ಬೆಂಗಳೂರು : ಕಂದಾಯ ಇಲಾಖೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೇವಲ ಎರಡೇ ತಿಂಗಳಲ್ಲಿ ಭೂ ಪರಿವರ್ತನೆ ಹಾಗೂ ನೋಂದಣಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಎಲ್ಲ ರೀತಿಯ ಭ್ರಷ್ಟಾಚಾರವನ್ನೂ ಕೊನೆಗೊಳಿಸಿ, ಆಡಳಿತ ಸುಧಾರಣೆ ನಿಟ್ಟಿನಲ್ಲಿ ಸಚಿವ ಕೃಷ್ಣಭೈರೇಗೌಡ ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ. ಅವರ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಹಾಗೂ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಗುರುವಾರ ವಿಧಾನ ಪರಿಷತ್ ನಲ್ಲೂ ಮಂಡಿಸಿ ಚರ್ಚಿಸಲಾಯಿತು. ಈ ವೇಳೆ ಮಾತನಾಡಿದ ಮರಿತಿಬ್ಬೇಗೌಡ, “ನೋಂದಣಿ ಅಧಿಕಾರಿ ಒಳ್ಳೆಯ ವ್ಯಕ್ತಿಯೇ ಆಗಿದ್ದರೂ, ಜನ ಅನುಮಾನದಿಂದಲೇ ನೋಡುವಂತಾಗಿದೆ. ಇದಕ್ಕೆ ಕಾರಣ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ. ಈ ಭ್ರಷ್ಟಾಚಾರವನ್ನು ತಡೆದು ಜನರಿಗೆ ಸುಗಮ ಮತ್ತು ಸರಳ ಸೇವೆಯನ್ನು ಒದಗಿಸುವ ಸಲುವಾಗಿ ಸಚಿವ ಕೃಷ್ಣಭೈರೇಗೌಡ ತೆಗೆದುಕೊಂಡಿರುವ ಕ್ರಮ ಮತ್ತು ಸರ್ಕಾರದ ನಡೆ ನಿಜಕ್ಕೂ ಶ್ಲಾಘನೀಯ” ಎಂದು ಪ್ರಶಂಶಿಸಿದ್ದಾರೆ.
ಇದನ್ನೂ ಓದಿ: Bengaluru: ಬೆಂಗಳೂರಿನ 110 ಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯೆ..!
“ಯಾರದ್ದೋ ಆಸ್ತಿಯನ್ನು ಮತ್ಯಾರೋ ತಮ್ಮ ಹೆಸರಿಗೆ ನೋಂದಣಿ ಮಾಡಿಕೊಳ್ಳುವ, ಇನ್ಯಾರಿಗೋ ಮಾರಾಟ ಮಾಡಿಕೊಳ್ಳುವ ದೊಡ್ಡ ಮೋಸದ ಜಾಲ ಇಂದು ರಾಜ್ಯಾದ್ಯಂತ ಸಕ್ರೀಯವಾಗಿದೆ. ಬೆಂಗಳೂರಿನಂತಹ ನಗರದಲ್ಲಿ ನೀವು ಒಂದು ವರ್ಷ ವಿದೇಶಕ್ಕೆ ಹೋಗಿ ಹಿಂತಿರುಗಿದರೆ, ವಾಪಾಸ್ ಬರುವ ವೇಳೆಗೆ ನಿಮ್ಮ ಭೂಮಿ ಮತ್ತೊಬ್ಬರಿಗೆ ನೋಂದಣಿಯಾಗಿರುತ್ತದೆ. ಈ ಮೋಸದ ಜಾಲದ ಹಿಂದೆ ಹಲವು ಅಧಿಕಾರಿಗಳ ಕೈವಾಡವೂ ಇದೆ.
ಆದರೆ, ಈ ವಂಚನೆಗೆ ಒಳಗಾದ ಆಸ್ತಿ ಮಾಲೀಕರು ತನ್ನ ಜೀವಿತಾವಧಿಯ ಕೊನೆವರೆಗೂ ಸಿವಿಲ್ ನ್ಯಾಯಾಲಯಗಳ ಮೆಟ್ಟಿಲು ಹತ್ತಿಳಿದರೂ ತ್ವರಿತ ನ್ಯಾಯದ ಆಶ್ವಾಸನೆ ನೀಡಲು ಸಾಧ್ಯವಿಲ್ಲದಂತಾಗಿದೆ. ಅಂತಹ ಜನರಿಗೆ ತ್ವರಿತ ನ್ಯಾಯ ಒದಗಿಸಲು ಮತ್ತು ಭ್ರಷ್ಟ ಅಧಿಕಾರಿಗಳನ್ನು ಕಾನೂನು ಅಡಿ ಶಿಕ್ಷಿಸಲು, ಭ್ರಷ್ಟಾಚಾರವನ್ನು ನಿಯಂತ್ರಿಸಲು ಈ ತಿದ್ದುಪಡಿ ವಿಧೇಯಕ ಉಪಯೋಗವಾಗುತ್ತದೆ” ಎಂದು ಮರಿತಿಬ್ಬೇಗೌಡ ಅಭಿಮತ ವ್ಯಕ್ತಪಡಿಸಿದರು. ಅಲ್ಲದೆ, ಕಂದಾಯ ಇಲಾಖೆ ಆಡಳಿತದಲ್ಲಿ ಮತ್ತಷ್ಟು ಸುಧಾರಣೆ ಆಗಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ: KAS ಆಕಾಂಕ್ಷಿಗಳಿಗೆ ಗುಡ್ ನ್ಯೂಸ್: ಶೀಘ್ರವೇ 500ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ
ಇದಕ್ಕೂ ಮುನ್ನ ಮಾತನಾಡಿದ್ದ ಸಚಿವ ಕೃಷ್ಣಭೈರೇಗೌಡ, “ನನ್ನ ಕ್ಷೇತ್ರದಲ್ಲೇ ಸರ್ಕಾರಿ ಜಮೀನನ್ನು ಯಾರೋ ಮತ್ಯಾರಿಗೋ ಮಾರಾಟ ಮಾಡಿದ್ದಾರೆ. ಯಲಕಂಕ ಕೊಟ್ಟಿಗೇನಹಳ್ಳಿ ರೇವಾ ಯೂನಿವರ್ಸಿಟಿ ಎದುರು 70 ಸೈಟ್ ಅಭಿವೃದ್ಧಿಗೊಳಿಸಿ ಮಾರಾಟ ಮಾಡಿ ಜನರನ್ನು ವಂಚಿಸಲಾಗಿದೆ. ಇಂತಹ ಹಲವು ವಂಚನೆ ಪ್ರಕರಣಗಳ ದೊಡ್ಡ ಪಟ್ಟಿಯೇ ನನ್ನ ಬಳಿ ಇದೆ. ಶಾಸಕ-ಸಚಿವರ ಆಸ್ತಿಯನ್ನೂ ಬೇರೊಬ್ಬರಿಗೆ ನೋಂದಣಿ ಮಾಡಿಕೊಟ್ಟ ಸಾಕಷ್ಟು ಉದಾಹರಣೆಗಳಿವೆ. ಇಂತಹ ವಂಚಕ ಜಾಲದ ಹಿಂದೆ ಕೆಲವು ಭ್ರಷ್ಟ ಅಧಿಕಾರಿಗಳ ಕೈವಾಡವೂ ಇದೆ. ಇದಕ್ಕೆ ಕಾರಣ ಸೆಕ್ಷನ್ 22(ಎ). ಈ ಸೆಕ್ಷನ್ ಅಡಿಯಲ್ಲಿ ದಸ್ತಾವೇಜಿನ ನೈಜತೆ ಪರಿಶೀಲನೆಗೆ ಅವಕಾಶವೇ ಇಲ್ಲ. ಹೀಗಾಗಿ ನಕಲಿ ದಸ್ತಾವೇಜಿಗೂ ಅಧಿಕಾರಿಗಳು ಸಹಿ ಹಾಕಬೇಕಿತ್ತು. ಪರಿಣಾಮ ಅಕ್ರಮ ನೋಂದಣಿ ಹಾವಳಿ ಎಗ್ಗಿಲ್ಲದೆ ನಡೆಯುತ್ತಿತ್ತು. ಇದೀಗ ಈ ಹಳೆ ಸರ್ಕ್ಯೂಲರ್ ಗೆ ತಿದ್ದುಪಡಿ ತರಲಾಗಿದೆ. ಈ ಮೂಲಕ ಅಕ್ರಮ ನೋಂದಣಿಯನ್ನು ದಸ್ತಾವೇಜು ಪರಿಶೀಲನೆ ಸಂದರ್ಭದಲ್ಲೇ ತಡೆಹಿಡಿಯಬಹುದಾಗಿದೆ” ಎಂದು ಸದನಕ್ಕೆ ಮಾಹಿತಿ ನೀಡಿದರು.
ಮುಂದುವರೆದು, “ಹಳೆಯ ಸರ್ಕ್ಯೂಲರ್ ಅಡಿಯಲ್ಲಿ ವಯಸ್ಸಾದವರ ಆಸ್ತಿ ಲೂಟಿಯೇ ಭೂ ಮಾಫಿಯಾ ಗುರಿ. ಇಂತಹ ಭೂಗಳ್ಳರು ಆಸ್ತಿ ಲೂಟಿ ಮಾಡಿದರೆ, ಅವರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುವುದು ವಯಸ್ಸಾದವರಿಗೆ ಅಸಾಧ್ಯ. ಹೀಗಾಗಿ ಅವರು ಪುಡಿಗಾಸಿಗೆ ತಮ್ಮ ಆಸ್ತಿಯನ್ನು ಬಿಟ್ಟುಕೊಟ್ಟ ಉದಾಹರಣೆ ಇದೆ. ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ ಇಂತಹ ಜನರಿಗೆ ವರಧಾನವಾಗಲಿದೆ. ಕೇಂದ್ರ ಸರ್ಕಾರದ ನೋಂದಣಿ ಕಾಯ್ದೆಯಲ್ಲೇ ಈ ಎಲ್ಲ ಸುಧಾರಣೆಗಳೂ ಆಗಬೇಕಿತ್ತು. ಆದರೆ, ಯುಪಿಎ ಸರ್ಕಾರದ ನಂತರದ ಸರ್ಕಾರ ಆ ಕೆಲಸಕ್ಕೆ ಕೈಹಾಕಿಲ್ಲ. ಹೀಗಾಗಿ ನಮ್ಮ ರಾಜ್ಯ ಸರ್ಕಾರ ಸಾಧ್ಯವಾದ ಸುಧಾರಣೆಗೆ ಮುಂದಾಗಿದ್ದೇವೆ” ಎಂದು ತಿಳಿಸಿದ್ದಾರೆ.
ಅಲ್ಲದೆ, “ಅಕ್ರಮ ನೋಂದಣಿಯನ್ನು ದಸ್ತಾವೇಜು ಪರಿಶೀಲನೆ ಹಂತದಲ್ಲೇ ತಡೆಯಲಾಗುತ್ತದೆ ಎಂಬ ಭಯ ಇದ್ದರೆ ಮಾತ್ರ ನಕಲಿ ನೋಂದಣಿಯನ್ನು ತಡೆಯುವುದು ಸಾಧ್ಯ. ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದಂತೆ ಆಡಳಿತ ಸುಧಾರಣೆ, ಆಡಳಿತ ಸರಳೀಕರಣ ಮತ್ತು ಕಚೇರಿಗಳಲ್ಲಿ ವಿಳಂಬ, ಶೋಷಣೆ, ಸುಲಿಗೆ ಇಲ್ಲದೆ ಜನರ ಕೆಲಸ ತತಕ್ಷಣ ಆಗಬೇಕು ಎಂಬ ಕಾರಣದಿಂದ, ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ ಹಾಗೂ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ” ಎಂದು ಸಚಿವ ಕೃಷ್ಣಭೈರೇಗೌಡ ಸದನಕ್ಕೆ ತಿಳಿಸಿದರು.
ಇದನ್ನೂ ಓದಿ:ಕಾವಾಡಿ ದಂಪತಿಗೆ ಮಗಳಾದ ಆನೆ... ಬಂಡೀಪುರದಲ್ಲೊಂದು ಎಲಿಫೆಂಟ್ ವಿಸ್ಪರರ್ಸ್
ಏನಿದು ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ? : ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕದ ಪ್ರಕಾರ, ನೋಂದಣಿ ಅಧಿಕಾರಿ (ಸಾಮಾನ್ಯವಾಗಿ ಸಬ್-ರಿಜಿಸ್ಟ್ರಾರ್) ನಕಲಿ ದಾಖಲೆಗಳನ್ನು ನೋಂದಾಯಿಸಲು ನಿರಾಕರಿಸಬೇಕು. ಯಾವುದೇ ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ದಾಲೆಗಳು ಕೇಂದ್ರ ಅಥವಾ ರಾಜ್ಯ ಕಾಯ್ದೆಗಳಿಂದ ನಿಷೇಧಿಸಲಾಗಿದ್ದು, ಅಂತಹ ಆಸ್ತಿಗಳ ದಾಖಲೆಗಳನ್ನು ನೋಂದಾಯಿಸಲು ಅಧಿಕಾರಿಗಳು ನಿರಾಕರಿಸಬೇಕು. ನೋಂದಣಿಗೆ ಮುನ್ನ ಸಂಬಂಧಪಟ್ಟ ಆಸ್ತಿ ದಸ್ತಾವೇಜುಗಳ ಅಸಲಿಯತ್ತನ್ನು ಪರಿಶೀಲನೆಗೆ ಒಳಪಡಿಸಬೇಕು. ದಸ್ತಾವೇಜುಗಳು ನಕಲಿ ಎಂದು ತಿಳಿದರೆ ಕೂಡಲೇ ನೋಂದಣಿಯನ್ನು ರದ್ದು ಮಾಡಬೇಕು. ಅಲ್ಲದೆ, ಅಧಿಕಾರಿಗಳು ನಿಯಮ ಮೀರಿ ನಕಲಿ ದಾಖಲಾತಿಗಳನ್ನು ನೋಂದಾಯಿಸಿದರೆ, ಈ ಮಸೂದೆಯು ಅಧಿಕಾರಿಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಪ್ರಸ್ತಾಪಿಸುತ್ತದೆ. ದಾಖಲೆಗಳ ಮೋಸದ ನೋಂದಣಿಯಲ್ಲಿ ತೊಡಗಿರುವ ಕಂಪನಿಗಳನ್ನು ಶಿಕ್ಷಿಸಲು ವಿಧೇಯಕದಲ್ಲಿ ಅವಕಾಶವಿದೆ.
ಏನಿದು ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ? : ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಥವಾ ಭೂ ಪರಿವರ್ತನೆ ವಿಧೇಯಕದಲ್ಲಿ ಉಲ್ಲೇಖಿಸಿರುವಂತೆ ಕೃಷಿಯೇತರ ಉದ್ದೇಶಗಳಿಗಾಗಿ ಮಾಸ್ಟರ್ ಪ್ಲಾನ್ ಮಾಡಲಾಗಿರುವ ಭೂಮಿಯನ್ನು ಆ ಮಾಸ್ಟರ್ ಪ್ಲಾನ್ ನಲ್ಲಿ ಉಲ್ಲೇಖಿಸಿರುವ ಉದ್ದೇಶಗಳಿಗೆ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿಲ್ಲ.
ಯಾವುದೇ ಮಾಸ್ಟರ್ ಪ್ಲಾನ್ ಇಲ್ಲದ ಸ್ಥಳೀಯ ಯೋಜನಾ ಪ್ರದೇಶದ ಹೊರಗಿನ ಭೂಮಿಯನ್ನು ಪರಿವರ್ತನೆ ಮಾಡಿಕೊಳ್ಳಲು ಅರ್ಜಿದಾರರು ಅಫಿಡವಿಟ್ ಸಲ್ಲಿಸಬೇಕು. ಜಿಲ್ಲಾಧಿಕಾರಿಯು 30 ದಿನಗಳೊಳಗೆ ಆದೇಶವನ್ನು ನೀಡದಿದ್ದರೆ, ಭೂ- ಪರಿವರ್ತನೆಯನ್ನು ಅನುಮೋದಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಆಡಳಿತದಲ್ಲಿನ ವಿಳಂಬ ಮತ್ತು ಜನರ ಸುಲಿಗೆಯನ್ನು ತಡೆಯುವ ನಿಟ್ಟಿನಲ್ಲಿ ಈ ವಿಧೇಯ ಮಹತ್ವದ್ದಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.