ನನ್ನನ್ನು ಟೀಕೆ ಮಾಡುವವರಿಗೆ ಯೋಗ್ಯತೆ ಇದಿಯೇ..? ಸಿದ್ದುಗೆ ಹೆಚ್‌ಡಿಕೆ ಗುದ್ದು

ಸಿದ್ದರಾಮಯ್ಯನವರು ಮಾಡಿದ ಸಾಲಮನ್ನಾ ಚೆನ್ನಾಗಿದೆಯಂತೆ, ನಾನು ಮಾಡಿರುವ ಸಾಲಮನ್ನಾ ಚೆನ್ನಾಗಿಲ್ಲವಂತೆ- ಹೆಚ್.ಡಿ. ಕುಮಾರಸ್ವಾಮಿ

Updated: Sep 26, 2019 , 03:37 PM IST
ನನ್ನನ್ನು ಟೀಕೆ ಮಾಡುವವರಿಗೆ ಯೋಗ್ಯತೆ ಇದಿಯೇ..? ಸಿದ್ದುಗೆ  ಹೆಚ್‌ಡಿಕೆ ಗುದ್ದು
File Image

ಮಂಡ್ಯ: ನನ್ನನ್ನು ಟೀಕೆ ಮಾಡುವವರಿಗೆ ಯೋಗ್ಯತೆ ಇದಿಯೇ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅಗ್ರಹಾರ ಬಾಚಹಳ್ಳಿ ಗ್ರಾಮದಲ್ಲಿ ನಿನ್ನೆ ವಿಧಿವಶರಾದ ಕೆ.ಆರ್.ಪೇಟೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ವೆಂಕಟಸುಬ್ಬೇಗೌಡರ ಅಂತಿಮ ದರ್ಶನದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‌ಡಿಕೆ, ಸಿದ್ದರಾಮಯ್ಯನವರು ಮಾಡಿದ ಸಾಲಮನ್ನಾ ಚೆನ್ನಾಗಿದೆಯಂತೆ, ನಾನು ಮಾಡಿರುವ ಸಾಲಮನ್ನಾ ಚೆನ್ನಾಗಿಲ್ಲವಂತೆ ಎಂದು ವ್ಯಂಗ್ಯವಾಡಿದರು.

ಕೆ.ಆರ್.ಪೇಟೆ ತಾಲೂಕು ಒಂದರಲ್ಲೇ 22 ಸಾವಿರ ಕುಟುಂಬದ ಸಾಲಮನ್ನಾ ಮಾಡಿದ್ದೀನಿ ಎಂದು ತಿಳಿಸಿದ ಹೆಚ್‌ಡಿಕೆ, ಈ ತಾಲೂಕಲ್ಲೇ ಸಹಕಾರಿ ಹಾಗೂ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಸಾಲಮನ್ನಾ ಮಾಡಿದ್ದೀನಿ. ಈ ಬಗೆಗೆ ಒಂದು ಬುಕ್ ಮಾಡಿಸುತ್ತೇನೆ. ಬುಕ್ ಮಾಡಿಸಿ ತಾಲೂಕುವಾರು ಹಂಚುತ್ತೇನೆ ಎಂದರು.

14 ತಿಂಗಳ ಕೆಲಸದ ಬಗೆಗೆ ಪ್ರತಿ ಗ್ರಾಮದ ಜನರಿಗೆ ತಿಳಿಸುವೆ:
ಇದೇ ಸಂದರ್ಭದಲ್ಲಿ ತಮ್ಮ 14 ತಿಂಗಳ ಅಧಿಕಾರಾವಧಿಯಲ್ಲಿ ಮಾಡಿರುವ ಕೆಲಸದ ಬಗೆಗೆ ಪ್ರತಿ ಹಳ್ಳಿ ಜನರಿಗೂ ಮಾಹಿತಿ ನೀಡುವುದಾಗಿ ತಿಳಿಸಿದ ಕುಮಾರಸ್ವಾಮಿ, ಇತಿಹಾಸದಲ್ಲಿ ಯಾರೂ ಕೂಡ ನನ್ನ ಹಾಗೆ ಸಾಲ ಮನ್ನಾ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.