Corona Vaccine: ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ತೀವ್ರ ಕೊರತೆ

Corona Vaccine: ರಾಜ್ಯದಲ್ಲಿ ಕೋವಾಕ್ಸಿನ್ ಲಸಿಕೆಯ ತೀವ್ರ ಕೊರತೆಯಿಂದಾಗಿ ಮಕ್ಕಳ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾದಂತಾಗಿದೆ. 

Written by - Yashaswini V | Last Updated : Feb 10, 2022, 10:40 AM IST
  • ಮಕ್ಕಳ ಲಸಿಕೆ ಆರಂಭದ ಬಳಿಕ ಹೆಚ್ಚಾದ ಕೋವ್ಯಾಕ್ಸಿನ್ ಬೇಡಿಕೆ
  • ರಾಜ್ಯದಲ್ಲಿ 15 ರಿಂದ 17 ವರ್ಷದ 32 ಲಕ್ಷ ಮಕ್ಕಳಿದ್ದಾರೆ
  • ಜನವರಿ 3 ರಂದು ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ಆರಂಭವಾಗಿದೆ
Corona Vaccine: ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ತೀವ್ರ ಕೊರತೆ  title=
Corona Vaccine Shortage in Karnataka

Corona Vaccine: ದೇಶಾದ್ಯಂತ ಮಕ್ಕಳ ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿದೆ. ಮತ್ತೊಂದೆಡೆ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಮತ್ತು  ಅಸ್ವಸ್ಥತೆಯಿಂದ ಬಳಲುತ್ತಿರುವ ಹಿರಿಯ ನಾಗರಿಕರು ಮುನ್ನೆಚ್ಚರಿಕೆ ಡೋಸ್ ಪಡೆಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಕೋವ್ಯಾಕ್ಸಿನ್‌ ಲಸಿಕೆಯ (Covaxin vaccine) ಕೊರತೆಯಿಂದಾಗಿ  ಮಕ್ಕಳ ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾದಂತಾಗಿದೆ. ಮಾತ್ರವಲ್ಲ ಮುನ್ನೆಚ್ಚರಿಕೆ ಡೋಸ್ ಪಡೆಯುವವರೂ ಸಹ ಅಲೆದಾಡುವಂತಾಗಿದೆ.

ವಾಸ್ತವವಾಗಿ, 2022ರ ಜನವರಿ 3ರಿಂದ ದೇಶಾದ್ಯಂತ ಮಕ್ಕಳಿಗೆ ಕರೋನಾ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದ ಕೇಂದ್ರ ಸರ್ಕಾರ ಕೋವ್ಯಾಕ್ಸಿನ್‌ ಲಸಿಕೆಯನ್ನು (Covaxin vaccine) ನೀಡಲು ಮಾತ್ರ ಅನುಮತಿ ನೀಡಿತ್ತು. ಮಕ್ಕಳ ಲಸಿಕೆ ಅಭಿಯಾನಕ್ಕೆ ಭಾರೀ ಉತ್ಸಾಹ ಕೂಡ ವ್ಯಕ್ತವಾಗಿತ್ತು.  

ರಾಜ್ಯದಲ್ಲಿ 15 ರಿಂದ 17 ವರ್ಷದ 32 ಲಕ್ಷ ಮಕ್ಕಳಿದ್ದಾರೆ. ಅವರಲ್ಲಿ ಮಕ್ಕಳು ಈವರೆಗೆ 23 ಲಕ್ಷ ಮಕ್ಕಳು ಲಸಿಕೆ ಪಡೆದಿದ್ದಾರೆ. ಈ ಪೈಕಿ 7 ಲಕ್ಷ ಮಕ್ಕಳಿಗೆ ಎರಡೂ ಡೋಸ್ ಪೂರ್ಣಗೊಂಡಿದೆ. ಉಳಿದ ಮಕ್ಕಳಿಗೆ ಇದೀಗ ವ್ಯಾಕ್ಸಿನ್ ಅಭಾವದ ಸಮಸ್ಯೆ ಎದುರಾಗಿದೆ. 

ಇದನ್ನೂ ಓದಿ- ಕೋವಿಡ್-19 ಲಸಿಕೆಗೆ ಆಧಾರ್ ಕಡ್ಡಾಯವಲ್ಲ: ಸುಪ್ರೀಂಗೆ ಕೇಂದ್ರ ಸರ್ಕಾರದ ಮಾಹಿತಿ

ಜನವರಿ ಮೊದಲ ವಾರದಲ್ಲಿ ಕೋವಿಡ್-19 ಲಸಿಕೆಯ (Covid-19 Vaccine) ಮೊದಲ ಡೋಸ್ ಪಡೆದಿದ್ದ 15-17 ವರ್ಷದ ಮಕ್ಕಳಿಗೆ ಈಗಾಗಲೇ ಎರಡನೇ ಡೋಸ್ ಅವಧಿ ಬಂದಿದೆ. ಆದರೆ, 28 ದಿನಗಳ ಬಳಿಕ ಎರಡನೇ ಡೋಸ್ ಗಾಗಿ ಲಸಿಕಾ ಕೇಂದ್ರಗಳಿಗೆ ಬರುತ್ತಿರುವ ಮಕ್ಕಳು ಬರಿಗೈಯಲ್ಲಿ ಹಿಂದಿರುಗುತ್ತಿದ್ದಾರೆ.

ಲಸಿಕೆ ಅಭಾವಕ್ಕೆ ಕಾರಣವೇನು?
ವಾಸ್ತವವಾಗಿ,  ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದೆ. ಆದರೆ, ಸದ್ಯಕ್ಕೆ 
ಕೋವಿಶೀಲ್ಡ್ ಲಸಿಕೆ (Covishield Vaccine) ಮಾತ್ರ ಲಭ್ಯವಿದ್ದು,  ಕೇಂದ್ರದಿಂದ ಕೋವ್ಯಾಕ್ಸಿನ್‌ ಲಸಿಕೆ ಪೂರೈಕೆ ಪ್ರಮಾಣ ಕಡಿಮೆ ಆಗಿರುವುದರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೋವ್ಯಾಕ್ಸಿನ್‌ ಲಸಿಕೆ ತೀವ್ರ ಕೊರತೆ ಎದುರಾಗಿದೆ. 

ಬೂಸ್ಟರ್ ಡೋಸ್ ಗೂ ಇಲ್ಲ ಕೋವ್ಯಾಕ್ಸಿನ್ ಲಸಿಕೆ:
ಮಕ್ಕಳಿಗೆ ಲಸಿಕೆ ಕೊರತೆ ಎದುರಾಗಿರುವುದು ಮಾತ್ರವಲ್ಲ, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೂ ಬೂಸ್ಟರ್ ಡೋಸ್ ಕೊರತೆ ಉಂಟಾಗಿದೆ. ಮೊದಲೆರಡು ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದಿರುವವರು ಮೂರನೇ ಡೋಸ್ ಕೂಡಾ ಅದೇ ಲಸಿಕೆಯನ್ನು ಪಡೆಯಬೇಕು. ಆದರೆ, ಲಸಿಕಾ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್‌ ಲಸಿಕೆ ಲಭ್ಯವಿಲ್ಲದ ಕಾರಣ ಬೂಸ್ಟರ್ ಡೋಸ್ (Booster Dose) ಪಡೆಯಲು ಲಸಿಕಾ ಕೇಂದ್ರಗಳಿಗೆ ಬರುತ್ತಿರುವವರು ಬರಿಗೈನಲ್ಲಿ ಹಿಂದಿರುಗುವಂತಾಗಿದೆ.

ಇದನ್ನೂ ಓದಿ- WHO: ಆರೋಗ್ಯವಂತ ಮಕ್ಕಳಿಗೆ ಕರೋನಾ ಬೂಸ್ಟರ್ ಡೋಸ್ ಬೇಕೇ? WHO ಮುಖ್ಯ ವಿಜ್ಞಾನಿ ಹೇಳಿದ್ದೇನು?

ಕಳೆದ ಐದು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಇದೇ ಸಮಸ್ಯೆ ಎದುರಾಗಿದ್ದು ಆರೋಗ್ಯ ಇಲಾಖೆಯ ಅಧಿಕಾರಿಗಳೂ ಸಹ ಇದನ್ನು ಒಪ್ಪಿಕೊಂಡಿದ್ದಾರೆ. ಬೆಂಗಳೂರಿಗೆ ಕೋವಿಶೀಲ್ಡ್ 3 ಲಕ್ಷ ದಾಸ್ತಾನು ಬಂದಿದ್ದು, ಕೇವಲ 60 ಸಾವಿರ ಕೋವ್ಯಾಕ್ಸಿನ್ ಮಾತ್ರ ಲಭ್ಯವಾಗಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News