ಬೆಂಗಳೂರು ಮಾರ್ಚ್ 25: ಕರ್ನಾಟದಿಂದ ರಾಜ್ಯಸಭೆಗೆ ಆಯ್ಕೆಯಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದಲೇ ರಾಜ್ಯಕ್ಕೆ ತೆರಿಗೆ ಹಂಚಿಕೆ ಅನುದಾನದಲ್ಲಿ ಅನ್ಯಾಯವಾಗುತ್ತಿದೆ. ಮಾರ್ಚ್ 31ಕ್ಕೆ ಅವರು ಮೈಸೂರಿಗೆ ಆಗಮಿಸುತ್ತಿದ್ದು, ಈ ಬಗ್ಗೆ ಬಹಿರಂಗ ಚರ್ಚೆಗೆ ಅವರು ಸಿದ್ದರಿದ್ದಾರ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸವಾಲೆಸೆದಿದ್ದಾರೆ.
ರಾಜ್ಯಕ್ಕೆ ಜಿಎಸ್‌ಟಿ ತೆರಿಗೆ ಹಂಚಿಕೆ ಬಾಕಿ ಬಗ್ಗೆ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಚಿವೆ ನಿರ್ಮಲಾ ಸೀತಾರಾಮನ್, “ ಕರ್ನಾಟಕಕ್ಕೆ ನೀಡಬೇಕಿರುವ ತೆರಿಗೆ ಪಾಲಿನಲ್ಲಿ ಯಾವುದೇ ಹಣ ಬಾಕಿ ಇಲ್ಲ” ಎಂದು ಹೇಳಿದ್ದರು. ಇದರ ಬೆನ್ನಿಗೆ ಸೋಮವಾರ ವಿಕಾಸಸೌಧದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ದಾಖಲೆ ಸಮೇತ ಬಿಚ್ಚಿಟ್ಟರು.
ಯಾವುದೇ ರಾಜ್ಯಕ್ಕೆ 2019- 20ರಲ್ಲಿ ಕೊಟ್ಟಿದ್ದಕ್ಕಿಂತ ಕಡಿಮೆ ಅನುದಾನವನ್ನು ಕೊಡುವಂತಿಲ್ಲ ಎಂದು ಹಣಕಾಸು ಆಯೋಗ ಹೇಳುತ್ತದೆ. ಹಣಕಾಸು ಆಯೋಗದವರು 2019-20ರಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಬಂದ ತೆರಿಗೆ ಪಾಲಿಗಿಂತ 2020-21 ರಲ್ಲಿ ರೂ. 5495 ಕೋಟಿ ಹಣ ಕಡಿಮೆಯಾಗಿತ್ತು. ಈ ಹಣವನ್ನು ರಾಜ್ಯಕ್ಕೆ ತುಂಬಿಕೊಡಬೇಕು ಎಂದು ಸ್ವತಃ ಹಣಕಾಸು ಆಯೋಗ ಶಿಫಾರಸ್ಸು ಮಾಡಿದರೂ ಸಚಿವೆ ನಿರ್ಮಲಾ ಸೀತಾರಾಮನ್ ಇದನ್ನು ತಡೆಹಿಡಿದದ್ದು ಏಕೆ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದರು.
ಇದನ್ನೂ ಓದಿ-ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಟಾಪ್ 5 ಸೌತ್ ನಟರಿವರು!!
ರಾಜ್ಯದ ಪಾಲಿನ ನ್ಯಾಯಯುತ ತೆರಿಗೆ ಹಂಚಿಕೆ ನಷ್ಟ ಪರಿಹಾರ ಕೇಳಿದರೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2021 ನೇ ವರ್ಷದ ಅಂತಿಮ ವರದಿಯಲ್ಲಿ ಹಣಕಾಸು ಆಯೋಗ ಶಿಫಾರಸ್ಸು ಮಾಡಿಲ್ಲ ಎನ್ನುತ್ತಿದ್ದಾರೆ. ಆದರೆ, ಹಣಕಾಸು ಆಯೋಗದ ಅಂತಿಮ ವರದಿಯ 36ನೇ ಪುಟದಲ್ಲಿ ಕರ್ನಾಟಕಕ್ಕೆ ನಷ್ಟ ತುಂಬಿಕೊಡಬೇಕು ಎಂದು ಬರೆಯಲಾಗಿದೆಯಲ್ಲ ಇದೇನು? ಎಂದು ಅವರು ಕುಟುಕಿದರು.
2019-20ರಲ್ಲಿ ರಾಜ್ಯಕ್ಕೆ ಕೇಂದ್ರದಿಂದ ರೂ. 36675 ಕೋಟಿ ತೆರಿಗೆ ಪಾಲು ಬಂದಿತ್ತು. 2020-21ಕ್ಕೆ ಕೇವಲ ರೂ.31180 ಕೋಟಿಗೆ ಕುಸಿದಿತ್ತು. ಹೀಗಾಗಿ ರಾಜ್ಯಕ್ಕೆ ಆಗಿರುವ ನಷ್ಟ ರೂ. 5495 ಕೋಟಿ ಹಣವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಹಣಕಾಸು ಆಯೋಗ ಶಿಫಾರಸು ಮಾಡಿದೆ. ಆದರೆ, ಈ ಹಣ ಈವರೆಗೆ ರಾಜ್ಯಕ್ಕೆ ಬಂದಿಲ್ಲ. 2021-26ನೇ ಸಾಲಿನಲ್ಲಿ ರೂ.6,000 ಕೋಟಿ ಶಿಫಾರಸು ಮಾಡಲಾಗಿದೆ. ಒಟ್ಟಾರೆ, ರೂ.11495 ಕೋಟಿ ಹಣ ರಾಜ್ಯಕ್ಕೆ ಬರಬೇಕಿದೆ.
ಈ ಬಗ್ಗೆ ಪ್ರಶ್ನೆ ಮಾಡಿದರೆ ನಿರ್ಮಲಾ ಸೀತಾರಾಮನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳುತ್ತಿರುವುದು ಸುಳ್ಳು ಎನ್ನುತ್ತಿದ್ದಾರೆ. ಅಸಲಿಗೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸೆಪ್ಟೆಂಬರ್ 17 2020ರಲ್ಲಿ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ಕೋರಿದ್ದರು. ಬಸವರಾಜು ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಸೀತಾರಾಮನ್ ಅವರಿಗೆ ಪತ್ರ ಬೆರೆದಿದ್ದರು. ಈ ಎಲ್ಲಾ ವಿಚಾರಗಳೂ ದಿನಪತ್ರಿಕೆಗಳಲ್ಲೂ ಸಹ ವರದಿಯಾಗಿತ್ತು. ಹಾಗಾದರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿಯವರೂ ಸಹ ಸುಳ್ಳು ಹೇಳಿದ್ದರಾ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾತಿನಲ್ಲೇ ತಿವಿದರು.
ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದೆಡೆ ಹಣಕಾಸು ಆಯೋಗದ ಒಂದೇ ಒಂದು ಶಿಫಾರಸ್ಸನ್ನು ಸಹ ನಾವು ತಿದ್ದಲು ಹೋಗುವುದಿಲ್ಲ ಎನ್ನುತ್ತಾರೆ. ಮತ್ತೊಂದೆಡೆ ರಾಜ್ಯಗಳಿಗೆ ನೀಡುವ ವಿಶೇಷ ಅನುದಾನವನ್ನು ಹಿಂಪಡೆಯುವಂತೆ ಹಣಕಾಸು ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ಲೋಕಸಭೆಯಲ್ಲೇ ಉತ್ತರ ನೀಡುತ್ತಾರೆ. ಹಾಗಾದ್ರೆ ರಾಜ್ಯದ ಪಾಲಿನ ಹಣವನ್ನು ತಡೆಹಿಡಿಯಲು ಮಾತ್ರ ಇವರ ಕಾನೂನುಗಳು ಇರುವುದಾ? ಎಂದು ವಿಷಾದಿಸಿದರು.
ನಾವು ಕೇಳುತ್ತಿರುವುದು ಭಿಕ್ಷೆಯಲ್ಲ..!
ಹಣಕಾಸು ಆಯೋಗದ ಶಿಫಾರಸು ಮಾಡಿದ ನಮ್ಮ ಅನುದಾನವನ್ನು ನಾವು ಸಂವಿಧಾನಾತ್ಮಕವಾಗಿಯೇ ಕೇಳುತ್ತಿದ್ದೇವೆಯೇ ವಿನಃ ನಾವೇನು ಭಿಕ್ಷೆ ಕೇಳುತ್ತಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಆಕ್ರೋಶ ಹೊರಹಾಕಿದರು.
ನಮ್ಮ ರಾಜ್ಯದ ಹಕ್ಕನ್ನು ಕೇಳಿದರೆ ಕೇಂದ್ರ ಸರ್ಕಾರ ನಾವು ಸುಳ್ಳು ಹೇಳುತ್ತಿದ್ದೇವೆ ಎಂದು ಆರೋಪ ಹೊರಿಸಿ ಕರ್ನಾಟಕದ ಜನರಿಗೆ ಅನ್ಯಾಯ ಮಾಡುತ್ತಿದೆ. ಸ್ವತಃ ಕರ್ನಾಟಕದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರು ಹೀಗೆ ರಾಜ್ಯದ ಹಿತದ ವಿಚಾರದಲ್ಲಿ ಸುಳ್ಳು ಹೇಳಿ ಜನರನ್ನು ಗೊಂದಲಕ್ಕೀಡು ಮಾಡುತ್ತಿರುವುದು ಸರಿಯಲ್ಲ. ತೆರಿಗೆ ಪಾಲು ಹಂಚಿಕೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮೈಸೂರಿನಲ್ಲಿ ಬಹಿರಂಗ ಚರ್ಚೆಯಾಗಲಿ. ಈ ಚರ್ಚೆಗೆ ನಾವು ಸಿದ್ದ ಮಾನ್ಯ ನಿರ್ಮಲಾ ಸೀತಾರಾಮನ್ ಅವರು ಸಿದ್ದವಿದ್ದಾರ? ಎಂದು ಅವರು ಇದೇ ಸಂದರ್ಭದಲ್ಲಿ ಸವಾಲು ಹಾಕಿದರು.
ಇದನ್ನೂ ಓದಿ-The Great Indian Kapil Show ಟ್ರೇಲರ್ ಬಿಡುಗಡೆ, ಷೋಗೆ ಗುಥ್ಥಿ ಪಾತ್ರದ ಮರುಪ್ರವೇಶ!
ಅಲ್ಲದೆ, ಈ ವಿಚಾರದಲ್ಲಿ ಕೆಸರೆರಚಾಟ, ರಾಜಕೀಯ ತೆವಲಾಟ ಆಗಬಾರದು. ಕರ್ನಾಟಕದಂತಹ ಪ್ರಗತಿಪರ ರಾಜ್ಯಗಳಿಗೆ ಮಲತಾಯಿ ಧೋರಣೆ ಅನ್ಯಾಯ ಮಾಡಬಾರದು ಎಂದು ಅವರು ಕೇಂದ್ರ ಸರ್ಕಾರವನ್ನು ವಿನಂತಿಸಿದರು.
ಗ್ಯಾರಂಟಿಗೆ ಕೇಂದ್ರದಿಂದ ನಯಾಪೈಸೆಯೂ ಬೇಕಾಗಿಲ್ಲ:
ಗ್ಯಾರಂಟಿಗೆ ಕೇಂದ್ರ ಸರ್ಕಾರದ ನಯಾಪೈಸೆಯೂ ಬೇಕಾಗಿಲ್ಲ. ನಮ್ಮ ಗ್ಯಾರಂಟಿಗೆ ಬೇಕಾದ ಹಣವನ್ನು ನಾವೇ ಹೊಂದಿಸಿಕೊಳ್ಳುತ್ತಿದ್ದೇವೆ .ಗ್ಯಾರಂಟಿ ಜೊತೆಗೆ ನಿವೃತ್ತಿ ವೇತನ ರೂ.11200 ಕೋಟಿ ಹಣವನ್ನೂ ಸಹ ರಾಜ್ಯ ಸರ್ಕಾರವೇ ನೀಡುತ್ತಿದೆ. ಈ ಹಣದ ಪೈಕಿ ಕೇಂದ್ರ ಸರ್ಕಾರದ ಪಾಲು ರೂ. 550 ಕೋಟಿ ಮಾತ್ರ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.
ನಮ್ಮ ಗ್ಯಾರಂಟಿ ಯೋಜನೆಗಳಿಗೆ ಇವರಿಂದ ನಯಾಪೈಸೆಯೂ ಬೇಕಾಗಿಲ್ಲ. ನಮ್ಮ ತೆರಿಗೆಯಿಂದ ನಮ್ಮ ನ್ಯಾಯಯುತ ಪಾಲನ್ನು ಕೊಟ್ಟರೆ ಸಾಕು. ನಮ್ಮ ರಾಜ್ಯಕ್ಕೆ ಬರಬೇಕಾದ ಬರಪರಿಹಾರವನ್ನು ಕೊಡಲಿ. ನಿಮ್ಮ ಉದಾರತನವೇನು ಬೇಕಾಗಿಲ್ಲ. ಕರ್ನಾಟಕದ ಜನ ಇರುವುದು ಕೇವಲ ಓಟು ಒತ್ತೋಕಷ್ಟೇ ಎಂಬ ಭಾವನೆಯಿಂದ ಕೇಂದ್ರ ಸರ್ಕಾರ ಹೊರಬರಲಿ. ನಮ್ಮನ್ನು ದ್ವಿತೀಯ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುವುದನ್ನು ಬಿಡಲಿ. ನಮ್ಮ ಹಕ್ಕನ್ನು ನಮಗೆ ಕೊಡಲಿ ಎಂದು ಅವರು ಒತ್ತಾಯಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.