ಕ್ಷಣಕ್ಕೊಂದು ಬಣ್ಣ ಬದಲಿಸುವ ಬಿಜೆಪಿ ಒಂದು ರಾಜಕೀಯ ಊಸರವಳ್ಳಿ: ಜೆಡಿಎಸ್ ಟೀಕೆ

9 ದಿನ ಸಿಎಂ ಆಗಿದ್ದ ಯಡಿಯೂರಪ್ಪಗೆ ಬೆಂಬಲ ಕೊಟ್ಟಿದ್ದು ಇದೇ ಕುಮಾರಸ್ವಾಮಿ. ಆಗ ನಿಮ್ಮ ಹೈಕಮಾಂಡ್, ‘ಅಗ್ರಿಮೆಂಟ್ ಹೈ ಡ್ರಾಮಾʼ ಆಡಿ ಯಡಿಯೂರಪ್ಪ ಬೆನ್ನಿಗೆ ತಿವಿದದ್ದು ಗೊತ್ತಿಲ್ಲವಾ? ಎಂದು ಬಿಜೆಪಿಗೆ ಜೆಡಿಎಸ್ ಪ್ರಶ್ನಿಸಿದೆ.

Written by - Zee Kannada News Desk | Last Updated : Apr 2, 2022, 08:07 PM IST
  • ಕುರ್ಚಿಗಾಗಿ ಕುಮಾರಸ್ವಾಮಿಯವರು ನಿಮ್ಮ ಯಾವ ಮುಖಂಡರ ಮನೆ ಬಾಗಿಲಿಗೂ ಬರಲಿಲ್ಲ
  • ಅಧಿಕಾರಕ್ಕಾಗಿ ಬಿ.ಎಸ್.ಯಡಿಯೂರಪ್ಪನವರೇ ಬಿಜೆಪಿ ಬಿಡಲು ಸಿದ್ಧರಿದ್ದರು
  • 9 ದಿನ ಸಿಎಂ ಆಗಿದ್ದ ಯಡಿಯೂರಪ್ಪಗೆ ಬೆಂಬಲ ಕೊಟ್ಟಿದ್ದು ಇದೇ ಕುಮಾರಸ್ವಾಮಿ
ಕ್ಷಣಕ್ಕೊಂದು ಬಣ್ಣ ಬದಲಿಸುವ ಬಿಜೆಪಿ ಒಂದು ರಾಜಕೀಯ ಊಸರವಳ್ಳಿ: ಜೆಡಿಎಸ್ ಟೀಕೆ title=
ಬಿಜೆಪಿಗೆ ತಿರುಗೇಟು ನೀಡಿದ ಜೆಡಿಎಸ್

ಬೆಂಗಳೂರು: ಬಿಜೆಪಿ(BJP)ಯ ಬಣ್ಣ ಬಿಚ್ಚಿಡುತ್ತಾ ಹೋದರೆ, ಮನುಕುಲದ ಈವರೆಗಿನ ಕ್ರೂರ-ಪೈಶಾಚಿಕ ಇತಿಹಾಸ ಮೀರಿಸುತ್ತದೆ ಎಂದು ಜೆಡಿಎಸ್ ಕಿಡಿಕಾರಿದೆ. ‘ಬಾಯಿಗೆ ಬಂದಂತೆ ಮಾತನಾಡುವುದು ಆ ಬಳಿಕ ವಿಷಾದ ವ್ಯಕ್ತಪಡಿಸುವುದು ಸಾಂದರ್ಭಿಕ ಸಿಎಂ ಎಚ್.ಡಿ.ಕುಮಾರಸ್ವಾಮಿ(HD Kumaraswamy)ಯವರ ರಾಜಕೀಯ ವರಸೆ’ ಎಂದು ಟೀಕಿಸಿದ್ದ ಬಿಜೆಪಿಗೆ ಜೆಡಿಎಸ್ ಕಟುವಾಗಿ ತಿರುಗೇಟು ನೀಡಿದೆ.

#ಹಿಂದುತ್ವ_ವಿನಾಶಕ_ಬಿಜೆಪಿ ಹ್ಯಾಶ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡರುವ ಜೆಡಿಎಸ್, ‘ಸ್ವಯಂಘೋಷಿತ ದೇಶಭಕ್ತ ಬಿಜೆಪಿಯೇ, ಕುರ್ಚಿಗಾಗಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು ನಿಮ್ಮ ಯಾವ ಮುಖಂಡರ ಮನೆ ಬಾಗಿಲಿಗೂ ಬರಲಿಲ್ಲ. ಅಧಿಕಾರಕ್ಕಾಗಿ ಅವರ ಮನೆ ಬಾಗಿಲಿಗೇ ಬಂದರು ನಿಮ್ಮವರು! ನೆನಪಿರಲಿ. ಅಧಿಕಾರಕ್ಕಾಗಿ ಯಡಿಯೂರಪ್ಪನವರೇ ಬಿಜೆಪಿ ಬಿಡಲು ಸಿದ್ಧರಿದ್ದರು. ಮಂತ್ರಿಯಾದರೆ ಸಾಕಪ್ಪಾ ಎಂದು ಕುಮಾರಣ್ಣನ ಮನೆ ಕದತಟ್ಟಿದ್ದರು. ಆದರೆ, ತಾಯಿಯಂಥ ಪಕ್ಷ ಬಿಡಬೇಡಿ ಎಂದು ಸಲಹೆ ನೀಡಿದ್ದರು ಎಚ್‍ಡಿಕೆ. ಅವರಿಗೆ ಪಕ್ಷ ಬಿಡಿ ಎಂದಿದ್ದರೆ ಆವತ್ತೇ ಕರ್ನಾಟಕದಲ್ಲಿ ಬಿಜೆಪಿ ಸಮಾಧಿ ಆಗುತ್ತಿತ್ತು. ಬಿಜೆಪಿಯನ್ನು ಉಳಿಸಿದವರೇ ಕುಮಾರಸ್ವಾಮಿ’ ಎಂದು ಟ್ವೀಟ್ ಕುಟುಕಿದೆ.

‘9 ದಿನ ಸಿಎಂ ಆಗಿದ್ದ ಯಡಿಯೂರಪ್ಪ(BS Yediyurappa)ಗೆ ಬೆಂಬಲ ಕೊಟ್ಟಿದ್ದು ಇದೇ ಕುಮಾರಸ್ವಾಮಿ. ಆಗ ನಿಮ್ಮ ಹೈಕಮಾಂಡ್, ‘ಅಗ್ರಿಮೆಂಟ್ ಹೈ ಡ್ರಾಮಾʼ ಆಡಿ ಯಡಿಯೂರಪ್ಪ ಬೆನ್ನಿಗೆ ತಿವಿದದ್ದು ಗೊತ್ತಿಲ್ಲವಾ? ಕೊನೆಗೆ ಅಗ್ರಿಮೆಂಟನ್ನೇ ಹೈಜಾಕ್ ಮಾಡಿ ವಚನಭ್ರಷ್ಟರಾಗಿದ್ದು ನೀವು. ಅದನ್ನು ಕುಮಾರಸ್ವಾಮಿ ತಲೆಗೆ ಕಟ್ಟಿದಿರಿ. ಸತ್ಯ ಮರೆತರೆ ಹೇಗೆ? ಕೃತಜ್ಞತೆ ಎನ್ನುವುದು ನಿಮಗೆ ಆಗದ ಪದ. ಯಾರು ಶಕ್ತಿ ತುಂಬುತ್ತಾರೋ ಅವರ ಕತ್ತು ಕುಯ್ಯುವುದು ನಿಮ್ಮ ಜಾಯಮಾನ. 2006ರಲ್ಲಿ ಸರ್ಕಾರ ರಚನೆಯಾದ ಎರಡೇ ತಿಂಗಳಿಗೆ ಕುಮಾರಸ್ವಾಮಿ ವಿರುದ್ಧ ಸಲ್ಲದ ಸುಳ್ಳು ಆರೋಪ ಮಾಡಿ ಬೆನ್ನಿಗಿರಿದದ್ದು ಯಾರು? ಬಿಜೆಪಿಯ ‘ಬ್ರೂಟಸ್ ಪಾಲಿಟಿಕ್ಸ್ʼ ಅಲ್ಲವೇ ಅದು?’ ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಅವಧಿ ಪೂರ್ವ ಚುನಾವಣೆ ಕುರಿತು ಯಾವುದೇ ಚರ್ಚೆ ಆಗಿಲ್ಲ -ನಳಿನ್‍ಕುಮಾರ್ ಕಟೀಲ್

‘ಉಪಸಭಾಪತಿ ವಿಷಯಕ್ಕೆ ಬಂದರೆ, ಈ ಸ್ಥಾನಕ್ಕೂ ಕುಮಾರಣ್ಣಗೂ ಸಂಬಂಧವೇ ಇಲ್ಲ. ಆ ಪದವಿ ಆಕಾಂಕ್ಷಿ ಆಗಿದ್ದವರು ಮೂಲತಃ ಜನತಾ ಪರಿವಾರದವರು. ಅವರನ್ನು ಕಾಂಗ್ರೆಸ್(Congress) ನಂಬಿಸಿ, ವಂಚಿಸಿತ್ತು. ಅವರಿಗೆ ಜೆಡಿಎಸ್ ಪಕ್ಷ ಆಶ್ರಯ ಕೊಟ್ಟು ಶಕ್ತಿ ತುಂಬಿತು. ಇದರಲ್ಲಿ ಸರ್ಕಸ್ ಪ್ರಶ್ನೆ ಎಲ್ಲಿಂದ ಬಂತು? ಕನ್ನಡದ ನೆಲ-ಜಲ, ನಾಡು-ನುಡಿಗಾಗಿ ಕುಮಾರಸ್ವಾಮಿ ಸರ್ಕಸ್ ಮಾಡುತ್ತಾರೆ ಸರಿ. ಆದರೆ, ಅನ್ನ-ಆಹಾರ, ಧರ್ಮದ ವಿಚಾರದಲ್ಲೂ ‘ಶಕಲಕ ಸರ್ಕಸ್ʼ ಮಾಡುವ ಬಿಜೆಪಿಗೆ ನೈತಿಕತೆ ಎಂಬುದು ಇದೆಯಾ? ಮತಕ್ಕಾಗಿ, ಕುರ್ಚಿಗಾಗಿ ನಿಮ್ಮ ‘ಸದಾರಮೆ ನಾಟಕʼ ಜಗಜ್ಜಾಹೀರು. ಕ್ಷಣಕ್ಕೊಂದು ಬಣ್ಣ ಬದಲಿಸುವ ಬಿಜೆಪಿ ಒಂದು ‘ರಾಜಕೀಯ ಊಸರವಳ್ಳಿ’ ಅಂತಾ ಟೀಕಿಸಿದೆ.

‘ಕುಮಾರಸ್ವಾಮಿ ಜೀವನ ತೆರೆದ ಪುಸ್ತಕ. ಇದ್ದದ್ದನ್ನು ಕಡ್ಡಿತುಂಡು ಮಾಡಿದಂತೆ ಹೇಳುವ ಎದೆಗಾರಿಕೆ ಅವರಿಗಷ್ಟೇ ಇದೆ ಎಂಬುದು 6.5 ಕೋಟಿ ಜನರಿಗೆ ಗೊತ್ತು. ಅಧಿಕಾರಕ್ಕೆ ಅಂಟಿಕೊಂಡ ಕುಟುಂಬ ಅವರದ್ದಲ್ಲ. ಬೆಂಬಲ ಕೊಡುತ್ತೇವೆ ಎಂದು ವಾಜಪೇಯಿ ನೀಡಿದ ಆಫರನ್ನೇ ತಿರಸ್ಕರಿಸಿ, ಪ್ರಧಾನಿ ಪದವಿ ತೊರೆದ ನಾಯಕರು ದೇವೇಗೌಡ(HD DeveGowda)ರು ಎಂಬುದು ಗೊತ್ತಿಲ್ಲವೇ? ಕುಮಾರಸ್ವಾಮಿ ಅವರೇನೋ ಲಕ್ಕಿಡಿಪ್ ಸಿಎಂ ಎಂಬುದೇನೋ ಸರಿ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಎಲ್ಲಿದ್ದಿರಿ ನೀವು? ಕುರ್ಚಿ ಹಿಡಿಯಲು ಈ ಲಕ್ಕಿಡಿಪ್ ಸಿಎಂ ಕಾಲೇ ಹಿಡಿಯಬೇಕಾಯಿತು. ಅದನ್ನು ಮರೆತರೆ ಹೇಗೆ? ಸತ್ಯಕ್ಕೆ ಸಮಾಧಿ ಕಟ್ಟುವುದು ಎಂದರೆ ಬಿಜೆಪಿಗೆ ಸುಲಭದ ಕೆಲಸ’ವೆಂದು ಬಿಜೆಪಿಗೆ ಜೆಡಿಎಸ್ ತಿವಿದಿದೆ.

‘ಅಧಿಕಾರ ಬಂದಾಗ ಗೌಡರ ಕುಟುಂಬ ಬೊಕ್ಕಸ ಲೂಟಿ ಮಾಡಲಿಲ್ಲ. 2 ಅವಧಿಯಲ್ಲಿ ಬಿಜೆಪಿ ಸರ್ಕಾರ(BJP Government) ನಡೆಸಿದ ಭ್ರಷ್ಟಲೀಲೆಗಳು ಅನೇಕ? ಭ್ರಷ್ಟಸುಳಿಗೆ ಸಿಲುಕಿ ಸಿಎಂ ಜೈಲಿಗೆ ಹೋದ ಇತಿಹಾಸ ನಿಮ್ಮದು. ಸಾಲುಸಾಲು ಜೈಲುಪಕ್ಷಿಗಳು ನಿಮ್ಮವರೇ. ನಿಮ್ಮ ಶಾಸಕರೇ ಸಿಎಂ ವಿರುದ್ಧ ಭ್ರಷ್ಟ ಆರೋಪ ಮಾಡಿದಾಗ, ಅವರನ್ನು ಮನೆಗೆ ಕಳಿಸಿದ ‘ಹೀನ ಚರಿತ್ರೆʼ ನಿಮ್ಮದು. ಈಗಷ್ಟೇ ರಾಜ್ಯದಾದ್ಯಂತ ಮಾರ್ದನಿಸುತ್ತಿರುವ 40% ಕಮೀಷನ್ ಕಥೆ ಏನು? ಪ್ರಧಾನಮಂತ್ರಿಗಳಿಗೇ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಬರೆದ ಪತ್ರ, ಬೆಳಗಾವಿ ಗುತ್ತಿಗೆದಾರರೊಬ್ಬರು ಬರೆದ ಪತ್ರ, ಸಚಿವರ ಮೇಲೆ ನೇರ ಪರ್ಸಂಟೇಜ್ ಆರೋಪ.. ಇದೆಲ್ಲ ಬಿಜೆಪಿಯ ಭ್ರಷ್ಟಕಾಂಡಗಳು. ಇದು ನಿಮ್ಮವರ ಜಾತಕ’ವೆಂದು ಜೆಡಿಎಸ್ ಟೀಕಾಪ್ರಹಾರ ನಡೆಸಿದೆ.

ಇದನ್ನೂ ಓದಿ: ‘ಕುಮಾರಸ್ವಾಮಿ ರಾಜಕೀಯ ಜೀವನವೇ ಡ್ರಾಮಾ, ಅವರ ಕುಟುಂಬವೇ ದೊಡ್ಡ ಡ್ರಾಮಾ ಕಂಪನಿ’

‘ನಿಮ್ಮ ಬಾಲಂಗೋಚಿಗಳ ಗುತ್ತಿಗೆಯಲ್ಲ ಹಿಂದುತ್ವ. ಮುಗ್ಧ ಜನರಿಗೆ ಧರ್ಮದ ಹೆಸರಿನಲ್ಲಿ ವಿಷವುಣಿಸುತ್ತಿರುವ ನಿಮ್ಮದು ಹಿಂದುತ್ವವೇ? ಮಾನವ ವಿಕಾಸವನ್ನೇ ಮರೆತು ಮನುಜಕುಲಕ್ಕೇ ‘ಮರಣಶಾಸನʼ ಬರೆಯುತ್ತಿರುವ ರಾಜಕಾರಣ ನಿಮ್ಮದು. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದರೆ ಇದೇನಾ? ಅದು, ‘ಸಬ್ ಕಾ ವಿನಾಶ್ & ಸಬ್ ಕಾ ಸರ್ವನಾಶ್’ ಎಂದು ಕುಟುಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News