ವಿಜಯಪುರ: ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಕೊಲೆ ಪ್ರಕರಣವನ್ನು ಬೇಧಿಸಿರುವ ವಿಜಯಪುರ ಪೊಲೀಸರು, ಕೊಲೆಗೆ ಕಾರಣವೇನು ಎಂಬುದನ್ನು ಸೋಮವಾರ ಬಹಿರಂಗಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಜಯಪುರ ಎಸ್ಪಿ ಪ್ರಕಾಶ್ ನಿಕಂ, ಎಐಎಂಐಎಂ ಮುಖಂಡ ತೌಫಿಕ್ ಶೇಖ್ ಜತೆ ರೇಷ್ಮಾ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ರೇಷ್ಮಾ ಹಣ ಮತ್ತು ಆಸ್ತಿಗಾಗಿ ತೌಫಿಕ್ನನ್ನು ಪದೇ ಪದೇ ಬ್ಲಾಕ್ಮೇಲ್ ಮಾಡುತ್ತಿದ್ದರು. ತೌಫಿಕ್ನ ಎಂಟು ಎಕರೆ ಆಸ್ತಿಯನ್ನು ತನ್ನ ಹೆಸರಿಗೆ ಬರೆಯುವಂತೆ ಪೀಡಿಸುತ್ತಿದ್ದರು. ರೇಷ್ಮಾಳ ಬ್ಲಾಕ್ಮೇಲ್ನಿಂದ ಬೇಸತ್ತ ತೌಫಿಕ್ ಶೇಖ್ ಆಕೆಯನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸದಂತೆ ಮಹಾರಾಷ್ಟ್ರದ ಎಐಎಂಐಎಂ ಮುಖಂಡ ಹಾಗೂ ಸೊಲ್ಲಾಪುರ ಮಹಾನಗರ ಪಾಲಿಕೆ ಕಾರ್ಪೊರೇಟರ್ ತೌಫಿಕ್ ಶೇಖ್ ಹಾಗೂ ಆತನ ಕಾರು ಚಾಲಕ ಇಜಾಜ್ ಬಿರಾದಾರನನ್ನು ಬಂಧಿಸಿ, ಪೋಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.
ಮೇ 17ರಂದು ಕೊಲ್ಹಾರ ಬಳಿಯ ಕೃಷ್ಣಾ ನದಿಯ ಸೇತುವೆ ಕೆಳಗೆ ರೇಷ್ಮಾ ಅವರ ಶವ ಪತ್ತೆಯಾಗಿತ್ತು. ಯಾರನ್ನೋ ಭೇಟಿಯಾಗಲು ಮೇ 16ರ ರಾತ್ರಿ ಮನೆಯಿಂದ ಹೊರಟಿದ್ದ ರೇಷ್ಮಾ, ಶವವಾಗಿ ಪತ್ತೆಯಾಗಿದ್ದರು.
2018ರ ವಿಧಾನಸಭಾ ಚುನಾವಣೆಗೂ ಮೊದಲು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ರೇಷ್ಮಾ ಪಾಡೇಕನೂರ ಅವರು, ಜಿಲ್ಲಾಧ್ಯೆಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದರು. 2013ರ ಚುನಾವಣೆಯಲ್ಲಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಬಳಿಕ 2018ರ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ರೇಷ್ಮಾ ಸೇರಿದ್ದರು.