ಬೆಂಗಳೂರು: ರಾಮನಗರ ಜಿಲ್ಲೆ ಸೇರಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ರಾಜಧಾನಿಯ ಕಸ ಸುರಿಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು; ಅಕ್ಕಪಕ್ಕದ ಜಿಲ್ಲೆಗಳ ಜನರ ಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಿದರೆ ಅದಕ್ಕೆ ನಮ್ಮ ತೀವ್ರ ವಿರೋಧವಿದೆ. ಸರಕಾರ ಈ ನಿರ್ಧಾರವನ್ನು ಕೈಬಿಡದಿದ್ದರೆ ಜನರು ಬೀದಿಗೆ ಇಳಿದಾರು ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಿಕ್ಕಸಿಕ್ಕ ಕಡೆ ಬಾಯಿ ಹಾಕುತ್ತಿರುವ 'ಪರ್ಸಂಟೇಜ್ ಪಟಾಲಂ' ಈಗ ಕಸಕ್ಕೂ ಬಾಯಿ ಹಾಕಿದೆ! ಬ್ರ್ಯಾಂಡ್ ಬೆಂಗಳೂರು ಅನ್ನುವುದು ಕೆಲವರಿಗೆ ಬಿರಿಯಾನಿ!! ಅದರ ಒಳಗುಟ್ಟು ರಟ್ಟಾಗಿದೆ!! 'ಬ್ರ್ಯಾಂಡ್' ಹೆಸರಿನಲ್ಲಿ ಕೊಳ್ಳೆ ಹೊಡೆಯಲು, ಕಂಡ ಕಂಡ ಕಡೆ ಬೇಲಿ ಹಾಕಲು ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿಯೂ ಕಸದ ಡಂಪಿಂಗ್ ಯಾರ್ಡ್ʼಗಳನ್ನು ಸೃಷ್ಟಿ ಮಾಡುತ್ತಿರುವುದು ದಿಟ. ದಿನವೊಂದಕ್ಕೆ 1,630 ಟನ್ ಕಸ ಸುರಿದರೆ ಅಲ್ಲಿನ ಜನರ ಪಾಡೇನು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಿಚ್ಚನ ಪಂಚಾಯಿತಿಯಲ್ಲಿ ನಗೆ, ಹೊಗೆ, ಪಿನ್ನು ಮತ್ತು ಎಲಿಮಿನೇಷನ್ನ ಟೆನ್ಷನ್ನು!
ಮಂಡೂರು ಜನ ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ಯಶವಂತಪುರ ಕ್ಷೇತ್ರದ ಜನ ಈ ನರಕದಲ್ಲೇ ಬೇಯುತ್ತಿದ್ದಾರೆ. ದೊಡ್ಡಬಳ್ಳಾಪುರದ ಜನರೂ ಕಸದ ಕಷ್ಟಕ್ಕೆ ಸಿಲುಕಿದ್ದಾರೆ. ಈಗ ರಾಮನಗರದ ಸರದಿ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳನ್ನು ʼಕಸದ ತೊಟ್ಟಿʼಗಳನ್ನಾಗಿ ಮಾಡಿ ʼಸಾವಿನ ದಿಬ್ಬʼಗಳನ್ನು ನಿರ್ಮಿಸಲು ʼಬ್ರ್ಯಾಂಡ್ ಬೆಂಗಳೂರುʼ ಹೆಸರಿನಲ್ಲಿ ಹುನ್ನಾರ ಹೂಡಲಾಗಿದೆ. ಇದು ಘೊರ ಅಕ್ಷಮ್ಯ ಹಾಗೂ ರಾಜಧಾನಿಯ ಆಸುಪಾಸಿನಲ್ಲಿ ಈಗಾಗಲೇ ಕೆಟ್ಟಿರುವ ಪರಿಸರವನ್ನು ಮತ್ತಷ್ಟು ಹಾಳು ಮಾಡುವ ದುಷ್ಟ ತಂತ್ರವಷ್ಟೇ ಎಂದು ಕುಮಾರಸ್ವಾಮಿ ಅವರು ದೂರಿದ್ದಾರೆ.
ಬೆಂಗಳೂರು ಅಕ್ಕಪಕ್ಕದ ಜಿಲ್ಲೆಗಳು ಕೃಷಿ, ತೋಟಗಾರಿಕೆ, ಹೈನುಗಾರಿಕೆಯಲ್ಲಿ ಸಮೃದ್ಧವಾಗಿವೆ. ಅಲ್ಲಿನ ಪರಿಸರ, ಜೀವ ವೈವಿಧ್ಯಕ್ಕೆ ಹಾನಿ ಮಾಡಿ, ಜನಜೀವನವನ್ನು ಸರ್ವನಾಶ ಮಾಡುವುದು ಒಂದೆಡೆಯಾದರೆ; ಹೊಸ ಡಂಪಿಂಗ್ ಯಾರ್ಡ್ʼಗಳ ಮೂಲಕ ಕೋಟಿಗಟ್ಟಲೇ ಹಣವನ್ನು ಜೇಬಿಗೆ ಡಂಪ್ ಮಾಡಿಕೊಳ್ಳುವ ಖತರ್ನಾಕ್ ಐಡಿಯಾ ಇನ್ನೊಂದೆಡೆ ಅಡಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸತ್ಯಕ್ಕೆ ಸಮಾಧಿ ಕಟ್ಟುವ ಬದಲು ತನಿಖೆ ಮಾಡಿಸಲಿ- ಎಚ್.ಡಿ.ಕುಮಾರಸ್ವಾಮಿ
ಜಗತ್ತಿನಲ್ಲಿಯೇ ಉತ್ಕೃಷ್ಟ ಮಾವು, ರೇಷ್ಮೆ, ಹಣ್ಣು, ತರಕಾರಿ ಬೆಳೆಯುತ್ತಿರುವ ರಾಮನಗರ, ಬಿಡದಿ ಬಳಿ ನೂರು ಎಕರೆ ಪ್ರದೇಶದಲ್ಲಿ ಕಸ ಸುರಿಯಲು ಉಪ ಮುಖ್ಯಮಂತ್ರಿಗಳ ದೊಡ್ಡ ಹುನ್ನಾರದ ಒಳ ಉದ್ದೇಶ ಸ್ಪಷ್ಟ. ಈಗಾಗಲೇ ವೃಷಭಾವತಿ ಸೇರಿ ರಾಮನಗರ ಜಿಲ್ಲೆಯ ಜಲಮೂಲಗಳು ಪೂರ್ಣ ಹಾಳಾಗಿ ಅಂತರ್ಜಲವೂ ಕಲುಷಿತವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ನೂರು ಎಕರೆ ಸರಕಾರಿ ಭೂಮಿಯನ್ನು ಅನಾಮತ್ತಾಗಿ ಎಗರಿಬಿಡುವ ರಿಯಲ್ ಎಸ್ಟೇಟ್ ಬ್ರ್ಯಾಂಡೆಡ್ ಪರಿಕಲ್ಪನೆ ಇದಲ್ಲದೆ ಮತ್ತೇನು? ಅಕ್ಕಪಕ್ಕದ ಜಿಲ್ಲೆಗಳ ಜನರ ಸಮಾಧಿಯ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಿದರೆ ಅದಕ್ಕೆ ನಮ್ಮ ತೀವ್ರ ವಿರೋಧವಿದೆ. ಕಾಂಗ್ರೆಸ್ ಸರಕಾರವು ಈ ನಿರ್ಧಾರವನ್ನು ಕೈಬಿಡದಿದ್ದರೆ ಜನರು ಬೀದಿಗೆ ಇಳಿದಾರು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.