ಬಿಜೆಪಿ ಸರ್ಕಾರದೊಳಗೆ ನಡೆಯುತ್ತಿರುವ ಶೀತಲ ಸಮರ ನಿಂತಿಲ್ಲ.
  • ಕೆಲ ದಿನಗಳಿಂದ ಕ್ವಾರಂಟೈನ್ ಕಾರಣಕ್ಕೆ ವಿರಮಿಸಿದ್ದ ಸಿ.ಟಿ.‌ ರವಿ ಈಗ ಚಿಕ್ಕಪುಟ್ಟ ವಿಚಾರಗಳ ನೆಪ ಇಟ್ಟುಕೊಂಡು ಪ್ರವಾಹ ಪರಿಸ್ಥಿತಿಯನ್ನು ಕಡೆಗಣಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರವಾಹದ ವಿಷಯದಲ್ಲೂ ರಾಜ್ಯ ಬಿಜೆಪಿಯಲ್ಲಿ ಶೀತಲ ಸಮರ: ಸಿಎಂ ಆದೇಶಕ್ಕೆ ಡೋಂಟ್ ಕೇರ್ ಎಂದಿರುವ ಸಿ.ಟಿ. ರವಿ title=

ಬೆಂಗಳೂರು:  COVID -19 ಬಳಿಕ ಪ್ರವಾಹ ಪರಿಸ್ಥಿತಿಯಲ್ಲೂ ರಾಜ್ಯ ಬಿಜೆಪಿ ಸರ್ಕಾರದೊಳಗೆ ನಡೆಯುತ್ತಿರುವ ಶೀತಲ ಸಮರ ನಿಂತಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (B.S. Yadiyurappa) ಆದೇಶಕ್ಕೆ ಪ್ರವಾಸೋದ್ಯಮ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ಸಿ.ಟಿ. ರವಿ (CT Ravi) ಡೋಂಟ್ ಕೇರ್ ಎಂದಿದ್ದಾರೆ.‌

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ (Flood) ಬಂದಿದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ 'ಕೂಡಲೇ ನಿಮ್ಮ ನಿಮ್ಮ ಉಸ್ತುವಾರಿ ಜಿಲ್ಲೆಗಳಿಗೆ ಹೋಗಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಿ' ಎಂದು ಸೂಚನೆ ನೀಡಿದ್ದರು. ಆದರೆ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಒಂದಾದ ಉಸ್ತುವಾರಿ ಸಚಿವ ಸಿ.ಟಿ. ರವಿ ಬೆಂಗಳೂರಿನಲ್ಲೇ ಉಳಿದುಕೊಳ್ಳುವ ಮೂಲಕ ಯಡಿಯೂರಪ್ಪ ಆದೇಶವನ್ನು ಧಿಕ್ಕರಿಸಿದ್ದಾರೆ.

ಆಸ್ಪತ್ರೆಯಲ್ಲಿದ್ದರೂ ಹೋರಾಟ ಬಿಡದ ಸಿದ್ದರಾಮಯ್ಯ, ಪ್ರವಾಹ ಪರಿಸ್ಥಿತಿ ನಿರ್ವಹಿಸದ ರಾಜ್ಯ ಸರ್ಕಾರಕ್ಕೆ ತರಾಟೆ

ಮೊದಲಿಂದಲೂ ಯಡಿಯೂರಪ್ಪ (BS Yadiyurappa) ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಮತ್ತು ತಮಗೆ ಸಿಕ್ಕಿರುವ ಖಾತೆಗಳ ಬಗ್ಗೆ ಅಸಮಾಧಾನಗೊಂಡಿದ್ದ ಸಿ.ಟಿ. ರವಿ 'ಅಸಹಕಾರ ಚಳವಳಿ' ನಡೆಸುತ್ತಿದ್ದಾರೆ ಎನ್ನಲಾಗಿದೆ. 'ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಪಟ್ಟ ಸಭೆ ಮೊದಲೇ ನಿಗಧಿಯಾಗಿತ್ತು. ಆ ಸಭೆ ನಡೆಸುತ್ತಿದ್ದೇನೆ' ಎಂಬ‌ ನೆಪ ಇಟ್ಟುಕೊಂಡು 'ಕೂಡಲೇ ನಿಮ್ಮ ನಿಮ್ಮ ಉಸ್ತುವಾರಿ ಜಿಲ್ಲೆಗಳಿಗೆ ಹೋಗಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಿ' ಎಂಬ ಯಡಿಯೂರಪ್ಪ ಆದೇಶಕ್ಕೆ ಡೋಂಟ್ ಕೇರ್ ಎಂದಿದ್ದಾರೆ ಎನ್ನಲಾಗಿದೆ.

ಇದೂ ಅಲ್ಲದೆ ಸಿ.ಟಿ. ರವಿ ಸಭೆ ನಡೆಸುತ್ತಿರುವುದು ಪ್ರವಾಸೋಧ್ಯಮ ಇಲಾಖೆಗೆ ಸಂಬಂಧಿಸಿದ 'ಹಳೆಬೀಡು ಪುಷ್ಪಗಿರಿ ಬೆಟ್ಟದಲ್ಲಿರುವ ಯಾತ್ರಿ ನಿವಾಸದ ಬಗ್ಗೆ ಹಾಗೂ ಕನ್ನಡ ‌ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದ  ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಚಟುವಟಿಕೆಗಳ ಪ್ರಗತಿ ಪರಿಶೀಲನೆ ಬಗ್ಗೆ ಬೆಂಗಳೂರಿನ ಕುಮಾರ ಕೃಪ ಅತಿಥಿ ಗೃಹದಲ್ಲಿ ಸಭೆ ನಡೆಸಲು ಬೆಂಗಳೂರಿನಲ್ಲಿ ಉಳಿದುಕೊಂಡಿದ್ದಾರೆ. ಸದ್ಯ ಹಳೆಬೀಡು ಪುಷ್ಪಗಿರಿ ಬೆಟ್ಟದಲ್ಲಿರುವ ಯಾತ್ರಿ ನಿವಾಸ ಹಾಗೂ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಚಟುವಟಿಕೆಗಳ ಪ್ರಗತಿ ಪರಿಶೀಲನೆ ಚರ್ಚಿಸಬೇಕಿತ್ತೋ ಅಥವಾ ತಮ್ಮ ಉಸ್ತುವಾರಿ ಜಿಲ್ಲೆ ಚಿಕ್ಕಮಗಳೂರಿನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ನಿಯಂತ್ರಣಕ್ಕೆ ಮುಂದಾಗಬೇಕಿತ್ತೋ? ಎಂಬುದು ಚರ್ಚೆಗೆ ಗ್ರಾಸವಾಗಿದೆ.

COVID -19 ಪಾಸಿಟಿವ್ ಬಂದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿರುವ ಸಿಎಂ ಯಡಿಯೂರಪ್ಪ ಆಸ್ಪತ್ರೆಯಿಂದಲೇ ಪ್ರವಾಹ ಪೀಡಿತ ಜಿಲ್ಲಾ ಉಸ್ತುವಾರಿ ಸಚಿವರು ಕರೆ ಮಾಡಿ ತಕ್ಷಣವೇ ನಿಮ್ಮ ನಿಮ್ಮ ಉಸ್ತುವಾರಿ ಜಿಲ್ಲೆಗಳಿಗೆ ಹೊರಡಿ, ಅಧಿಕಾರಿಗಳ ಜೊತೆ ಸಭೆ ಮಾಡಿ, ಪರಿಹಾರ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಿ' ಎಂದಿದ್ದರು. ಆದರೆ ಕೆಲ ದಿನಗಳಿಂದ ಕ್ವಾರಂಟೈನ್ ಕಾರಣಕ್ಕೆ ವಿರಮಿಸಿದ್ದ ಸಿ.ಟಿ.‌ ರವಿ ಈಗ ಚಿಕ್ಕಪುಟ್ಟ ವಿಚಾರಗಳ ನೆಪ ಇಟ್ಟುಕೊಂಡು ಪ್ರವಾಹ ಪರಿಸ್ಥಿತಿಯನ್ನು ಕಡೆಗಣಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿನ ಸಿಟ್ಟಿಗೆ ತಮ್ಮ ತವರು ಜಿಲ್ಲೆ ಕಷ್ಟದಲ್ಲಿರುವಾಗಲೂ ರಾಜಕಾರಣ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
 

Trending News