ಕಾಫಿತೋಟದಲ್ಲಿದ್ದ ‘ಮಕ್ನಾ’ ಇನ್ಮುಂದೆ ಕ್ರಾಲ್‌ನಲ್ಲಿ ಬಂಧಿ..!

ಸಕಲೇಶಪುರ : ಮಲೆನಾಡು ಭಾಗದಲ್ಲಿ ದಾಂಧಲೆ ನಡೆಸುತ್ತ ಪುಂಡಾಟ ಮೆರೆಯುತ್ತಿದ್ದ ‘ಓಲ್ಡ್ ಮಕ್ನಾ’ ಎಂಬ ಕಾಡಾನೆಯನ್ನು ಶುಕ್ರವಾರ ತಾಲ್ಲೂಕಿನ ಬಾಗೆ ಗ್ರಾಮದ ಟಾಟಾ ಎಸ್ಟೇಟ್‌ನಲ್ಲಿ ಗಜಪಡೆಯ ನೆರವಿನೊಂದಿಗೆ ಸೆರೆ ಹಿಡಿದು ಮತ್ತಿಗೋಡು ಸಾಕಾನೆ ಶಿಬಿರಕ್ಕೆ ರವಾನಿಸಲಾಯಿತು.   

Written by - Zee Kannada News Desk | Last Updated : May 20, 2023, 07:45 AM IST
  • ಊರೂರು ತಿರುಗಿ ದಾಂಧಲೆ ನಡೆಸುತ್ತಿದ್ದ ‘ಓಲ್ಡ್ ಮಕ್ನಾ’ ಕಾಡಾನೆ ಬಂಧನ
  • ಸರ್ಕಾರದಿಂದ ಅನುಮತಿ ಪಡೆದ ಅರಣ್ಯ ಇಲಾಖೆ ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಿತ್ತು
  • ನಿರಂತರ ಉಪಟಳ ನೀಡುತ್ತಿದ್ದ ಆನೆಯನ್ನು ಸೆರೆ ಹಿಡಿದಿರುವುದರಿಂದ ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಕಾಫಿತೋಟದಲ್ಲಿದ್ದ ‘ಮಕ್ನಾ’ ಇನ್ಮುಂದೆ ಕ್ರಾಲ್‌ನಲ್ಲಿ ಬಂಧಿ..! title=

ನ್ಯಾಯಬೆಲೆ ಅಂಗಡಿ, ಮನೆಗಳ ಮೇಲೆ ದಾಳಿ ನಡೆಸುತ್ತಿದ್ದ ಈ ಕಾಡಾನೆಯನ್ನು ಒಮ್ಮೆ ಸೆರೆಹಿಡಿದು ದೂರದ ಮಲೆ ಮಲೇಮಹದೇಶ್ವರ ಬೆಟ್ಟಕ್ಕೆ ಬಿಟ್ಟು ಬಂದರೂ ಅಚ್ಚರಿ ಎಂಬಂತೆ ವಾಪಸ್ ಬಂದು ಪುನಃ ತನ್ನ ಪುಂಡಾಟವನ್ನು ಮುಂದುವರೆಸಿತ್ತು, ಇದೀಗ ಸೆರೆ ಹಿಡಿಯಲಾಗಿದೆ. ಇಷ್ಟು ದಿನ ಕಾಫಿ ತೋಟದಲ್ಲಿ ಸುತ್ತಾಡುತ್ತ, ಊರೂರು ತಿರುಗಿ ದಾಂಧಲೆ ನಡೆಸುತ್ತಿದ್ದ ‘ಓಲ್ಡ್ ಮಕ್ನಾ’ ಕಾಡಾನೆ ಇನ್ಮುಂದೆ ಮತ್ತಿಗೋಡು ಸಾಕಾನೆ ಶಿಬಿರದ ಕ್ರಾಲ್‌ನಲ್ಲಿ ಬಂಧಿಸಿ, ಪಳಗಿಸಲಾಗುತ್ತದೆ.

ಸರ್ಕಾರದಿಂದ ಅನುಮತಿ ಪಡೆದ ಅರಣ್ಯ ಇಲಾಖೆ ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಿ ಮೂರು ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ, ಗುರುವಾರ ಓಲ್ಡ್ ಮಕ್ನಾ ಅನೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲು ಮುಂದಾಗಿತ್ತು. ಆದರೆ, ಕಾರ್ಯಾಚರಣೆಗೆ ಬಂದಿದ್ದ ಒಂದು ಆನೆಗೆ ಅನಾರೋಗ್ಯ ಉಂಟಾಗಿದ್ದು, ದುಬಾರೆ ಆನೆ ಶಿಬಿರದಿಂದ ಬರಬೇಕಿದ್ದ ಎರಡು ಆನೆಗಳು ಬರುವುದು ತಡವಾಗಿದ್ದರಿಂದ ಕಾರ್ಯಾಚರಣೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.

ಇದನ್ನೂ ಓದಿ-ಸಿಇಟಿ ಪರೀಕ್ಷೆ ದಿನವೇ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಪ್ರಮಾಣ ವಚನ: ವಿದ್ಯಾರ್ಥಿಗಳಿಗೆ ಟ್ರಾಫಿಕ್‌ ಸಮಸ್ಯೆ ಭೀತಿ

ಅಭಿಮನ್ಯು, ಹರ್ಷ, ಧನಾಂಜಯ ಸೇರಿ ಒಟ್ಟು 5 ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಎಲಿಫೆಂಟ್ ಟಾಸ್ಕ್ ಪೋರ್ಸ್ ಜೊತೆಗೂಡಿ ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಲಾಯಿತು. ರೇಡಿಯೋ ಕಾಲರ್ ಅಳವಡಿಸಿದ್ದರಿಂದ ಓಲ್ಡ್ ಮಕ್ನಾ ಆನೆ ಮೇಲೆ ನಿಗಾವಹಿಸಲಾಗಿತ್ತು. ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಮಕ್ನಾ ಆನೆಯನ್ನು ಪತ್ತೆ ಹಚ್ಚಿ, ಒಂದಲ್ಲ.. ಎರಡಲ್ಲ.. ಮೂರು ಬಾರಿ ಅರಿವಳಿಕೆ ಮದ್ದು ನೀಡಲಾಯಿತು. 

ಆದರೂ ಕಳೆಗೆ ಬೀಳದ ಈ ಆನೆ, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಿಲ್ಲದೆ ಸತಾಯಿಸಿತು. ಬಳಿಕ ಸಾಕಾನೆಗಳ ಸಹಾರದಿಂದ ಅರಣ್ಯ ಇಲಾಖೆ ಸಿಬ್ಬಂದಿ ಖೆಡ್ಡಾಕ್ಕೆ ಬೀಳಿಸಿದರು. ಕಾಲು ಹಾಗು ಕುತ್ತಿಗೆಗೆ ಬಲವಾದ ಹಕ್ಕ ಕಟ್ಟಿ, ಕಾಫಿತೋಟದಿಂದ ಹೊರ ತರಲಾಯಿತು. ಈ ನಡುವೆ ಭಾರೀ ವಿರೋಧ ವ್ಯಕ್ತಪಡಿಸಿದ ಮಕ್ನಾಗೆ ಅಭಿಮನ್ಯು ಬಲ ಪ್ರದರ್ಶನ ಮಾಡಿ ಮುಖ್ಯರಸ್ತೆಗೆ ತಂದ ಬಳಿಕ ಕ್ರೇನ್ ಸಹಾಯದಿಂದ ಲಾರಿಗೆ ತುಂಬಿ ಮತ್ತಿಗೋಡು ಶಿಬಿರಕ್ಕೆ ಕಳುಹಿಸಲಾಯಿತು. 

ಏನಿದು ಮಕ್ನಾ: 
ಗಂಡು ಅಲ್ಲ, ಹೆಣ್ಣು ಅಲ್ಲ ಎಂಬ ಕಾರಣಕ್ಕೆ ಈ ಆನೆಗೆ ಮಕ್ನಾ ಎಂದು ಕರೆಯಲಾಗುತ್ತದೆ. ಈ ಆನೆಯನ್ನು ಇತರೆ ಕಾಡಾನೆಗಳು ತಮ್ಮ ಗುಂಪಿನೊಳಗೆ ಬಿಟ್ಟುಕೊಳ್ಳುವುದಿಲ್ಲ. ಆದ್ದರಿಂದ ಈ ಆನೆ ಒಂಟಿಯಾಗಿ ಸುತ್ತಾಡುತ್ತದೆ, ಅಲ್ಲದೆ ದಾಂಧಲೆ ನಡೆಸುತ್ತದೆ. ಸಕಲೇಶಪುರ ಭಾಗದಲ್ಲಿ ಓಲ್ಡ್ ಮಕ್ನಾ ಮತ್ತು ನ್ಯೂವ್ ಎಂಬ ಎರಡು ಆನೆಗಳನ್ನು ಗುರುತಿಸಿದ್ದು, ಇದೀಗ ಒಂದು ಆನೆಯನ್ನು ಸೆರೆ ಹಿಡಿಯಲಾಗಿದೆ. 

ಇದನ್ನೂ ಓದಿ-DK Shivakumar: ನೂತನ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಧ್ವನಿಯಾಗಿ ಕೆಲಸ ಮಾಡಲಿದೆ - ಡಿ.ಕೆ.ಶಿವಕುಮಾರ್

ಈ ಆನೆ ಸಕಲೇಶಪುರ ಮತ್ತು ಬೇಲೂರು ಭಾಗದಲ್ಲಿ ತೀವ್ರ ದಾಳಿ ನಡೆಸಿ, ಅಪಾರ ಪ್ರಮಾಣದ ಬೆಳೆ ಹಾನಿ ಜೊತೆಗೆ ಆಸ್ತಿಪಾಸ್ತಿಗಳು ಮತ್ತು ಜನರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿತ್ತು. ಆದ್ದರಿಂದ 2022 ಜೂನ್ 29ರಂದು ಸೆರೆ ಹಿಡಿದು ದೂರದ ಮಲೇಮಹದೇಶ್ವರ ಬೆಟ್ಟ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಲಾಗಿತ್ತು. ಆದರೆ, ಸುಮಾರು 40 ರಿಂದ 45 ದಿನಗಳ ನಂತರ ಅಲ್ಲಿಂದ ನಡೆದು ವಾಪಸ್ ಬಂದಿದ್ದ ಈ ಆನೆ, ಈ ಹಿಂದೆ ದಾಳಿ ನಡೆಸಿದ್ದ ಸಕಲೇಶಪುರ ತಾಲ್ಲೂಕಿನ ಕೆಸಗುಲಿ ಗ್ರಾಮದ ಗಿರೀಶ್ ಎಂಬುವವರ ಮನೆ ಮೇಲೆ ನವೆಂಬರ್ 24 ರಂದು ಮತ್ತೆ ದಾಳಿ ನಡೆಸಿ, ಮನೆಯ ಕಿಟಕಿ ಗಾಜುಗಳನ್ನು ಪುಡಿ ಮಾಡಿತ್ತು.

2022ರ ಏಪ್ರಿಲ್ 22 ರಂದು ಬೇಲೂರು ತಾಲ್ಲೂಕಿನ ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನ ಮೇಲೆ ದಾಳಿ ನಡೆಸಿ, ಅಕ್ಕಿಯನ್ನು ತಿಂದು ಹೋಗಿತ್ತು. ಮತ್ತೆ ಈ ವರ್ಷ ಫೆ.15 ರಂದು ಅದೇ ಗೋದಾಮಿನ ಮೇಲೆ ದಾಳಿ ನಡೆಸಿ, ಅಕ್ಕಿ ತಿಂದು ಹೋಗಿದೆ. ರೆಡಿಯೊ ಕಾಲರ್ ಅಳವಡಿಸಿರುವುದರಿಂದಲೇ ಇದೇ ಆನೆ ದಾಳಿ ನಡೆಸುತ್ತಿದೆ ಎಂಬುದು ಗೊತ್ತಾಗಿದೆ. ನಿರಂತರ ಉಪಟಳ ನೀಡುತ್ತಿದ್ದ ಆನೆಯನ್ನು ಸೆರೆ ಹಿಡಿದಿರುವುದರಿಂದ ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. 

ಹಿಂದಿನ ದಿನವೇ ದಾಂಧಲೆ: 
ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುವ ಮುನ್ನಾದಿನವಾದ ಗುರುವಾರ ಇದೇ ಓಲ್ಡ್ ಮಕ್ನಾ ಆನೆ ತಾಲ್ಲೂಕಿನ ಕೊಲ್ಲಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿತ್ತು. ಅಲ್ಲಿದ್ದ ಅಕ್ಕಿ ಚೀಲಗಳನ್ನು ರಸ್ತೆಗೆ ಎಳೆದು ತಂದು, ತಿಂದು ಹಾಕಿತ್ತು. ಪಡಿತರ ಪಡೆಯಲು ಬಂದಿದ್ದ ಜನರು, ಆನೆ ಕಂಡು ಆತಂಕಕ್ಕೆ ಒಳಗಾಗಿದ್ದರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇರುವ ಅಂಗಡಿ ಎದುರು ಈ ಆನೆ ದಾಂದಲೆ ನಡೆಸಿದ್ದರಿಂದ, ಕೆಲಕಾಲ ವಾಹನಗಳ ಸಂಚಾರವೂ ಸ್ಥಗಿತವಾಗಿತ್ತು, ಅಕ್ಕಿ ತಿಂದ ನಂತರ ಅನೆ ಅಲ್ಲಿಂದ ಕಾಲು ಕಿತ್ತಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News