AIR FM Rainbow: ‘ರೇಡಿಯೋ ವಾಹಿನಿಯ ಕತ್ತು ಕುಯ್ಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಹೊರಟಿರುವುದು ಅಕ್ಷಮ್ಯ’

ಕನ್ನಡದ ಕೆಚ್ಚನ್ನು ಮಣಿಸಿ, ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಬೆಂಗಾಡು ಮಾಡುವ ಸಕಲ ಪ್ರಯತ್ನವನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ ಅಂತಾ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Written by - Zee Kannada News Desk | Last Updated : Jan 29, 2022, 08:49 AM IST
  • ನೇರವಾಗಿ ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ
  • FM Rainbow ಕನ್ನಡ ಕಾಮನಬಿಲ್ಲು ರೇಡಿಯೋ ವಾಹಿನಿಯ ಕತ್ತು ಕುಯ್ಯುವ ಕೆಲಸಕ್ಕೆ ಕೇಂದ್ರ ಹೊರಟಿರುವುದು ಅಕ್ಷಮ್ಯ
  • ಕೇಂದ್ರ ಸರ್ಕಾರ ಕನ್ನಡಿಗರ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಆಕ್ರೋಶ
AIR FM Rainbow: ‘ರೇಡಿಯೋ ವಾಹಿನಿಯ ಕತ್ತು ಕುಯ್ಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಹೊರಟಿರುವುದು ಅಕ್ಷಮ್ಯ’ title=
ಕೇಂದ್ರ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು: ಕನ್ನಡದ ಕೆಚ್ಚನ್ನು ಮಣಿಸಿ, ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಬೆಂಗಾಡು ಮಾಡುವ ಸಕಲ ಪ್ರಯತ್ನವನ್ನೂ ಕೇಂದ್ರ ಸರ್ಕಾರ(Central government)ಮಾಡುತ್ತಿದೆ ಅಂತಾ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಕನ್ನಡ ಮತ್ತು ಕರ್ನಾಟಕಕ್ಕೆ ಕೇಂದ್ರ ಯಾವ ರೀತಿಯ ಅನ್ಯಾವ ಮಾಡುತ್ತಿದೆ ಎನ್ನುವುದಕ್ಕೆ ಇಲ್ಲಿದೆ ಇನ್ನೊಂದು ಸಾಕ್ಷಿ. ಈಗ ನೇರವಾಗಿ ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ’ ಅಂತಾ ಹೇಳಿದ್ದಾರೆ.

‘ಸೂರ್ಯೋದಯಕ್ಕೆ ಮುನ್ನವೇ ಪ್ರಸಾರ ಆರಂಭಿಸಿ ರಾತ್ರಿ 11ರತನಕ ಸತತ 18 ಗಂಟೆ ಕಾಲ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ನೀಡುತ್ತಿರುವ ‘101.3 FM Rainbow ಕನ್ನಡ ಕಾಮನಬಿಲ್ಲು’ ರೇಡಿಯೋ ವಾಹಿನಿ(AIR FM Rainbow)ಯ ಕತ್ತು ಕುಯ್ಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಹೊರಟಿರುವುದು ಅಕ್ಷಮ್ಯ. ಕನ್ನಡಕ್ಕೆ ಕೊಡಲಿ ಪೆಟ್ಟು. ‘ರೇನ್ ಬೋ ಕನ್ನಡ ಕಾಮನಬಿಲ್ಲುʼ ಕೇವಲ ರೇಡಿಯೋ ವಾಹಿನಿ ಮಾತ್ರವಲ್ಲ, ಕನ್ನಡಿಗರ ಹೃದಯಬಡಿತ, ಕನ್ನಡದ ಅಸ್ಮಿತೆ ಕೂಡ. ಆದರೆ ಕೇಂದ್ರ ಸರ್ಕಾರ ಕನ್ನಡಿಗರ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದೆ. ಅಧಿಕಾರಿಗಳ ಮೂಲಕ ಕನ್ನಡಮ್ಮನ ರಕ್ತ ಬಗೆಯುವ ಹೀನ ಕೆಲಸ ಮಾಡುತ್ತಿದೆ’ ಅಂತಾ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಡಾ.ಸೋಮಶೇಖರ ಇಮ್ರಾಪೂರಗೆ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ

‘ಈ ಹಿಂದೆ ಕನ್ನಡಿಗರ ಮನೆಮನದಲ್ಲಿ ತುಂಬಿದ್ದ ‘ಅಮೃತವರ್ಷಿಣಿʼಯನ್ನು ಮುಗಿಸಲಾಯಿತು. ಈಗ ಕನ್ನಡ ಕಾಮನಬಿಲ್ಲನ್ನು ಮುಗಿಸಲು ಹೊರಟಿದ್ದಾರೆ. ಕನ್ನಡ ವಿರೋಧಿ ಕೇಂದ್ರ ಸರ್ಕಾರ(Central government), ಕನ್ನಡದ್ರೋಹಿ ಅಧಿಕಾರಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಕನ್ನಡದ ಆಕ್ರಂದನವನ್ನು ಇನ್ನು ಸಹಿಸಲು ಸಾಧ್ಯವಿಲ್ಲ’ ಅಂತಾ ಎಚ್ ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಆಯಕಟ್ಟಿನಲ್ಲಿ ಕೂತಿರುವ ಹಿರಿಯ ಅಧಿಕಾರಿಗಳು ಕಸಾಯಿಗಳಂತೆ ಸಾವಿರಾರು ವರ್ಷಗಳ ಅಭಿಜಾತ ಭಾಷೆ ಕನ್ನಡದ ಮೇಲೆ ದಾಳಿ ನಡೆಸಿ ಕ್ರೂರವಾಗಿ ವಧೆ ಮಾಡುತ್ತಿದ್ದಾರೆ. ಕನ್ನಡನಾಡನ್ನು ಉದ್ಧಾರ ಮಾಡುತ್ತೇವೆಂದು ಗೆದ್ದುಹೋದ ಸಂಸದ ಮಹಾಶಯರು ಕನ್ನಡಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸುತ್ತಿರುವುದು ಹೊಣೆಗೇಡಿತನವೇ ಸರಿ. ಕನ್ನಡಿಗರು ಸಹಿಷ್ಣುಗಳು, ಸೌಮ್ಯರು ಹೌದು. ಹಾಗೆಂದು ತಾಯಿಭಾಷೆಗೆ ಕೊಳ್ಳಿ ಇಡುತ್ತಿರುವ ‘ಭಾಷಾಂತಕʼರನ್ನು ನೋಡುತ್ತಾ ಸುಮ್ಮನೆ ಕೂರಲಾರರು, ನೆನಪಿರಲಿ’ ಅಂತಾ ಎಚ್ಚರಿಸಿದ್ದಾರೆ.  

ಇದನ್ನೂ ಓದಿ: CAREER: ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ : ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ

‘ಸಂಸದರೆಲ್ಲರೂ ದನಿಯೆತ್ತಿ ಈ ರೇಡಿಯೋ ವಾಹಿನಿ(AIR FM Rainbow)ಯನ್ನು ಉಳಿಸಬೇಕು. ಮುಚ್ಚುವುದು ಅಥವಾ ಇನ್ನೊಂದರಲ್ಲಿ ವಿಲೀನ ಮಾಡುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ. FM ರೇನ್ ಬೋದ ಬಹುತೇಕ ನಿರೂಪಕರು ಅರೆಕಾಲಿಕ ಉದ್ಯೋಗಿಗಳು. ಸ್ಪಷ್ಟ ಕನ್ನಡ, ಅಚ್ಚ ಕನ್ನಡದ ರಾಯಭಾರಿಗಳು. ಅರ್ಥಪೂರ್ಣ ಕಾರ್ಯಕ್ರಮ, ಸುಶ್ರಾವ್ಯ ಹಾಡುಗಳ ಮೂಲಕ ಕೇಳುಗರೊಂದಿಗೆ ಸಂವಾದಿಯಾದವರು. ಈಗ ವಾಹಿನಿಯನ್ನೇ ನಿಲ್ಲಿಸುವ ಒಳಸಂಚು ಇವರೆಲ್ಲರಿಗೂ ಆಗುವ ಅನ್ಯಾಯ ಹಾಗೂ ಕನ್ನಡ, ಕನ್ನಡಿಗರಿಗೆ ಮಾಡುವ ಅಪಚಾರ. ಕನ್ನಡಿಗರಿಗೆ ಕಿರುಕುಳ ನೀಡಿ ವಿಕೃತ ಸಂತೋಷಪಡುವ ಮನಃಸ್ಥಿತಿ ಅಳಿಯಲಿ. ಭಾರತ ಒಕ್ಕೂಟ ರಾಜ್ಯಗಳ ಆಗರ ಎನ್ನುವುದು ನೆನಪಿರಲಿ. ಆ ಆಶಯಕ್ಕೆ ಮುಕ್ಕಾಗುವುದು ಖಂಡಿತಾ ಬೇಡ. #ಕನ್ನಡದ_ಹಂತಕರಿಗೆ_ಧಿಕ್ಕಾರ’ ಅಂತಾ ಕುಮಾರಸ್ವಾಮಿ(HD Kumaraswamy) ಟ್ವೀಟ್ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News