ಮೈಸೂರು: ಮೈಸೂರು ಜಿಲ್ಲೆಯ ಅರಸನಕೆರೆ ಗ್ರಾಮದಲ್ಲಿ ಪೌರಾಣಿಕ ಹಿನ್ನೆಲೆಯುಳ್ಳ ಬೃಹತ್ ಜೋಡಿ ನಂದಿ ವಿಗ್ರಹ ಪತ್ತೆಯಾಗಿವೆ. ಗ್ರಾಮದ ಜಮೀನಿನಲ್ಲಿ ಮಣ್ಣಿನ ಆಳದಲ್ಲಿ ಮುಚ್ಚಿಹೋಗಿದ್ದ ಬೃಹತ್ ನಂದಿ ವಿಗ್ರಹಗಳು ಪತ್ತೆಯಾಗಿವೆ.
ನೂರಾರು ವರ್ಷಗಳಷ್ಟು ಹಳೆಯದಾದ ಶಿವನ ಸವಾರಿ ನಂದಿ ವಿಗ್ರಹದ ಕುರುಹುಗಳು ಈಗ ನಾಲ್ಕು ದಶಕಗಳ ಹಿಂದೆಯೇ ಪತ್ತೆಯಾಗಿತ್ತು ಎಂದು ಹೇಳಲಾಗುತ್ತಿದ್ದು, ಉತ್ಖನನದ ಸಮಯದಲ್ಲಿ ಸುಮಾರು 15 ಅಡಿ ಉದ್ದ ಹಾಗೂ 12 ಅಡಿ ಎತ್ತರವಾದ ಎರಡು ನಂದಿ ವಿಗ್ರಹಗಳು ದೊರೆತಿವೆ.
ಇದುವರೆಗೂ ಈ ನಂದಿ ವಿಗ್ರಹದ ಕೊಂಬುಗಳನಷ್ಟೇ ಕಂಡು ಇವುಗಳನ್ನು ಜೋಡಿ ಬಸವಣ್ಣ ಎಂದು ಪೂಜಿಸುತ್ತಿದ್ದ ಗ್ರಾಮಸ್ಥರು, ತಾವೇ ಹಣ ಸಂಗ್ರಹಿಸಿ ಜೆಸಿಬಿ ಯಂತ್ರಗಳ ಮೂಲಕ ಮಣ್ಣನ್ನು ಅಗೆಸಿದಾಗ ಈ ನಂದಿವಿಗ್ರಹಗಳು ಗೋಚರಿಸಿವೆ.
ಜಮೀನಿನಲ್ಲಿ ಕಾಣಿಸಿಕೊಂಡಿರುವ ಎರಡು ನಂದಿ ವಿಗ್ರಹಗಳನ್ನು ಹೊರ ತೆಗೆಯುವ ನಿಟ್ಟಿನಲ್ಲಿ ಪಾರಂಪರಿಕ ಇಲಾಖೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಾದರೆ ಇನ್ನೂ 2-3 ತಿಂಗಳು ಕಾಯಬೇಕಿದೆ. ಹೀಗಾಗಿ ಗ್ರಾಮಸ್ಥರು ತಾವೇ ಸಂರಕ್ಷಣೆ ಮಾಡಲು ಜಿಲ್ಲಾಧಿಕಾರಿ ಸಲಹೆ ಕೇಳಲು ಮುಂದಾಗಿದ್ದಾರೆ.
ಗ್ರಾಮದಲ್ಲಿ ನಂದಿ ವಿಗ್ರಹಗಳನ್ನು ಹೊರ ತೆಗೆಯಲಾಗುತ್ತಿದೆ ಎಂಬ ವಿಷಯ ತಿಳಿದ ಪುರಾತತ್ತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಪುರಾತತ್ತ್ವ ಶಾಸ್ತ್ರಜ್ಞ ಎನ್.ಎಲ್.ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಾತ್ಕಾಲಿಕವಾಗಿ ಭೂಮಿ ಅಗೆಯುವುದನ್ನು ನಿಲ್ಲಿಸಲು ಸೂಚಿಸಿದರು.
ಈ ವಿಗ್ರಹಗಳನ್ನು ವಿಜಯನಗರ ಯುಗದಲ್ಲಿ ಮಾಡಲಾಗಿದೆ ಎಂದು ಹೇಳಲಾಗಿದೆ. ಇದು 16 ಅಥವಾ 17 ನೇ ಶತಮಾನದ್ದಿರಬಹುದು ಎಂದು ಹೇಳಲಾಗುತ್ತಿದೆ.