ಕೇಂದ್ರ ಸರ್ಕಾರದಿಂದ ತೆರಿಗೆ ಅನ್ಯಾಯವಾಗಿಲ್ಲ..! ಲೆಕ್ಕ ಸಮೇತ ಸರ್ಕಾರದ ವಿರುದ್ದ ಗುಡುಗಿದ ಹೆಚ್‌ಡಿಕೆ

ಕೇಂದ್ರ ಸರಕಾರದಿಂದ ನಮಗೆ ಅನ್ಯಾಯ ಆಗಿಲ್ಲ. ಕೇವಲ ರಾಜಕೀಯ ಕಾರಣಕ್ಕೆ ಮುಖ್ಯಮಂತ್ರಿಗಳು ಕೇಂದ್ರ ಸರಕಾರದ ಜತೆ ಸಂಘರ್ಷಕ್ಕೆ ಇಳಿದಿದ್ದಾರೆಂದು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಅವರು ಆರೋಪಿಸಿದರು. 

Written by - Krishna N K | Last Updated : Feb 15, 2024, 09:23 PM IST
  • ಕೇಂದ್ರ ಸರಕಾರದಿಂದ ನಮಗೆ ಅನ್ಯಾಯ ಆಗಿಲ್ಲ.
  • ರಾಜಕೀಯ ಕಾರಣಕ್ಕೆ ಮುಖ್ಯಮಂತ್ರಿಗಳು ಕೇಂದ್ರ ಸರಕಾರದ ಜತೆ ಸಂಘರ್ಷಕ್ಕೆ ಇಳಿದಿದ್ದಾರೆ.
  • ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಗುಡುಗಿದ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ.
ಕೇಂದ್ರ ಸರ್ಕಾರದಿಂದ ತೆರಿಗೆ ಅನ್ಯಾಯವಾಗಿಲ್ಲ..! ಲೆಕ್ಕ ಸಮೇತ ಸರ್ಕಾರದ ವಿರುದ್ದ ಗುಡುಗಿದ ಹೆಚ್‌ಡಿಕೆ title=

ಬೆಂಗಳೂರು: ರಾಜ್ಯ ಸರ್ಕಾರ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ರಾಜ್ಯದ ಜನರನ್ನು ದಾರಿ ತಪ್ಪಿಸುತ್ತಾ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಅಂಕಿ-ಅಂಶಗಳ ಸಮೇತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ಪ್ರತಿಪಾದಿಸಿದರು.

ವಿಧಾನಸಭೆಯಲ್ಲಿ ಗುರುವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾವು ಎಸಗಿದ ತಪ್ಪುಗಳು, ಆರ್ಥಿಕ ಆಶಿಸ್ತು, ಅನಗತ್ಯ ವೆಚ್ಚ, ಅನುತ್ಪಾದಕ ವೆಚ್ಚ, ತಾತ್ಕಾಲಿಕ ರಾಜಕೀಯ ಲಾಭದ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಿಗೆ ಯುದ್ಧ ಆರಂಭ ಮಾಡಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ

ಅಲ್ಲದೆ, ಕೇಂದ್ರ ಸರಕಾರದಿಂದ ನಮಗೆ ಅನ್ಯಾಯ ಆಗಿಲ್ಲ. ಕೇವಲ ರಾಜಕೀಯ ಕಾರಣಕ್ಕೆ ಮುಖ್ಯಮಂತ್ರಿಗಳು ಕೇಂದ್ರ ಸರಕಾರದ ಜತೆ ಸಂಘರ್ಷಕ್ಕೆ ಇಳಿದಿದ್ದಾರೆಂದು ಕುಮಾರಸ್ವಾಮಿ ಅವರು ಆರೋಪಿಸಿದರು. ಅಲ್ಲದೆ, ಯಾವುದೇ ರಾಜ್ಯ ಇರಲಿ; ಮೂರು ರೀತಿಯ ತೆರಿಗೆಗಳಾದ ಜಿಎಸ್ಟಿ, ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆ ಇರುತ್ತವೆ. 15ನೇ ಹಣಕಾಸು ಆಯೋಗದ ವರದಿಯಲ್ಲಿ ಜನಸಂಖ್ಯಾ ಕಾರ್ಯಕ್ಷಮತೆ (Demographic Performance) ಗೆ 12.5% ಅವಕಾಶ ನೀಡಲಾಗಿದೆ. ಜನಸಂಖ್ಯೆ ನಿಯಂತ್ರಣ ಮಾಡಿದರೆ ಅದರ ಲಾಭ ಆಯಾ ರಾಜ್ಯಕ್ಕೆ ದೊರೆಯುತ್ತದೆ. ಇದು ಸರಳ ಸೂತ್ರ ಎಂದು ಮಾಹಿತಿಯನ್ನು ಓದಿ ಹೇಳಿದರು ಮಾಜಿ ಮುಖ್ಯಮಂತ್ರಿಗಳು.

ಉದಾಹರಣೆ, ಜನಸಂಖ್ಯೆ ನಿಯಂತ್ರಣ ಮಾಡಿದ ಕರ್ನಾಟಕ ರಾಜ್ಯ 1,000 ರೂ. ಜಿಎಸ್ಟಿ ಸಂಗ್ರಹಿಸಿದರೆ, 500 ರೂ. ರಾಜ್ಯಕ್ಕೇ ಉಳಿದುಕೊಳ್ಳುತ್ತದೆ. ಉಳಿದ 500 ರೂ. ಕೇಂದ್ರಕ್ಕೆ ಹೋಗುತ್ತದೆ. ಕೇಂದ್ರಕ್ಕೆ ಹೋದ 500 ರೂ.ನಲ್ಲಿ 42% ಆಯಾ ರಾಜ್ಯಗಳ ʼಸಂಗ್ರಹಿಸಲಾದ ಖಾತೆʼ (pooled account) ಗೆ ಹೋಗುತ್ತದೆ. ಅಂದರೆ, 500 ರೂ.ಗಳಲ್ಲಿ 210 ರೂ.ಗಳನ್ನು ರಾಜ್ಯಕ್ಕೇ ಕೇಂದ್ರವು ವಾಪಸ್ ಕೊಡುತ್ತದೆ. ಅಂತಿಮವಾಗಿ ಕೇಂದ್ರಕ್ಕೆ ಉಳಿಯುವುದು 50%, ಅಂದರೆ; 58 ರೂ. ಮಾತ್ರ ಎಂದು ಸದನದಲ್ಲಿ ಮಾಜಿ ಮುಖ್ಯಮಂತ್ರಿಗಳು ಲೆಕ್ಕ ಬಿಡಿಸಿಟ್ಟರು.

ಇದನ್ನೂ ಓದಿ:ಕೂಲಿಕಾರ ಮಹಿಳೆಗೆ ಒಲಿದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪಟ್ಟ 

ರಾಜ್ಯಕ್ಕೆ ಬರುತ್ತಿರುವ ತೆರಿಗೆ ಪಾಲು 13% ಎನ್ನುವುದು ಸುಳ್ಳು. ಅದು ನಿಜವಾಗಿ 58%. ಹಣಕಾಸು ಆಯೋಗದ ಮಾನದಂಡಗಳ ಪ್ರಕಾರ ತೆರಿಗೆ ಪಾಲು, ಅನುದಾನ ನೀಡಿಕೆ ಇರುತ್ತದೆ. ಅದಕ್ಕೆ 5 ಮಾನದಂಡಗಳು ಇರುತ್ತವೆ ಎಂದು ಅವರು ವಿವರಣೆ ನೀಡಿದರು. ಅವರು ನೀಡಿದ ಮಾಹಿತಿ ಕೆಳಕಂಡಂತೆ ಇದೆ;

ಆದಾಯ ಪ್ರಮಾಣ ಅಥವಾ ಆದಾಯದ ಅಂತರ: ಹೆಚ್ಚು ಬಡತನವುಳ್ಳ ರಾಜ್ಯಗಳಿಗೆ 50% ತೆರಿಗೆ ಪಾಲಿನ ಅವಕಾಶ (Weightage) ವನ್ನು ಹಿಂದಿನ ಕಾಂಗ್ರೆಸ್ ಸರಕಾರದ 14ನೇ ಹಣಕಾಸು ಆಯೋಗವೇ (2015-2020) ನೀಡಿತ್ತು. ಆ ನಂತರ ಬಂದ ಬಿಜೆಪಿ ಸರಕಾರ (2020-2021) ಅವಧಿಯ 15ನೇ ಹಣಕಾಸು ಆಯೋಗವು ಈ ಅವಕಾಶವನ್ನು 45%ಗೆ ಇಳಿಕೆ ಮಾಡಿತು. ಈ ಕಡಿತ ಮಾಡಿದ 5% ಪಾಲನ್ನು ಕರ್ನಾಟಕದಂಥ ಮುಂದುವರಿದ ರಾಜ್ಯಗಳಿಗೆ ನೀಡಿತು.

ವಿಸ್ತೀರ್ಣ: ಇದರಲ್ಲಿ ಬದಲಾವಣೆ ಮಾಡಲು ಆಗುವುದಿಲ್ಲ. ಈ ಮಾನದಂಡದಲ್ಲಿ 15% ಅವಕಾಶವನ್ನು 14/15ನೇ ಹಣಕಾಸು ಆಯೋಗಗಳ ವರದಿಗಳಲ್ಲಿ ಕೊಡಲಾಗಿದೆ.

ಜನಸಂಖ್ಯೆ: ಕಾಂಗ್ರೆಸ್ ಸರಕಾರದ ಕಾಲದ 14ನೇ ಹಣಕಾಸು ಆಯೋಗದ ಕಾಲದಲ್ಲಿ ಜನಸಂಖ್ಯೆಗೆ 27% ಅವಕಾಶ ಕೋಡಲಾಗಿತ್ತು. 1971ರಲ್ಲಿ ನಡೆಸಿದ ಜನಗಣತಿಗೆ ಅನುಗುಣವಾಗಿ 17.5% ಹಾಗೂ 2011ರ ಜನಗಣತಿಗೆ ಅನುಗುಣವಾಗಿ 10% ಸೇರಿ ಒಟ್ಟು 24.5% ಅವಕಾಶ ಕೊಡಲಾಗಿತ್ತು.

ಅದೇ ಬಿಜೆಪಿ ಸರಕಾರದ ಕಾಲದ 15ನೇ ಹಣಕಾಸು ಆಯೋಗದ ಕಾಲದಲ್ಲಿ ಜನಸಂಖ್ಯೆ ಮಾನದಂಡಕ್ಕೆ ಕೇವಲ 15% ಅವಕಾಶ (Weightage) ಕೊಡಲಾಯಿತು. ಹಾಗಾದರೆ, ಸಿದ್ದರಾಮಯ್ಯನವರು ಜನಸಂಖ್ಯೆ ಮಾನದಂಡದ ಪ್ರಕಾರ ತೆರಿಗೆ ಪಾಲು ಹಂಚಿಕೆ ಬಗ್ಗೆ ಹೇಳಿದ್ದು ಸುಳ್ಳು ಎಂದಾಯಿತು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇದನ್ನೂ ಓದಿ:ಸರ್ಕಾರಿ ವಸತಿ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಹಬ್ಬಗಳ ಆಚರಣೆಗೆ ಬ್ರೇಕ್..!

15ನೇ ಹಣಕಾಸು ಆಯೋಗವು ಜನಸಂಖ್ಯಾ ಕಾರ್ಯಕ್ಷಮತೆಗೆ 12.5% ಅವಕಾಶ ಕೊಟ್ಟಿದೆ. ಯಾವುದೇ ರಾಜ್ಯ ಜನಸಂಖ್ಯೆಯನ್ನು ನಿಯಂತ್ರಣ ಮಾಡಿದೆ ಎಂದಾದರೆ ಅದಕ್ಕೆ 12.5% ತೆರಿಗೆಪಾಲು ಸಿಗುತ್ತದೆ. ಯಾವುದೇ ರಾಜ್ಯ ಜನಸಂಖ್ಯೆ ನಿಯಂತ್ರಣ ಮಾಡದಿದ್ದರೆ ಅವರಿಗೆ ಈ ಅವಕಾಶ ಸಿಗುವುದಿಲ್ಲ.

ಅರಣ್ಯ: ಈ ಮಾನದಂಡದ ಪ್ರಕಾರ 14ನೇ ಹಣಕಾಸು ಆಯೋಗ 7.5% ಅವಕಾಶ ನೀಡಿತ್ತು. 15ನೇ ಹಣಕಾಸು ಆಯೋಗವು ಅದಕ್ಕೆ 10% ನೀಡಿದೆ.

ತೆರಿಗೆ ಸಂಗ್ರಹ & ಹಣಕಾಸು ಶಿಸ್ತು: ಈ ಮಾನದಂಡದ ಪ್ರಕಾರ 15ನೇ ಹಣಕಾಸು ಆಯೋಗ 2.5% ಅವಕಾಶ ನೀಡಿದೆ. ಇದು ಎಲ್ಲಾ ರಾಜ್ಯಗಳಿಗೆ ಅನುಕೂಲ ಮತ್ತು ಪ್ರೋತ್ಸಾಹ ಕೊಡುವ ಅಂಶ. ಮುನ್ನಡೆಯುವುದಕ್ಕೆ ಸಹಕಾರಿ. ಹಾಗಾದರೆ, ಸಿದ್ದರಾಮಯ್ಯ ಅವರು ಸಂಬಂಧ ಇಲ್ಲದ ಅಂಶಗಳ ಬಗ್ಗೆ ಪ್ರಸ್ತಾಪಿಸಿ ತಪ್ಪು ಮಾಹಿತಿ ನೀಡಿದ್ದಾರೆಯೇ ಎನ್ನುವುದು ಪ್ರಶ್ನೆ. ಒಂದು ವೇಳೆ ಅವರ ಮಾಹಿತಿ ತಪ್ಪಾಗಿದ್ದರೆ ಕರ್ನಾಟಕದ ಬಗ್ಗೆ ದೇಶಕ್ಕೆ ಹಾಗೂ ಜಾಗತಿಕ ಹೂಡಿಕೆದಾರರಿಗೆ ಯಾವ ಸಂದೇಶ ಹೋಗುತ್ತದೆ?

ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯಗಳದ್ದು 50% - 50% ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ. ನನ್ನಲ್ಲಿ ಇರುವ ಮಾಹಿತಿ ಪ್ರಕಾರ ಬೆಟ್ಟಗುಡ್ಡ ರಹಿತ ಪ್ರದೇಶದಲ್ಲಿ 60% ಕೇಂದ್ರದ್ದು, 40% ರಾಜ್ಯದ್ದು. ಅದೇ ಗುಡ್ಡಗಾಡು ಪ್ರದೇಶದಲ್ಲಿ 90% ಕೇಂದ್ರದ್ದು, 10% ರಾಜ್ಯಗಳದ್ದು (ಈಶಾನ್ಯ ರಾಜ್ಯಗಳಲ್ಲಿ)

ಇದನ್ನೂ ಓದಿ:ʼಕರಿಮಣಿʼ ಮಾಲೀಕ ಹಾಡಿಗೆ ಪತ್ನಿ ರೀಲ್ಸ್: ಪತಿ ಆತ್ಮಹತ್ಯೆ..!

GST ಪರಿಹಾರವನ್ನು 22% ಗೆ ನಿಲ್ಲಿಸಿಬಿಟ್ಟರು ಎಂದು ಸಿಎಂ ಅವರು ಹೇಳಿದ್ದರು. ಅದು ಸರಿ ಇದೆ ಹಾಗೂ ಆ ಬಗ್ಗೆ ಕೇಂದ್ರ - ರಾಜ್ಯಗಳ ಮಧ್ಯೆ ಒಪ್ಪಂದ ಆಗಿದೆ. ಅದು 2022ರವರೆಗೆ ಇತ್ತು. 2022ರ ವರೆಗೆ ಕೇಂದ್ರ ಸರ್ಕಾರ GST ಪರಿಹಾರದಲ್ಲಿ ಒಂದು ರೂಪಾಯಿ ಕೂಡ ಉಳಿಸಿಕೊಂಡಿಲ್ಲ. ಕೇಂದ್ರ ಬಜೆಟ್ ದೊಡ್ಡದು ಆಗುವುದಕ್ಕೂ, ರಾಜ್ಯಕ್ಕೆ ಪಾಲು ಕೊಡುವುದಕ್ಕೂ ಸಂಬಂಧ ಇಲ್ಲ. ರಾಜ್ಯಗಳಿಗೆ ಕೊಡುವ ಹಣವನ್ನು ಕೇಂದ್ರ ಸಾಲ ಪಡೆಯುತ್ತೆ ಅಥವಾ ರಾಜ್ಯಗಳಲ್ಲಿ ಜಾರಿ ಆಗುವ ಕೇಂದ್ರ ಯೋಜನೆಗಳಿಗೆ ಕೇಂದ್ರವೇ ಹಣ ಕೊಡುತ್ತೆ. ಆ ಸಾಲವನ್ನು ತಾನೇ ತೀರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳು ವಿವರಣೆ ನೀಡಿದರು.

ರಾಜ್ಯಗಳಿಗೆ ಅನುಕೂಲ ಆಗಲಿ ಎಂದು ಕೊವಿಡ್ ಕಾಲದಲ್ಲಿ ಮಾಡಿದ್ದ ಸಾಲವನ್ನು ಕೇಂದ್ರವೇ ಪಾವತಿಸುತ್ತಿದೆ. 50 ವರ್ಷಗಳ ಬಡ್ಡಿರಹಿತ GST ಸಾಲ ಕೊಟ್ಟಿದೆ. ಕೇಂದ್ರದ ಬಜೆಟ್ ಹಿಗ್ಗಿದಂತೆ ರಾಜ್ಯದ ಬಜೆಟ್ ಕೂಡ ಜಾಸ್ತಿ ಆಗುತ್ತಿದೆ. ಇವತ್ತು 3.80 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಲು ತಯಾರಿ ಮಾಡ್ತಾ ಇದ್ದೀರಿ. ಅದೇ ರೀತಿ ಸಾಲದ ಪ್ರಮಾಣ 6.60 ಲಕ್ಷ ಕೋಟಿ ಮೀರುತ್ತಿದೆ. ಸರಕಾರ ತೆರಿಗೆ ಕಲೆಕ್ಷನ್ʼಗೆ ಒತ್ತು ನೀಡುತ್ತಿದ್ದಾರೆಯೇ ಹೊರತು, ಅದರ ಸದ್ಬಳಕೆಗೆ ಅಲ್ಲ ಎಂದು ಟೀಕಿಸಿದರು.

ಕೇಂದ್ರದ ಹಣ ಬಳಕೆ ಮಾಡದ ಸಿದ್ದರಾಮಯ್ಯ: ಕೇಂದ್ರ ಸರ್ಕಾರದ ಯೋಜನೆಗಳಿಗೆ ನೀಡಿರುವ ಹಣವನ್ನು (CSS) ರಾಜ್ಯ ಸರ್ಕಾರ ಸರಿಯಾಗಿ ಬಳಕೆ ಮಾಡ್ತಾ ಇಲ್ಲ. ಸುಖಾ ಸುಮ್ಮನೆ ಸಿದ್ದರಾಮಯ್ಯ ಅವರು ತಪ್ಪು ಲೆಕ್ಕ ಇಟ್ಟುಕೊಂಡು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಕೇಂದ್ರ ಸರಕಾರವನ್ನು ದೂರುತ್ತಿದ್ದಾರೆ.

ರಾಜ್ಯಕ್ಕೆ ಕೇಂದ್ರ ಬಜೆಟ್ʼನಲ್ಲಿ ಹಂಚಿಕೆ ಮಾಡಲಾಗಿರುವ 2.98 ಲಕ್ಷ ಕೋಟಿ ಹಣದಲ್ಲಿ 1.13 ಲಕ್ಷ (38%) ಕೋಟಿಯನ್ನಷ್ಟೇ ಸಿದ್ದರಾಮಯ್ಯ ಸರಕಾರ ವೆಚ್ಚ ಮಾಡಿದೆ. ವಿಶೇಷ ಅಭಿವೃದ್ಧಿ ಯೋಜನೆಗಳ ಅಡಿ ನೀಡಲಾಗಿರುವ 3,223 ಕೋಟಿ ರೂ.ಗಳಲ್ಲಿ 2,039 ಕೋಟಿ ರೂ.ಗಳನ್ನು (50%) ಹಾಗೂ ವಿಶೇಷ ಯೋಜನೆಗಳಿಗೆ ನೀಡಲಾಗಿದ್ದ 3,224 ಕೋಟಿ ರೂ.ಗಳ ಪೈಕಿ 1,639 ಕೋಟಿ ರೂ.ಗಳನ್ನಷ್ಟೇ ರಾಜ್ಯ ಸರಕಾರ ಖರ್ಚು ಮಾಡಿದೆ.

ಇದನ್ನೂ ಓದಿ:ಕೇಂದ್ರದ ಅನುದಾನ ಪಡೆಯಲು ರಾಜಕಾರಣ ಮಾಡಿದರೆ ರಾಜ್ಯಕ್ಕೆ ನಷ್ಟ : ಬೊಮ್ಮಾಯಿ

ಒಟ್ಟಾರೆಯಾಗಿ, ಕೇಂದ್ರ ಸರಕಾರ ಪ್ರಾಯೋಜಿತ ಯೋಜನೆಗಳಿಗೆ (CSS) ಕೇಂದ್ರ ಸರಕಾರ ನೀಡಿರುವ 16,764 ಕೋಟಿ ರೂ.ಗಳಲ್ಲಿ ಕರ್ನಾಟಕ ಸರಕಾರ 5,726 ಕೋಟಿ ರೂ.ಗಳನ್ನಷ್ಟೇ (34%) ವ್ಯಯ ಮಾಡಿದೆ. ಅಲ್ಲದೆ; ವಿನಾಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿರುವ ಸಿದ್ದರಾಮಯ್ಯ ಸರಕಾರವು; ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್, ಪ್ರವಾಸೋದ್ಯಮ, ಯುವಜನ ಸಬಲೀಕರಣ ಮತ್ತು ಕ್ರೀಡೆ, ನಗರಾಭಿವೃದ್ಧಿ, ಲೋಕೋಪಯೋಗಿ, ವಸತಿ, ಶಿಕ್ಷಣ ಇತ್ಯಾದಿ ಕ್ಷೇತ್ರಗಳನ್ನು ತೀವ್ರ ನಿರ್ಲಕ್ಷ್ಯ ಮಾಡಿದೆ ಎಂದು ಕುಮಾರಸ್ವಾಮಿ ಅಧಿಕೃತ ಅಂಕಿ ಅಂಶಗಳ ಮೂಲಕ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News