ಬೆಂಗಳೂರು: ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನುಗಳ ಕೋಡಿಫಿಕೆಶನ್ ಕಾಯ್ದೆ ಜಾರಿಗೊಳಿಸಿರುವುದನ್ನು ಖಂಡಿಸಿ ಆಗಸ್ಟ್ 2ರಂದು ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಲು ನಿರ್ಧರಿಸಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಎಐಟಿಯು ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್ ಅವರು, ಪ್ರತಿಪಕ್ಷಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಮಂಡಿಸಿರುವ ವೇತನ ಮಸೂದೆ 2019 ಮತ್ತು ಔದ್ಯೋಗಿಕ ರಕ್ಷಣೆ, ಆರೋಗ್ಯ ಮತ್ತು ಕಾರ್ಯಸ್ಥಳದ ಸ್ಥಿತಿಗತಿ ಕಾಯ್ದೆಯಲ್ಲಿ ಕಾರ್ಮಿಕರ ಹಕ್ಕುಗಳನ್ನು ಕಡಿತಗೊಳಿಸಲಾಗಿದೆ..ಇದನ್ನು ವಿರೋಧಿಸಿ ನಾಳೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈಗಾಗಲೇ ಇರುವ 13 ಪ್ರತ್ಯೇಕ ಕಾನೂನುಗಳ ಬದಲಾಗಿ ಈ ವಿದೇಯಕವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಇದು 10ಕ್ಕಿಂತ ಹೆಚ್ಚು ಕೆಲಸಗಾರರಿರುವ ಉದ್ದಿಮೆಗಳಿಗೆ ಮಾತ್ರ ಅನ್ವಯವಾಗಲಿದೆ. ಆದರೆ ಅಸಂಘಟಿತ ವಲಯ. ಹೊರಗುತ್ತಿಗೆ ಮತ್ತು ಗುಡಿ ಕೈಗಾರಿಕೆಗಳಲ್ಲಿ ದುಡಿಯುವ ದೇಶದ ಶೇ.90ಕ್ಕೂ ಹೆಚ್ಚು ಕಾರ್ಮಿಕರು ಈ ಕಾಯ್ದೆಯ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.