ಮತದಾರರ ಪಟ್ಟಿ ಪರಿಷ್ಕರಣೆ ಅವಧಿ ಜ.12ರವರೆಗೆ ವಿಸ್ತರಣೆ

 ಬಿಬಿಎಂಪಿ ವ್ಯಾಪ್ತಿಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಸರು ನೋಂದಾಯಿಸಲು ಜನವರಿ 12ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

Last Updated : Jan 4, 2018, 08:01 PM IST
ಮತದಾರರ ಪಟ್ಟಿ ಪರಿಷ್ಕರಣೆ ಅವಧಿ ಜ.12ರವರೆಗೆ ವಿಸ್ತರಣೆ title=

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯನ್ನು ವಿಸ್ತರಿಸಿದ್ದು, ಜನವರಿ 12ರವರೆಗೆ ವಿಶೇಷ ಪರಿಷ್ಕರಣೆಗೆ ಅವಕಾಶ ನೀಡಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬಿಬಿಎಂಪಿ ವ್ಯಾಪ್ತಿಯ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಸರು ನೋಂದಾಯಿಸಲು ಜನವರಿ 12ರ ವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು. 

ಬಿಬಿಎಂಪಿ ವ್ಯಾಪ್ತಿಯಲ್ಲಿ 8,284 ಬೂತ್ ಗಳ ರಚನೆ ಮಾಡಿದ್ದು ವಾರ್ಡ್ಗಳಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.  ಜನವರಿ 12 ರ ನಂತರ ಬಂದ  ಅರ್ಜಿಗಳನ್ನು ಪರಿಷ್ಕರಣೆ ಮಾಡಿ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು. ಫೆಬ್ರವರಿ 20ಕ್ಕೆ ಪರಿಷ್ಕೃತ ಮತದಾರರ ಪಟ್ಟಿ ಪ್ರಕಟ ಮಾಡಲಾಗುವುದು. ನಂತರವೂ ಬಂದ  ಅರ್ಜಿಗಳನ್ನು ಸ್ವೀಕರಿಸಲಾಗುವುದು. ಆದರೆ ಮುಂಬರುವ ಚುನಾವಣಾ ದೃಷ್ಟಿಯಿಂದ ಅವಧಿಗೂ ಮುನ್ನ ಅರ್ಜಿ ಸಲ್ಲಿಸುವುದು ಉತ್ತಮ ಎಂದು ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

ಜನವರಿ 1 ರವರೆಗೆ ಸಿಲಿಕಾನ್ ಸಿಟಿಯಲ್ಲಿ ಒಟ್ಟು 85,92,815 ಮತದಾರರ ನೊಂದಣಿಯಾಗಿದ್ದು, ಹೊಸದಾಗಿ 95 ಸಾವಿರ ಮಂದಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ 25483 ಮಂದಿ ಹೆಸರು ಡಿಲೀಟ್ ಮಾಡಿಸಿದ್ದಾರೆ. 15206 ಜನರು ಹೆಸರು ಬದಲಾವಣೆ ಮಾಡಿಸಿದ್ದಾರೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Trending News