ಇನ್ಮುಂದೆ ರಸ್ತೆಗಳಲ್ಲಿ ಅನವಶ್ಯಕವಾಗಿ ಓಡಾಡುವ ಮುನ್ನ ಎಚ್ಚರ!

ಕೊರೋನಾ ವೈರಾಣು ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಓಡಾಟವನ್ನು ನಿರ್ಬಂಧಿಸಿದ್ದರೂ, ಸಾಕಷ್ಟು ಜನರು ಅನಗತ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಒಡಾಡಿದ ಬೆನ್ನಲ್ಲೇ ಅವರ ವಾಹನಗಳನ್ನು  ವಶಪಡಿಸಿಕೊಳ್ಳಲಾಗಿದೆ. ಆದರೂ ಜನರ ಅನವಶ್ಯಕ ಓಡಾಟ ನಿಂತಿಲ್ಲ. 

Last Updated : Apr 25, 2020, 07:03 AM IST
ಇನ್ಮುಂದೆ ರಸ್ತೆಗಳಲ್ಲಿ ಅನವಶ್ಯಕವಾಗಿ ಓಡಾಡುವ ಮುನ್ನ ಎಚ್ಚರ! title=

ಬೆಂಗಳೂರು : ರಸ್ತೆಗಳಲ್ಲಿ ಅನಗತ್ಯ ಮತ್ತು ಅನವಶ್ಯಕವಾಗಿ ಓಡಾಡುವವರನ್ನು ಕಡ್ಡಾಯವಾಗಿ ಇನ್ಸ್ ಟ್ಯೂಷನಲ್ ಕ್ವಾರಂಟೈನ್ (Quarantine) ಗೆ ಒಳಪಡಿಸಲು ಅಗತ್ಯ ಕ್ರಮವಹಿಸಬೇಕು ಎಂದು ಕಂದಾಯ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ  ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿರುವ ಪರಿವೀಕ್ಷಣಾ ಮಂದಿರದಲ್ಲಿ ಶುಕ್ರವಾರ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು ಬಹಳಷ್ಟು ಜನರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆತು  ಲಾಕ್ ಡೌನ್ (Lockdown)  ಇದ್ದರೂ ಅನವಶ್ಯಕ ಹಾಗೂ ಅನಗತ್ಯವಾಗಿ ರಸ್ತೆಗಳಲ್ಲಿ ಸಂಚಾರ ಮಾಡುತ್ತಿದ್ದು, ಇದರ ಕಡಿವಾಣಕ್ಕಾಗಿ ಪ್ರತ್ಯೇಕ ಸ್ಥಳವನ್ನು ಗುರುತಿಸಿ ಅಂತಹ ವ್ಯಕ್ತಿಗಳನ್ನು ಕಡ್ಡಾಯವಾಗಿ ಇನ್ಸ್ ಟ್ಯೂಷನಲ್ ಕ್ವಾರಂಟೈನ್ ಗೆ ಒಳಪಡಿಸಬೇಕು ಎಂದು ಹೇಳಿದರು.

ಕರೋನಾವೈರಸ್ (Coronavirus) ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಓಡಾಟವನ್ನು ನಿರ್ಬಂಧಿಸಿದ್ದರೂ, ಸಾಕಷ್ಟು ಜನರು ಅನಗತ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಒಡಾಡಿದ ಬೆನ್ನಲ್ಲೇ ಅವರ ವಾಹನಗಳನ್ನು  ವಶಪಡಿಸಿಕೊಳ್ಳಲಾಗಿದೆ. ಆದರೂ ಜನರ ಅನವಶ್ಯಕ ಓಡಾಟ ನಿಂತಿಲ್ಲ. ಅದನ್ನು ತಡೆಗಟ್ಟಲು, ರಾಜ್ಯದಲ್ಲೇ ಮೊದಲ ಬಾರಿಗೆ  ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿ ಮತ್ತು ಒಳ್ಳೆಯ ಉದ್ದೇಶದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ  ಕಡ್ಡಾಯ ಇನ್ಸ್ ಟ್ಯೂಷನಲ್ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದ್ದು ಜಿಲ್ಲೆಯಲ್ಲಿ ಅಲ್ಲದೇ ಇಡೀ ಕರ್ನಾಟಕ ರಾಜ್ಯಕ್ಕೆ ಮಾದರಿ ಸಂದೇಶ ಇದಾಗಲಿದೆ ಎಂದು ಹೇಳಿದರು.

ಬೈಲನರಸಾಪುರ ಗ್ರಾಮವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿರುವ ಹಿನ್ನೆಲೆ ಗ್ರಾಮಸ್ಥರಿಗೆ ಯಾವುದೇ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು. ಸೌಲಭ್ಯಗಳನ್ನು ಮನೆಬಾಗಿಲಿಗೆ ದೊರೆಯುವಂತೆ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಗ್ರಾಮಸ್ಥರಿಗೆ ಪ್ರತ್ಯೇಕ ಬ್ಯಾಂಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಗ್ರಾಮದೊಳಗೆ ಅಥವಾ ಹೊರಗೆ ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಗ್ರಾಮಕ್ಕೆ ದೊಡ್ಡಬಳ್ಳಾಪುರ ಉಪ ವಿಭಾಗದ ಉಪ ವಿಭಾಗದಿಕಾರಿ ಮಂಜುನಾಥ್ ಅವರನ್ನು ವಿಶೇಷಧಿಕಾರಿಯಾಗಿ ನೇಮಿಸಲಾಗಿದ್ದು ಅವರು ಗ್ರಾಮದ ಸಂಪೂರ್ಣ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ ಎಂದು ತಿಳಿಸಿದರು.

ಬೈಲನರಸಾಪುರ ಮತ್ತು ಕೋಡಿಪಾಳ್ಯ ಗ್ರಾಮದಲ್ಲಿ  ಸೀಲ್ ಡೌನ್ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಇರಬೇಕು. ಈಗಾಗಲೇ ಕೊರೋನಾ ವೈರಾಣು ಸೋಂಕು ದೃಢಪಟ್ಟ ಬೈಲನರಸಾಪುರ ಗ್ರಾಮದ ನಾಲ್ವರಲ್ಲಿ ಇಬ್ಬರು ವ್ಯಕ್ತಿಗಳು ಗುಣಮುಖರಾಗಿದ್ದು ಜಿಲ್ಲೆಯಲ್ಲಿ ಇನ್ನು ಉಳಿದ ಮೂರು ಸೋಂಕು ದೃಢಪಟ್ಟ ವ್ಯಕ್ತಿಗಳು ಗುಣಮುಖರಾಗುತ್ತಿದ್ದಾರೆ ಎಂದರಲ್ಲದೆ ಕೊರೋನಾ ಕೋವಿಡ್-19 (Covid-19) ಸೋಂಕು ನಿಯಂತ್ರಣಕ್ಕಾಗಿ ಶ್ರಮವಹಿಸುತ್ತಿರುವ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸಭೆಯಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶರತ್ ಕುಮಾರ್ ಬಚ್ಚೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ನಾಗರಾಜ, ಸಚಿವರ ಆಪ್ತ ಕಾರ್ಯದರ್ಶಿ ಡಾ.ಆರ್.ಪ್ರಶಾಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಂಜುಳಾದೇವಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕೊರೋನಾ ವೈರಾಣು ಸೋಂಕು ಹರಡುವಿಕೆಯನ್ನು ಆಧರಿಸಿ ಆರೆಂಜ್ ಮತ್ತು ಗ್ರೀನ್ ಝೋನ್ ಜಿಲ್ಲೆಗಳಲ್ಲಿ ಉಪ ನೋಂದಣಿ ಅಧಿಕಾರಿಗಳ ಕಚೇರಿಯನ್ನು ತೆರೆಯಲು ಆದೇಶಿಸಲಾಗಿದ್ದು, ಕೆಲವು ಷರತ್ತುಗಳಿಗೆ ಒಳಪಡಿಸಿ ಆನ್ ಲೈನ್ ಮತ್ತು ಖುದ್ದಾಗಿ ತೆರಳಿ ಸಾರ್ವಜನಿಕರಿಗೆ ಉಪ ನೋಂದಣಿ ಕಚೇರಿಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅಲ್ಲದೇ ಬೆಂಗಳೂರು ನಗರ ಪ್ರದೇಶದಲ್ಲಿ ಉಪ ನೋಂದಣಿ ಅಧಿಕಾರಿಗಳ ಕಚೇರಿಯ ಸೌಲಭ್ಯವನ್ನು ಆನ್ ಲೈನ್ ಮೂಲಕ ಪಡೆಯಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಚಿವರು ಬೈಲನರಸಾಪುರ ಗ್ರಾಮಕ್ಕೆ ತೆರಳಿ, ಸುರಕ್ಷತಾ ಕ್ರಮಗಳ ಕುರಿತು ಪರಿಶೀಲಿಸಿದ ಸಚಿವರು, ಗ್ರಾಮಸ್ಥರಿಗೆ ದೂರವಾಣಿ ಕರೆ ಮಾಡಿ ಜಿಲ್ಲಾಡಳಿತದಿಂದ ನೀಡಲಾಗುತ್ತಿರುವ ಸೌಕರ್ಯಗಳ ಕುರಿತು ಮಾಹಿತಿ ಪಡೆದು ಕೊರೋನಾ ವೈರಾಣು ಸೋಂಕು ನಿಯಂತ್ರಣಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದು ಮನವಿ ಮಾಡಿದರು.

ನಂತರ ಹೊಸಕೋಟೆ ತಾಲ್ಲೂಕಿನ ಉಪ್ಪಾರಹಳ್ಳಿಯಲ್ಲಿ ಹೂ ಬೆಳೆಗಾರರ ತೋಟಕ್ಕೆ ತೆರಳಿ ಸಮಸ್ಯೆ ಆಲಿಸಿ ಮಾತನಾಡಿದ ಸಚಿವರು ಕೊರೋನಾ ವೈರಾಣು ಸೋಂಕು ನಿಯಂತ್ರಣಕ್ಕಾಗಿ ಲಾಕ್ ಡೌನ್ ವ್ಯವಸ್ಥೆ ಜಾರಿಯಲ್ಲಿರುವ ಕಾರಣ ಇಡೀ ರಾಜ್ಯದಲ್ಲಿರುವ ಹೂ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೂ ಬೆಳೆದ ರೈತರ ಭೂಮಿಯನ್ನು ಸಮೀಕ್ಷೆ ನಡೆಸಿ ಶೀಘ್ರ ವರದಿ ನೀಡಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದರು.
 

Trending News