ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ದ ನಟಿ ಶ್ರುತಿ ಹರಿಹರನ್ ಮಾಡಿರುವ ಮೀಟೂ ಆರೋಪ ಈಗ ಭಾರಿ ವಿವಾದವನ್ನು ಸೃಷ್ಟಿಸಿದೆ.ಈಗ ಈ ಆರೋಪದ ಹಿನ್ನಲೆಯಲ್ಲಿ ಸರ್ಜಾ ಅವರು ಈಗಾಗಲೇ ನಟಿ ಶ್ರುತಿ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಸಹ ದಾಖಲಿಸಿದ್ದಾರೆ.
ಈಗ ಈ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಮುಂದಾಗಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಹಿರಿಯ ನಟ ಅಂಬರೀಶ್ ಅವರ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿದೆ.
ಈಗ ಈ ಸಭೆಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್ ಎ ಚಿನ್ನೇಗೌಡ, ನಿರ್ದೇಶಕರ ಸಂಘದ ಅಧ್ಯಕ್ಷ ವಿ ನಾಗೇಂದ್ರ ಪ್ರಸಾದ್ ಮತ್ತು ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಭಾಗವಹಿಸಲಿದ್ದಾರೆ. ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಜರಿದ್ದಾರೆ.
ಸಭೆಯಲ್ಲಿ ಅಂಬರೀಶ್ ಅವರು ಈಗ ನಟಿ ಶ್ರುತಿ ಹರಿಹರನ್ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಂಧಾನದ ಸಭೆಯಲ್ಲಿ ಅಂಬರೀಶ್ ಮಾತನಾಡುತ್ತಾ ತಾವು ಯಾರು ಪರವು ಇಲ್ಲ ಚಿತ್ರರಂಗದಲ್ಲಿ ಸಮಸ್ಯೆಗಳು ಬಂದಾಗ ಅವುಗಳನ್ನು ಕುಳಿತುಕೊಂಡು ಬಗೆಹರಿಸುವ ಸಂಪ್ರದಾಯವಿದೆ ಎಂದು ತಿಳಿಸಿದರು.
ಸಭೆಗೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅರ್ಜುನ್ ಸರ್ಜಾ ಆಪ್ತ ಸಂಬರಗಿ ಅಂತರಾಷ್ಟ್ರೀಯ ಸಂಸ್ಥೆಯ ಮೂಲಕ ಹಣವನ್ನು ಪಡೆದುಕೊಂಡು ಈ ಮೀಟೂ ಅಭಿಯಾನವನ್ನು ಅರ್ಜುನ್ ಸರ್ಜಾ ಅವರ ಹೆಸರಿಗೆ ಮಸಿ ಬಳಿಯುವ ನಿಟ್ಟಿನಲ್ಲಿ ದೂರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪ ಮಾಡಿದರು.