ಬಿಜೆಪಿ ಸರ್ಕಾರ ದಲಿತ ಸಮುದಾಯಕ್ಕೆ ದ್ರೋಹ ಬಗೆದಿದೆ: ಸಿದ್ದರಾಮಯ್ಯ ಆಕ್ರೋಶ

ಕಳೆದ 3 ವರ್ಷಗಳಿಂದ ರಾಜ್ಯದ ಬಿಜೆಪಿ ಸರ್ಕಾರವು ಈ ವರ್ಗಗಳಿಗೆ ಖರ್ಚು ಮಾಡುವ ಅನುದಾನವನ್ನು ಒಂದೇ ಸಮನೆ ಕಡಿಮೆ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Written by - Zee Kannada News Desk | Last Updated : Apr 21, 2022, 09:52 PM IST
  • SC/ST ಉಪಯೋಜನೆಗೆ ಮೀಸಲಿಟ್ಟ ಹಣ ಕಾನೂನಿಗೆ ವಿರುದ್ಧವಾಗಿ ಮೂಲಸೌಕರ್ಯ ಯೋಜನೆಗಳಿಗೆ ಬಳಕೆ
  • ಕಳೆದ 3 ವರ್ಷಗಳಿಂದ ಬಿಜೆಪಿ ಸರ್ಕಾರ ಒಂದೇ ಸಮನೆ ಈ ವರ್ಗಗಳಿಗೆ ಖರ್ಚು ಮಾಡುವ ಅನುದಾನ ಕಡಿಮೆ ಮಾಡುತ್ತಿದೆ
  • ರಾಜ್ಯದ ಬಿಜೆಪಿ ಸರ್ಕಾರ ದಲಿತ ಸಮುದಾಯಕ್ಕೆ ದ್ರೋಹ ಬಗೆದಿದೆ ಎಂದು ಸಿದ್ದರಾಮಯ್ಯ ಆಕ್ರೋಶ
ಬಿಜೆಪಿ ಸರ್ಕಾರ ದಲಿತ ಸಮುದಾಯಕ್ಕೆ ದ್ರೋಹ ಬಗೆದಿದೆ: ಸಿದ್ದರಾಮಯ್ಯ ಆಕ್ರೋಶ title=
ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಕಳೆದ 4 ವರ್ಷಗಳ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಗೆ ಮೀಸಲಿಟ್ಟ ಹಣವನ್ನು ಕಾನೂನಿಗೆ ವಿರುದ್ಧವಾಗಿ ಮೂಲಸೌಕರ್ಯ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ದಲಿತ ಸಮುದಾಯಕ್ಕೆ ದ್ರೋಹ ಬಗೆದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘SCP-TSP ಉಪಯೋಜನೆಗೆ ಮೀಸಲಿಟ್ಟಿರುವ ಹಣವನ್ನು ನಿಗದಿಪಡಿಸದೆ ಇದ್ದ ಅನ್ಯ ಯೋಜನೆಗಳಿಗೆ ಬಳಕೆ ಮಾಡುವುದು ಕಾನೂನು ವಿರೋಧಿ ನಡೆಯಾಗಿದ್ದು, ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ’ ಎಂದಿದ್ದಾರೆ.

‘SCP-TSP ಕಾಯ್ದೆ ಪ್ರಕಾರ ಯೋಜನಾ ವೆಚ್ಚದ ಶೇ.24.1ರಷ್ಟು ಭಾಗವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲ್ಯಾಣ ಕಾರ್ಯಕ್ರಮಗಳಿಗಷ್ಟೇ ಬಳಸಬೇಕಾಗುತ್ತದೆ. ಆ ವರ್ಷದ ಅನುದಾನ ಉಳಿಕೆಯಾದರೆ ನಂತರದ ವರ್ಷ ಖರ್ಚು ಮಾಡಬೇಕು. ರಾಜ್ಯ ಬಿಜೆಪಿ ಸರ್ಕಾರ ಈ ನಿಯಮವನ್ನು ಪಾಲಿಸಿದೆಯೇ?’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Dingaleshwar Swamiji : ಸಚಿವ ಸಿಸಿ ಪಾಟೀಲ್ ವಿರುದ್ಧ ಕಿಡಿಕಾರಿದ ದಿಂಗಾಲೇಶ್ವರ ಶ್ರೀಗಳು

‘2021-22ರ ಬಜೆಟ್ ನಲ್ಲಿ SCP-TSP ಕಾಯ್ದೆಯಡಿ ಮೀಸಲಿಟ್ಟಿರುವ ಶೇ.24.1ರಷ್ಟು ಅಂದರೆ 26,695 ಕೋಟಿ ರೂ.ವನ್ನು ರಾಜ್ಯ ಬಿಜೆಪಿ ಸರ್ಕಾರ ಪರಿಶಿಷ್ಟರಿಗಾಗಿ ಖರ್ಚು ಮಾಡಿದೆಯೇ? ಮೀಸಲಿಟ್ಟ ಹಣದಲ್ಲಿ 7,885 ಕೋಟಿ ರೂ.ಗಳನ್ನು ಮೂಲಸೌಕರ್ಯ ಯೋಜನೆಗಳಿಗೆ ವ್ಯಯ ಮಾಡಿರುವುದು ಕಾನೂನಿನ ಉಲ್ಲಂಘನೆಯಲ್ಲವೇ?’ ಅಂತಾ ಅವರು ಪ್ರಶ್ನಿಸಿದ್ದಾರೆ.

‘2018-21ರ ನಡುವಿನ 4 ವರ್ಷಗಳ ಅವಧಿಯಲ್ಲಿ SCP-TSP ಹಣವನ್ನು ನೀರಾವರಿ, ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಯೋಜನೆಗಳಿಗೆ ಖರ್ಚು ಮಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ನೇರ ಫಲಾನುಭವಿಗಳಾಗಿರುವ ಯೋಜನೆಗಳಿಗೆ ಹಣವನ್ನು ಕಡಿತಗೊಳಿಸಿರುವುದು ಅನ್ಯಾಯವಲ್ಲವೇ?’ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

‘2012-13ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಹಣ ಕೇವಲ 7,200 ಕೋಟಿ ರೂ. ಈ ಮೊತ್ತವು 2014-15ರ ವೇಳೆಗೆ 15,834 ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು. ಈ ಅನುದಾನವನ್ನು 2018ರ ಬಜೆಟ್ ನಲ್ಲಿ ನಾನು 29,691 ಕೋಟಿ ರೂ.ಗಳಿಗೆ ಹೆಚ್ಚಿಸಿದ್ದೆ. 2008-09ರಿಂದ 2012-13ರವರೆಗಿನ 5 ವರ್ಷಗಳ ಅವಧಿಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ SCP-TSPಗೆ ಮೀಸಲಿಟ್ಟಿದ್ದು 22,261 ಕೋಟಿ ರೂ. 2013ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 5 ವರ್ಷಗಳಲ್ಲಿ ಈ ಯೋಜನೆಗೆ ಖರ್ಚು ಮಾಡಿರುವ ಹಣ 88,395 ಕೋಟಿ ರೂ.’ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಟಿಪ್ಪು ಖಡ್ಗಕ್ಕೆ ಸಲಾಮು ಹಾಕಿ ಚಾಮರಾಜಪೇಟೆ ಎನ್ನುವಿರಾ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ

‘ಕಳೆದ 3 ವರ್ಷಗಳಿಂದ ರಾಜ್ಯದ ಬಿಜೆಪಿ ಸರ್ಕಾರವು ಈ ವರ್ಗಗಳಿಗೆ ಖರ್ಚು ಮಾಡುವ ಅನುದಾನವನ್ನು ಒಂದೇ ಸಮನೆ ಕಡಿಮೆ ಮಾಡುತ್ತಿದೆ. ಬಜೆಟ್ ಗಾತ್ರ ಮಾತ್ರ ದೊಡ್ಡದಾಗುತ್ತಿದೆಯೇ ಹೊರತು, ಜನರ ಕಲ್ಯಾಣಕ್ಕಾಗಿ ಖರ್ಚು ಮಾಡುವ ಅನುದಾನ ಕಡಿಮೆಯಾಗುತ್ತಿದೆ. ಈ ಮೂಲಕ ನಾಡಿನ ಶೋಷಿತ ಜನರಿಗೆ ಸರ್ಕಾರ ಅನ್ಯಾಯವೆಸಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News