Leopard Attack: ಮೈಸೂರು: ತಿಂಗಳ ಹಿಂದೆಯಷ್ಟೇ ಚಿರತೆ ದಾಳಿಯಿಂದ ಎಂ.ಎಲ್.ಹುಂಡಿಯ ಯುವಕನೊಬ್ಬ ಬಲಿಯಾದ ನೆನಪು ಮಾಸುವ ಮುನ್ನವೇ ಚಿರತೆ ಮತ್ತೊಂದು ಬಲಿಯನ್ನು ಪಡೆದಿದೆ. ಈ ಮೂಲಕ ಮಾನವ ಪ್ರಾಣಿ ಸಂಘರ್ಷ ಮುಂದುವರೆದಿದೆ.
ಮೈಸೂರು ಜಿಲ್ಲೆಯಲ್ಲಿ ಮತ್ತೆ ಚಿರತೆ ತನ್ನ ಬೇಟೆ ಮುಂದುವರೆಸಿದ್ದು, ಟಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದ ಮೇಘನಾ (22) ಎಂಬ ಯುವತಿಯನ್ನು ಬಲಿ ಪಡೆದಿದೆ.
ಮೇಘನಾ ಎಂಬ ಯುವತಿ ಹಿತ್ತಲಿಗೆ ಹೋಗಿದ್ದ ಸಮಯದಲ್ಲಿ ಚಿರತೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ.
ಇದನ್ನೂ ಓದಿ- ವಿಶ್ವ ಪ್ರಸಿದ್ದ ಕೆಆರ್‌ಎಸ್ ಬೃಂದಾವನದಲ್ಲಿ ಚಿರತೆ ಹಾವಳಿ
ಇನ್ನು ಚಿರತೆ ಸೆರೆ ಹಿಡಿಯುವಂತೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದರೂ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಈಗ ಮತ್ತೊಂದು ಬಡ ಜೀವ ಬಲಿಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತದ ವಿರುದ್ಧ ಸಾರ್ವಜನಿಕರ ಆಕ್ರೋಶ:
ಕಳೆದ ತಿಂಗಳಷ್ಟೇ ಚಿರತೆ ದಾಳಿಯಿಂದ ಯುವಕ ಸಾವನ್ನಪ್ಪಿದ್ದು, ಈಗ ಯುವತಿಯ ಬಲಿ ಪಡೆದಿದೆ. ಚಿರತೆ ದಾಳಿಯಿಂದ ನಿರಂತರ ದಾಳಿ ನಡೆಯುತ್ತಿದ್ದರೂ ಚಿರತೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತ ವಿಫಲತೆ ಕಂಡಿದೆ ಎಂದು ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ- Mandya: ಕುರಿ ತಿನ್ನಲು ಬಂದು ಕೊಟ್ಟಿಗೆಯಲ್ಲಿ ಸಿಲುಕಿದ ಚಿರತೆ..!
ಚಿರತೆ ದಾಳಿಯಿಂದ ಯುವತಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು, ದುರ್ಘಟನೆಗೆ ಸಂತಾಪ ಸೂಚಿಸಿದರು. ಸ್ಥಳದಲ್ಲೇ ಪ್ರತಿಭಟನಾ ನಿರತರ ಜೊತೆ ಧರಣಿಗೆ ಕೂತ ಶಾಸಕರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಬೇಕು ಎಂದು ಪಟ್ಟುಹಿಡಿದರು. ಸ್ಥಳದಲ್ಲಿ ಡಿವೈಎಸ್ಪಿ ಗೋವಿಂದರಾಜು, ಪಿಎಸ್ಐ ತಿರುಮಲ್ಲೇಶ್, ಡಾ.ಭಾರತಿ, ಡಾ.ರೇವಣ್ಣ ಇತರರು ಉಪಸ್ಥಿತರಿದ್ದರು.
ರಾಜ್ಯ ರಾಜಧಾನಿಗೂ ಎಂಟ್ರಿ ಕೊಟ್ಟಿರುವ ಚಿರತೆಗಳು!
ಏತನ್ಮಧ್ಯೆ, ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಗೆ ಚಿರತೆಗಳ ಗುಂಪು ಎಂಟ್ರಿ ಕೊಟ್ಟಿದೆ. ಒಂದಲ್ಲ, ಎರಡಲ್ಲ.. ಬರೋಬ್ಬರಿ ನಾಲ್ಕು ಚಿರತೆ ಪ್ರತ್ಯಕ್ಷವಾಗಿವೆ. ಬೆಂಗಳೂರು ಹೊರವಲಯದ ತುರಹಳ್ಳಿ ಫಾರೆಸ್ಟ್‌ನಲ್ಲಿ ಪ್ರತ್ಯಕ್ಷವಾಗಿದ್ದು, ಚಿರತೆ ನೋಡಿ ಪ್ರತ್ಯಕ್ಷದರ್ಶಿಗಳು ಭಯ ಬಿದ್ದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.