ಬೆಂಗಳೂರು: ನಾನೆಂದೂ ನಂಗೆ ಸಚಿವ ಸ್ಥಾನ ಕೊಡಿ ಎಂದು ಕೇಳಿಲ್ಲ, ಕೇಳುವುದೂ ಇಲ್ಲ. ಒಂದು ವೇಳೆ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಮಧ್ಯಾಹ್ನ ಸ್ಪೀಕರ್ ರಮೇಶ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪತ್ನಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರು, "ನನ್ನನ್ನು ಆಯ್ಕೆ ಮಾಡಿದ ರಾಮನಗರ ಕ್ಷೇತ್ರದ ಜನರಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. ರಾಮನಗರಕ್ಕೆ ನಾನೇ ಮೊದಲ ಮಹಿಳಾ ಶಾಸಕಿ. ನನ್ನ ಪತಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ರಾಮನಗರ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡುತ್ತೇನೆ. ಸಂಪುಟದಲ್ಲಿ ಸಚಿವ ಸ್ಥಾನ ನಾನು ಕೇಳುವುದಿಲ್ಲ. ಒಂದು ವೇಳೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.
ಇದೇ ನವೆಂಬರ್ 3 ರಂದು ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ ಅವರು ಭರ್ಜರಿ ಗೆಲುವು ಸಾಧಿಸಿದ್ದರು. ಈ ಮೂಲಕ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. 2008ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ಮಧುಗಿರಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅನಿತಾ, 2013ರಲ್ಲಿ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ವಿರುದ್ಧ ಸೋಲು ಅನುಭವಿಸಿದ್ದರು.