ಬೆಂಗಳೂರು: 15ನೇ ವಿಧಾನಸಭೆ ಮತ್ತೊಮ್ಮೆ ವಿಶ್ವಾಸಮತ ಯಾಚನೆಗೆ ಸಿದ್ದವಾಗಿದ್ದು, ಶುಕ್ರವಾರದಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಿ.ಎಸ್ ಯಡಿಯೂರಪ್ಪ ಇಂದು ಬಹುಮತ ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜುಲೈ 25 ರಂದು ಮೂವರು ಶಾಸಕರನ್ನು ಅನರ್ಹತೆಗೊಳಿಸಿ ತೀರ್ಪು ಪ್ರಕಟಿಸಿದ್ದ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್, ಭಾನುವಾರ 14 ಶಾಸಕರನ್ನು ಅನರ್ಹಗೊಳಿಸಿ ತೀರ್ಪು ಪ್ರಕಟಿಸಿದರು. ಇದರೊಂದಿಗೆ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಕಾಂಗ್ರೆಸ್-ಜೆಡಿಎಸ್‌ನ ಎಲ್ಲಾ 17 ಶಾಸಕರನ್ನು ಈ ಅವಧಿಗೆ ಅನರ್ಹಗೊಂಡಿದ್ದಾರೆ. ಇದರಿಂದಾಗಿ 225 ಸದಸ್ಯ ಬಲವುಳ್ಳ ಸದನದ ಸದ್ಯದ ಬಲಾಬಲ 208 ಆಗಿದೆ. ಈ ಹಿನ್ನಲೆಯಲ್ಲಿ ಬಹುಮತ ಸಾಬೀತುಪಡಿಸಲು ನೂತನ ಸರ್ಕಾರಕ್ಕೆ ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ 104 ಆಗಿದೆ. ಈಗಾಗಲೇ ಬಿಜೆಪಿ 105 ಸಂಖ್ಯೆಯನ್ನು ಹೊಂದಿರುವದರಿಂದ ಬಿಜೆಪಿಗೆ ಬಹುಮತದ ಹಾದಿ ಸುಲಭವಾಗಿತ್ತು.