ಬೆಂಗಳೂರು: ಧನವಿನಿಯೋಗ ವಿಧೇಯಕಕ್ಕೆ ಅನುಮೋದನೆ ಸಿಕ್ಕ ಬಳಿಕ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ತಮ್ಮ ಸ್ಥಾನದಿಂದ ನಿರ್ಗಮಿಸಲಿದ್ದಾರೆ.
ಧನವಿನಿಯೋಗ ಮಸೂದೆಗೆ ಒಪ್ಪಿಗೆ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ. ಧನವಿನಿಯೋಗ ಮಸೂದೆಗೆ ಅನುಮೋದನೆ ದೊರೆಗೆ ಬಳಿಕ ತಮ್ಮ ಸ್ಥಾನದಿಂದ ಕೆಳಗಿಳಿಯುವುದಾಗಿ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಭಾನುವಾರ ತಿಳಿಸಿದ್ದಾರೆ.
ಶುಕ್ರವಾರದಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಸದನದಲ್ಲಿ ಇಂದು ಬಹುಮತ ಸಾಬೀತುಪಡಿಸಲಿದ್ದಾರೆ. ಅಲ್ಲದೆ ಧನವಿನಿಯೋಗ ವಿಧೇಯಕಕ್ಕೂ ಅನುಮೋದನೆ ಸಿಗಬೇಕಿರುವ ಕಾರಣ ಸೋಮವಾರ ಅಧಿವೇಶನ ಕರೆಯಲಾಗಿದೆ.
ಸೋಮವಾರ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ ಭಾನುವಾರದಂದು ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್, ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಕಾಂಗ್ರೆಸ್-ಜೆಡಿಎಸ್‌ನ ಎಲ್ಲಾ 17 ಶಾಸಕರನ್ನು ಈ ಅವಧಿಗೆ ಅನರ್ಹಗೊಳಿಸಿದ್ದರು.
ಮೈತ್ರಿ ಸರ್ಕಾರದ ಅಧಿಕಾರಾವಧಿಯಲ್ಲಿ ಸ್ಪೀಕರ್ ಆಗಿ ಆಯ್ಕೆಯಾಗಿದ್ದ ಕೆ.ಆರ್.ರಮೇಶ್ ಕುಮಾರ್, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಇಂದು ವಿಶ್ವಾಸಮತ ಯಾಚನೆ ಮತ್ತು ಧನ ವಿನಿಯೋಗ ವಿಧೇಯಕ ಮಂಡನೆ ಬಳಿಕ ತಮ್ಮ ಸ್ಥಾನದಿಂದ ನಿರ್ಗಮಿಸಲಿದ್ದಾರೆ.