ಮಂಡ್ಯ ಜಿಲ್ಲೆಯ 28 ಹಳ್ಳಿಗಳಿಗೆ ಕುಡಿಯುವ ನೀರು, 5 ಕೆರೆ ತುಂಬಿಸುವ ಯೋಜನೆಗೆ ಚಾಲನೆ

ವ್ಯವಸಾಯಕ್ಕೆ ಮತ್ತು ಗೃಹ ಬಳಕೆಗೆ ನೀರು ಸಿಗುವಂತೆ ಮಾಡುವುದು ಪ್ರತಿ ಸರಕಾರದ ಕರ್ತವ್ಯ. ಇದನ್ನು ಯಡಿಯೂರಪ್ಪ ಅವರ ಸರಕಾರ ಅರ್ಥ ಮಾಡಿಕೊಂಡಿದೆ ಎಂದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

Last Updated : Jul 6, 2020, 02:17 PM IST
ಮಂಡ್ಯ ಜಿಲ್ಲೆಯ 28 ಹಳ್ಳಿಗಳಿಗೆ ಕುಡಿಯುವ ನೀರು, 5 ಕೆರೆ ತುಂಬಿಸುವ ಯೋಜನೆಗೆ ಚಾಲನೆ title=

ಮಂಡ್ಯ: ಜಿಲ್ಲೆಯಲ್ಲಿ ಜಾರಿ ಹಂತದಲ್ಲಿರುವ 15 ನೀರಾವರಿ ಕಾಮಗಾರಿಗಳನ್ನು ಆದಷ್ಟು ಶೀಘ್ರಗತಿಯಲ್ಲಿ ಮುಗಿಸುವುದರ ಜತೆಗೆ, ವಿಶ್ವೇಶ್ವರಯ್ಯ ನಾಲೆಯ ದುರಸ್ಥಿ ಕಾರ್ಯವನ್ನೂ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr CN Ashwathnarayana) ಪ್ರಕಟಿಸಿದರು.

ಸೋಮವಾರ ತಾಲ್ಲೂಕಿನ ಕೊತ್ತತ್ತಿ ಹೋಬಳಿಯ 28 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಹಾಗೂ 5 ಕೆರೆಗಳಿಗೆ ನೀರು ತುಂಬಿಸುವ 18.5 ಕೋಟಿ ರೂಪಾಯಿ ವಚ್ಚದ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಇವೆಲ್ಲ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು, ಅಗತ್ಯವಾದ ಸಂಪನ್ಮೂಲವನ್ನು ಒದಗಿಸಲಾಗುವುದು ಎಂದರು. 

ಕುಡಿಯುವ ನೀರು ಒದಗಿಸುವುದು ಅತ್ಯಂತ ಅಗತ್ಯ. ಅದು ಅತ್ಯಗತ್ಯವಾದ ಮೂಲ ಸೌಕರ್ಯವೂ ಹೌದು. ಇದನ್ನು ಸರಿಯಾಗಿ ಮಾಡದಿರುವುದು ಅನ್ಯಾಯವೇ ಸರಿ. ವ್ಯವಸಾಯಕ್ಕೆ ಮತ್ತು ಗೃಹ ಬಳಕೆಗೆ ನೀರು ಸಿಗುವಂತೆ ಮಾಡುವುದು ಪ್ರತಿ ಸರಕಾರದ ಕರ್ತವ್ಯ. ಇದನ್ನು ಯಡಿಯೂರಪ್ಪ ಅವರ ಸರಕಾರ ಅರ್ಥ ಮಾಡಿಕೊಂಡಿದೆ ಎಂದು ಡಿಸಿಎಂ ಹೇಳಿದರು.

ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧವಾಗಿದೆ. ಅದರಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ಕೊಟ್ಟು ಕೃಷಿ ಮತ್ತು ಕುಡಿಯುವ ನೀರಿನ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ. ಜಿಲ್ಲೆಗಾಗಿ ನಾನೂ ಸಹ ಸಚಿವ ಡಾ. ಕೆ.ಸಿ. ನಾರಾಯಣ ಗೌಡರಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮನಸ್ಸು ತುಂಬಿ ಬಂದಿದೆ:
ಈ ಯೋಜನೆಯನ್ನು ಜನರಿಗೆ ಸಮರ್ಪಿಸುತ್ತಿರುವುದು ಬಹಳ ಸಂತೋಷ ಉಂಟು ಮಾಡಿದೆ.  ಕೆರೆಗಳಿಗೆ ನೀರು ತುಂಬಿಸುವ ಮೂಲಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಎಲ್ಲೆಡೆ ಹಸಿರು ಮೂಡಿ ಜನ ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಹೀಗಾಗಿ ಈ ಯೋಜನೆ ಅತ್ಯಂತ ಉಪಯುಕ್ತ. ಲೋಕಪಾವನಿ ನದಿಯಿಂದ ಎಲೆಚಾಕನಹಳ್ಳಿ, ರಾಗಿಮುದ್ದನಹಳ್ಳಿ, ಕಾಳೇನಹಳ್ಳಿ, ಉರಮಾಕಲಸರಗೆರೆ, ಜಕ್ಕನಹಳ್ಳಿ, ಅಲಗೋಡು ಕೆರೆಗಳಿಗೆ ಇವತ್ತು ನೀರು ತುಂಬಿಸುವ ಮಹತ್ಕಾರ್ಯಕ್ಕೆ ಚಾಲನೆ ನೀಡಿದ್ದು ಪುಣ್ಯದ ಕಾರ್ಯವೆಂದೇ ಭಾವಿಸಿದ್ದೇನೆ. ಮನಸ್ಸು ತುಂಬಿ ಬಂದಿದೆ ಎಂದು ಡಿಸಿಎಂ ಹೇಳಿದರು.

ಈ ಭಾಗಕ್ಕೆ ನೀರು ಬರಬೇಕು. ಕೆರೆಗಳು ತುಂಬಬೇಕು ಎಂಬುದು ಬಹುದಿನಗಳ ಕನಸಾಗಿತ್ತು. ಅನೇಕ ಶಾಸಕರು ಬಂದರು, ಹೋದರೂ ಈ ಯೋಜನೆ ಸಾಕಾರವಾಗಿರಲಿಲ್ಲ. 2008-13ರ ಅವಧಿಯಲ್ಲಿ ಬಿಜೆಪಿ ಸರಕಾರವೇ ಈ ಯೋಜನೆಗೆ ಮಂಜೂರಾತಿ ನೀಡಿತ್ತು. ಅಂದಿನ ಜಲ ಸಂಪನ್ಮೂಲ ಖಾತೆ ಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಒಪ್ಪಿಗೆ ನೀಡಿದ್ದರು. 2011ರಲ್ಲೆ ಈ ಯೋಜನೆಗಾಗಿ ಮನವಿ ಕೊಟ್ಟು ಛಲಬಿಡದ ವಿಕ್ರಮನಂತೆ ಇಲ್ಲಿಗೆ ನೀರು ಬರಲು ಕಾರಣರಾದ ಎಲೆಚಾಕನಹಳ್ಳಿ ಬಸವರಾಜು ಮತ್ತವರ ಶ್ರೀಮತಿಯವರನ್ನು ನಾನು ಮನಸಾರೆ ಅಭಿನಂಧಿಸುತ್ತೇನೆ. ನಿಮ್ಮೆಲ್ಲರ ಪಾಲಿಗೆ ಬಸವರಾಜು ಭಗೀರಥರೇ ಆಗಿದ್ದಾರೆಂದು ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ಸರಕಾರ ಬಂದ ಮೇಲೆ ಜಿಲ್ಲೆಯಲ್ಲಿ ನಡೆಯುತ್ತಿರುವ ಮೊದಲ ಅಭಿವೃದ್ಧಿ ಕಾರ್ಯಕ್ರಮ ಇದಾಗಿದೆ. ಇನ್ನು ಮುಂದೆ ಇಂಥ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಜಿಲ್ಲೆಯ ಅಭಿವೃದ್ಧಿ ಪರ್ವ ಆರಂಭವಾಗಿದೆ ಎಂದ ಡಿಸಿಎಂ, ಹಿಂದಿನ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಬಹ ಶ್ರಮ ವಹಿಸಿ ಭೂಸ್ವಾಧೀನ ಮತ್ತಿತರೆ ಕೆಲಸಗಳನ್ನು ಮಾಡಿದ್ದಾರೆ. ಅವರನ್ನು ನಾವಿಲ್ಲಿ ಸ್ಮರಿಸಲೇಬೇಕು ಎಂದು ಅವರು ನುಡಿದರು.

ಕೋವಿಡ್- ಜಿಲ್ಲೆಯಲ್ಲಿ ಸಮಸ್ಯೆ ಇಲ್ಲ;
ಕೋವಿಡ್-19 (Covid-19) ಸೋಂಕಿನ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಎಲ್ಲ ವ್ಯವಸ್ಥೆಗಳನ್ನು ಸರಕಾರ ಜಿಲ್ಲೆಯಲ್ಲಿ ಮಾಡಿದೆ. ಅಗತ್ಯ ಬೆಡ್ ಗಳು ಲಭ್ಯವಿದ್ದು, ಸೂಕ್ತ ಔಷದೋಪಚಾರವೂ ಸಿಗುತ್ತಿದೆ. ಪರೀಕ್ಷಾ ಕೇಂದ್ರಗಳು, ವೈದ್ಯರು, ನರ್ಸ್ ಗಳು ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. ಜನರು ಯಾರೂ ಆತಂಕಗೊಳ್ಳಬೇಕಾಗಿಲ್ಲ,. ಕಡ್ಡಾಯವಾಗಿ ಮಾಸ್ಕ್ ಧರಿಸಿದರೆ ಈ ಸೋಂಕನ್ನು ಹತ್ತಿರಕ್ಕೆ ಬರದಂತೆ ತಡೆಯಬಹುದು ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ. ನಾರಾಯಣಗೌಡ (Dr Narayana Gowda), ಶಾಸಕ ರವೀಂದ್ರ ಶ್ರೀಕಂಠಯ್ಯ, ವಿಧಾನ ಪರಿಷತ್ ಸದಸ್ಯರದ ಶ್ರೀಕಂಠೇಗೌಡ ಮತ್ತು ಅಪ್ಪಾಜಿ ಗೌಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ರಾಮಲಿಂಗಯ್ಯ, ತೂಬಿನಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ ಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. 

ಸಿದ್ದು ಆರೋಪ ಸತ್ಯಕ್ಕೆ ದೂರ:
ಕೋವಿಡ್ ನಿರ್ವಹಣೆ ಮತ್ತು ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಹಾಗೂ ಜನರನ್ನು ದಿಕ್ಕು ತಪ್ಪಿಸುವ ರೀತಿಯಲ್ಲಿದೆ ಎಂದು ಡಿಸಿಎಂ ಹೇಳಿದರು.

ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅವರಿಗೆ ಲೆಕ್ಕಕೇಳುವ ಹಕ್ಕಿದೆ. ಕೇಳಲಿ. ನಾವು ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ. ಸದನದಲ್ಲಿ ಕೂಡ ಮಾಹಿತಿ ನೀಡಲು ಸರಕಾರ ಸಿದ್ಧವಿದೆ. ಮೊದಲೇ ಜನರು ಕಷ್ಟದಲ್ಲಿದ್ದಾರೆ. ವೈರಸ್ ಕಾಟದಿಂದ ಬಸವಳಿದಿದ್ದಾರೆ. ಇಂತಹ ಸಮಯದಲ್ಲಿ ಅವರು ಎತ್ತಿರುವ ಪ್ರಶ್ನೆ ಸಮಂಜಸವಲ್ಲ ಎಂದರು.

ಉಳಿದಂತೆ ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದೆ. ಎಲ್ಲಿಯೂ ಬೆಡ್ ಗಳು, ಔಷಧಿ, ವೈದ್ಯರು, ನರ್ಸ್ಗಳ ಸಮಸ್ಯೆಯಾಗಿಲ್ಲ. ಅಗತ್ಯವಾದಷ್ಟು ಆಂಬುಲೆನ್ಸ್ ಗಳು ಕೂಡ ನಮ್ಮಲ್ಲಿವೆ. ಪೂರಕ ಸಿಬ್ಬಂದಿ ಕೊತೆಯೂ ಇಲ್ಲ. ಒಂದು ಕ್ಷಣವೂ ಮೈಮರೆಯದೇ ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ಪಾಸಿಟೀವ್ ಪ್ರಕರಣಗಳು ಹೆಚ್ಚುತ್ತಿವೆ. ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಸರಕಾರ ಸಜ್ಜಾಗಿದೆ ಎಂದು  ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಿದರು.
 

Trending News