ಬೆಂಗಳೂರು: ಕೋವಿಡ್ -19 ನಿಂದಾಗಿ ರೈತರ (Farmers) ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಈ ಸಮಸ್ಯೆ ಪರಿಹಾರಕ್ಕಾಗಿ ತೋಟಗಾರಿಕೆ ಸಚಿವ ಡಾ. ನಾರಾಯಣಗೌಡ (Dr Narayan Gowda) ಅಧಿಕಾರಿಗಳ ಜೊತೆ ಸರಣಿ ಸಭೆ ನಡೆಸುತ್ತಿದ್ದಾರೆ. ಹೊರ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ಹಣ್ಣು, ತರಕಾರಿ ರಫ್ತು ಮಾಡುವ ಸಂಬಂಧ ಸಾಕಷ್ಟು ನಿರ್ಣಯ ಕೈಗೊಂಡಿದ್ದಾರೆ.
ಅಧಿಕಾರಿಗಳ ಜೊತೆ ಸಚಿವರು ಸಭೆ ನಡೆಸಿದ ಪರಿಣಾಮವಾಗಿ ಒಂದಷ್ಟು ಪ್ರಮಾಣದಲ್ಲಿ ಹೊರ ರಾಜ್ಯಗಳಿಗೆ ಹಣ್ಣು, ತರಕಾರಿ ಸಾಗಾಟವಾಗುತ್ತಿದೆ. ಪಕ್ಕದ ರಾಜ್ಯದ ಸಂಸ್ಕರಣಾ ಘಟಕಕ್ಕೂ ಟೊಮೆಟೊ, ಮಾವು ಸರಬರಾಜಾಗುತ್ತಿದೆ. ಡಿಸ್ಟಿಲರಿ, ವೈನರಿ ಸೇರಿದಂತೆ ಸಾಧ್ಯವಿರುವ ಕಡೆಗಳಿಗೆ ಹಣ್ಣುಗಳನ್ನ ಕಳುಹಿಸುವ ಪ್ರಯತ್ನ ಮಾಡಲಾಗುತ್ತಿದೆ. ವಿದೇಶಕ್ಕೆ ಹಣ್ಣು, ತರಕಾರಿ ರಫ್ತು ಮಾಡಲಾಗುತ್ತಿದೆಯಾದರೂ ದೊಡ್ಡ ಪ್ರಮಾಣದಲ್ಲಿ ಸಾಧ್ಯವಾಗುತ್ತಿರಲಿಲ್ಲ.
ಈ ಹಿನ್ನೆಲೆಯಲ್ಲಿ ಸಚಿವ ನಾರಾಯಣಗೌಡ ರಫ್ತುದಾರ ಕಂಪೆನಿಗೂ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ. ನಾಮಧಾರಿ ಸೀಡ್ಸ್ ಕಂಪೆನಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ವಿದೇಶಗಳಿಗೆ ಹಣ್ಣು, ತರಕಾರಿ ರಫ್ತು ಸಂಬಂಧ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೊಂದು ಸಭೆ ನಡೆಸಿದ್ದಾರೆ.
ಫಾರ್ವಡ್ ಏಜೆನ್ಸಿ, ಕಾರ್ಗೊಹ್ಯಾಂಡ್ಲರ್ ಜೊತೆ ಮಾತುಕತೆ ಮಾಡಿದ್ದಾರೆ. ಸಭೆಯಲ್ಲಿ ರಫ್ತಿಗೆ ಇರುವ ಸಮಸ್ಯೆ ಬಗ್ಗೆ ಮಾಹಿತಿ ಪಡೆದ ತೋಟಗಾರಿಕೆ ಸಚಿವ ಡಾ. ನಾರಾಯಣ ಗೌಡ, ಸಿಎಂ ಮೂಲಕ ಕೇಂದ್ರ ಸರ್ಕಾರದ ಜೊತೆ ಶೀಘ್ರವೆ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ.
ದ್ರಾಕ್ಷಿ ಬೆಳೆಗಾರರಿಗೆ ನ್ಯಾಯಕೊಡಿಸುವತ್ತ ತೋಟಗಾರಿಕೆ ಸಚಿವ ಡಾ. ನಾರಾಯಣಗೌಡ
ಏರ್ ಇಂಡಿಯಾ ಎಕ್ಸ್ ಪ್ರೆಸ್ ನವರು ಮೊದಲು ತಿಂಗಳವರೆಗೆ ಕ್ರೆಡಿಟ್ ನೀಡಿ ಹಣ್ಣು ತರಕಾರಿ ರಫ್ತು ಮಾಡ್ತಿದ್ರು. ಈಗ ಕ್ರೆಡಿಟ್ ನೀಡುತ್ತಿಲ್ಲ. ಜೊತೆಗೆ ದರ ಕೂಡ ಏರಿಕೆ ಮಾಡಿದ್ದಾರೆ. ಇದರಿಂದ ರಾಜ್ಯದ ಹಣ್ಣು, ತರಕಾರಿ ರಫ್ತು ಕಠಿಣವಾಗಿದೆ ಎಂದು ರಫ್ತುದಾರರು ಮಾಹಿತಿ ನೀಡಿದ್ದಾರೆ. ವಿದೇಶದಲ್ಲಿ ರಾಜ್ಯದ ತರಕಾರಿ, ಹಣ್ಣಿಗೆ ಬೇಡಿಕೆ ಇದೆ. ಆದ್ರೆ ರಫ್ತು ಹಾಗೂ ದರದ ಸಮಸ್ಯೆಯಿಂದಾಗಿ ರೈತರಿಗೆ ನೇರವಾಗಿ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಸಿಎಂ ಜೊತೆ ಮಾತುಕತೆ ನಡೆಸಿದ್ದಾರೆ.
ಕೇಂದ್ರಕ್ಕೂ ಪತ್ರ ಬರೆಯಲಾಗಿತ್ತು. ಈಗ ಮುಂದುವರಿದ ಭಾಗವಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ದರ ಇಳಿಸಿ, ಕ್ರೆಡಿಟ್ ಕೂಡ ನೀಡುವಂತೆ ಮನವಿ ಮಾಡಲು ಸಚಿವರು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯದ ಹಣ್ಣು, ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶಕ್ಕೆ ರಫ್ತಾಗಬೇಕು. ಈ ನಿಟ್ಟಿನಲ್ಲಿ ರಫ್ತುದಾರರು ಗಮನಹರಿಸಬೇಕು. ರಫ್ತಿಗೆ ಏನೇ ಸಮಸ್ಯೆ ಇದ್ದರು ಗಮನಕ್ಕೆ ತನ್ನಿ, ಅತಿ ಶೀಘ್ರದಲ್ಲಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತೇವೆ. ನಿಮ್ಮಿಂದಾಗಿ ರೈತರಿಗೆ ಹೆಚ್ಚು ಅನುಕೂಲ ಆಗುವಂತೆ ನೋಡಿಕೊಳ್ಳಿ ಎಂದು ಸಚಿವರು ಸಭೆಯಲ್ಲಿ ಸೂಚಿಸಿದ್ದಾರೆ.