ಹುಬ್ಬಳ್ಳಿ: ನನಗೆ ಯಾವ ಪಕ್ಷಗಳನ್ನು ಸೋಲಿಸುವ ಉದ್ದೇಶವಿಲ್ಲ. ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವುದೊಂದೇ ನನ್ನ ಗುರಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಎರಡು ರಾಷ್ಟ್ರೀಯ ಪಕ್ಷಗಳ ಭ್ರಷ್ಟ ಆಡಳಿತ ನೋಡಿ ರಾಜ್ಯದ ಜನರು ಬೇಸತ್ತಿದ್ದಾರೆ. ಹೀಗಾಗಿ, ಜೆಡಿಎಸ್ ಪರ ರಾಜ್ಯದ ಜನರ ಒಲವು ಹೆಚ್ಚಾಗಿದ್ದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಭಯ ಉಂಟಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ನಾವು ಸ್ಪಷ್ಟ ಬಹುಮತ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಯಾವ ಪಕ್ಷಗಳ ಬೆಂಬಲ ಪಡೆಯದೇ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುತ್ತೇವೆ. ಉತ್ತರ ಕರ್ನಾಟಕದಲ್ಲಿ 45 ಸ್ಥಾನಗಳನ್ನು ಗೆಲ್ಲುತ್ತೇವೆ. ಹಳೆ ಕರ್ನಾಟಕದಲ್ಲಿ 75 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಭರವಸೆಯಿಂದ ನುಡಿದರು.
ಅನಿತಾ ಕುಮಾರಸ್ವಾಮಿಗೂ ಟಿಕೆಟ್ ನೀಡುವಂತೆ ಒತ್ತಡವಿತ್ತು
ಪ್ರಜ್ವಲ್ಗೆ ಟಿಕೆಟ್ ನೀಡಲು ಕಾರ್ಯಕರ್ತರ ಒತ್ತಡ ವಿಚಾರದ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ ನಾವು ಕುಟುಂಬ ರಾಜಕಾರಣ ಮಾಡುವುದಿಲ್ಲ. ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಡ ಇತ್ತು. ಆದರೆ, ಪ್ರಜ್ವಲ್ ವಿಷಯದ ಬಗ್ಗೆ ಶೀಘ್ರದಲ್ಲೇ ಒಂದು ಸ್ಪಷ್ಟನೆ ನೀಡುತ್ತೇವೆ ಎಂದು ತಿಳಿಸಿದರು.
ಈ ಪ್ರಶ್ನೆಯನ್ನು ಮೋದಿಗೆ ಕೇಳಿ
ಕುಮಾರಸ್ವಾಮಿಗೆ ಸೋಲಿನ ಭಯವಿದೆ. ಹೀಗಾಗಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸ್ತಾರೆ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ನನ್ನ ಕರ್ಮಭೂಮಿ ರಾಮನಗರ, ಹಾಗಾಗಿ ಅಲ್ಲಿಂದ ಸ್ಪರ್ಧಿಸುತ್ತೇನೆ. ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಇನ್ನೊಂದು ಕ್ಷೇತ್ರದ ಆಯ್ಕೆ ಮಾಡಿಕೊಳ್ಳಲಾಗಿದೆ. ನನ್ನನ್ನು ಪ್ರಶ್ನಿಸುತ್ತಿರುವವರು, ಇದೇ ಪ್ರಶ್ನೆಯನ್ನ ಮೋದಿಯವರಿಗೂ ಕೇಳಿ ಎಂದು ಸವಾಲು ಹಾಕಿದರು.
ನಿಮ್ಮಪ್ಪನಾಣೆಗೂ ನೀವು ಚಾಮುಂಡೇಶ್ವರಿಯಲ್ಲಿ ಆಯ್ಕೆಯಾಗ್ತೀರಾ?
ಸಿಎಂ ಪದೇ ಪದೇ ಕುಮಾರಸ್ವಾಮಿ ಅವ್ರಪ್ಪನಾಣೆ ಸಿಎಂ ಆಗಲ್ಲ ಅಂತಾರೆ. ಆದರೆ, ನಿಮ್ಮಪ್ಪನಾಣೆ ನೀವು ಚಾಮುಂಡೇಶ್ಚರಿಯಿಂದ ಆಯ್ಕೆಯಾಗಿ ಬನ್ನಿ ನೋಡೋಣ ಎಂದು ಸಿಎಂಗೆ ಸವಾಲು ಹಾಕಿದರು. ಚಾಮುಂಡೇಶ್ವರಿ ಅಷ್ಟೇ ಅಲ್ಲ, ಬಾದಾಮಿಯಲ್ಲಾದರೂ ಸ್ಪರ್ಧಿಸಲಿ. ಅಲ್ಲಿಯೂ ನಾವು ಸಿಎಂ ವಿರುದ್ದ ಸ್ಪರ್ಧೆ ನೀಡಲು ಸಜ್ಜಾಗಿದ್ದೇವೆ ಎಂದು ಎಚ್ಡಿಕೆ ಇದೇ ಸಂದರ್ಭದಲ್ಲಿ ತಿಳಿಸಿದರು.