BankingExams: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆದರಿದ ಇಲಿ’

ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು.  

Written by - Zee Kannada News Desk | Last Updated : Jul 13, 2021, 04:17 PM IST
  • ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕೇಂದ್ರ ಸರ್ಕಾರದಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ
  • ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯ ಇತ್ತೀಚಿನ ಸುತ್ತೋಲೆ ಈ ದ್ರೋಹಕ್ಕೆ ಸಾಕ್ಷಿ
  • ನಿರ್ಮಲಾ ಸೀತಾರಾಮನ್ ಕನ್ನಡ ಮತ್ತು ಕರ್ನಾಟಕಕ್ಕೆ ಅನ್ಯಾಯವೆಸಗುತ್ತಾ ಬಂದಿದ್ದಾರೆ
BankingExams: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆದರಿದ ಇಲಿ’ title=
ಪ್ರಧಾನಿ ಮೋದಿ, ಸಿಎಂ ಬಿಎಸ್‌ವೈ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಬೆಂಗಳೂರು: ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಿಗರಿಗಾಗುತ್ತಿರುವ ಅನ್ಯಾಯದ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(BS Yediyurappa) ಹಾಗೂ ಪ್ರಧಾನಿ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ತಮ್ಮನ್ನು ರಾಜ್ಯದ ಹುಲಿ-ಸಿಂಹಗಳೆಂದು ವಂದಿ-ಮಾಗದರಿಂದ ಘೋಷಣೆ ಕೂಗಿಸುತ್ತಿರುವ ಬಿ.ಎಸ್.ಯಡಿಯೂರಪ್ಪ ಕರ್ನಾಟಕಕ್ಕೆ ಅನ್ಯಾಯಗುತ್ತಿರುವಾಗ ಮಾತ್ರ ಬೆದರಿದ ಇಲಿಯಾಗುತ್ತಾರೆ’ ಎಂದು ಕುಟುಕಿದ್ದಾರೆ.

 ‘ಬ್ಯಾಂಕಿಂಗ್ ಪರೀಕ್ಷೆ(Banking Exams)ಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಿಎಸ್‌ವೈ ತಕ್ಷಣ ಪ್ರಧಾನಿ ಮೋದಿ(PM Narendra Modi)ಯವರ ಗಮನಸೆಳೆದು ಕನ್ನಡಿಗರಿಗೆ ನ್ಯಾಯಒದಗಿಸಬೇಕು. ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡದೆ ಪ್ರಧಾನಿ ಮೋದಿ ಸರ್ಕಾರ ಕನ್ನಡಿಗರಿಗೆ ದ್ರೋಹ ಬಗೆಯುತ್ತಾ ಬಂದಿದೆ. ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS)ಯ ಇತ್ತೀಚಿನ ಸುತ್ತೋಲೆ ಈ ದ್ರೋಹಕ್ಕೆ ಸಾಕ್ಷಿ. ಕೇಂದ್ರ ಸರ್ಕಾರ ತಕ್ಷಣ ಈ ಬಗ್ಗೆ ಗಮನಹರಿಸಿ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.

 

ಇದನ್ನೂ ಓದಿ: Super Cop: ಸ್ವಂತ ಹಣದಿಂದ ರಸ್ತೆ ಗುಂಡಿ ಮುಚ್ಚಿಸಿದ ಪೊಲೀಸ್ ಅಧಿಕಾರಿ

‘ಐಬಿಪಿಎಸ್ ಇದೀಗ 11 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 3 ಸಾವಿರ ಕಾರಕೂನ ಹುದ್ದೆಗಳಿಗೆ ಅರ್ಜಿ ಆಹ್ಹಾನಿಸಿದ್ದು, ಇವುಗಳಲ್ಲಿ 407 ಹುದ್ದೆಗಳು ಕರ್ನಾಟಕ(Karnataka)ಕ್ಕೆ ಸೇರಿದ್ದಾಗಿದೆ. ಕನ್ನಡಕ್ಕಾಗಿರುವ ಅನ್ಯಾಯದಿಂದ ತೀವ್ರ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿರುವ ಕರುನಾಡಿನ ಯುವಜನರು ಉದ್ಯೋಗವಕಾಶದಿಂದ ವಂಚಿತರಾಗಲಿದ್ದಾರೆ. 2014ಕ್ಕಿಂತ ಮೊದಲು IBPS ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ರಾಜ್ಯಭಾಷೆಗಳಲ್ಲಿಯೂ ಬರೆಯುವ ಅವಕಾಶವಿತ್ತು. 2014ರಲ್ಲಿ ಬಿಜೆಪಿ ಸರ್ಕಾರ(BJP Govt.) ಈ ನಿಯಮಾವಳಿಗೆ ತಿದ್ದುಪಡಿ ಮಾಡಿ ಇಂಗ್ಲೀಷ್ ಮತ್ತು ಹಿಂದಿಯೇತರ ಭಾಷಿಕ ಯುವಜನರಿಗೆ ಅನ್ಯಾಯಮಾಡಿದೆ. ಈ ಅನ್ಯಾಯವನ್ನು ಪ್ರತಿಭಟಿಸಿ ಹಿಂದಿನ ನಮ್ಮ ಸರ್ಕಾರ ಕೇಂದ್ರಕ್ಕೆ ಪತ್ರವನ್ನೂ ಬರೆದಿತ್ತು’ ಎಂದಿದ್ದಾರೆ.

‘ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕನ್ನಡಿಗರಿಗಾಗುತ್ತಿರುವ ಅನ್ಯಾಯದ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಗಮನಸೆಳೆದ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman)ಲೋಕಸಭೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ನಡೆಸುವ ಭರವಸೆ ನೀಡಿದ್ದರೂ ಅದನ್ನು ಇಂದಿಗೂ ಈಡೇರಿಸಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಹುತೇಕ ಯೋಜನೆಗಳ ಅನುಷ್ಠಾನ ಬ್ಯಾಂಕ್ ಗಳ ಮೂಲಕವೇ ನಡೆಯುವುದರಿಂದ ರೈತರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆ ಹೆಚ್ಚುಹೆಚ್ಚು ಬ್ಯಾಂಕನ್ನು ಅವಲಂಬಿಸಿದ್ದಾರೆ. ಕನ್ನಡ ಬಾರದ ಸಿಬ್ಬಂದಿಯಿಂದ ಈ ಜನಸಮುದಾಯ ಪ್ರತಿನಿತ್ಯ ಕಿರುಕುಳ ಅನುಭವಿಸುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Caste Atrocities: 28 ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ, ದೌರ್ಜನ್ಯ

‘ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬಂದರೆ ಸೌಲಭ್ಯಗಳ ಸುನಾಮಿ ಬರಲಿದೆ ಎಂದು ಲೋಕಸಭಾ ಚುನಾವಣೆ(LokSabha Election) ಯ ಕಾಲದಲ್ಲಿ ಬುರುಡೆಬಿಟ್ಟ ಬಿಜೆಪಿಯಿಂದ ಆಯ್ಕೆಯಾದ 25 ಸಂಸದರು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ಸರಮಾಲೆಯ ಬಗ್ಗೆ ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೆ ಮತ್ತೆ ಕನ್ನಡ ಮತ್ತು ಕರ್ನಾಟಕಕ್ಕೆ ಅನ್ಯಾಯವೆಸಗುತ್ತಾ ಬಂದಿದ್ದಾರೆ. ಇದೀಗ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿಯೂ ಸಚಿವರು ಈ ಅನ್ಯಾಯ ಮುಂದುವರಿಸಿದ್ದಾರೆ’ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News