Sara Aboobacker: ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ನಿಧನ

Sara Aboobacker Passed Away: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಾರಾ ಅಬೂಬಕ್ಕರ್‌ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Written by - Puttaraj K Alur | Last Updated : Jan 10, 2023, 03:04 PM IST
  • ಕನ್ನಡದ ಪ್ರಮುಖ ಕಥೆ & ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್‌ ನಿಧನರಾಗಿದ್ದಾರೆ
  • ದೀರ್ಘಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ
  • ಸಾರಾ 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದ್ದರು
Sara Aboobacker: ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ನಿಧನ title=
ಲೇಖಕಿ ಸಾರಾ ಅಬೂಬಕ್ಕರ್ ನಿಧನ

ಬೆಂಗಳೂರು: ಕನ್ನಡದ ಪ್ರಮುಖ ಕಥೆ, ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್‌ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕೇರಳದ ಕಾಸರಗೋಡು ಜಿಲ್ಲೆಯವರಾದ ಸಾರಾ ಅಬೂಬಕ್ಕರ್ ತಮ್ಮ ಬರಹಗಳಲ್ಲಿ ಮುಸ್ಲಿಂ ಸಮುದಾಯದ ಸಂಪ್ರದಾಯಗಳನ್ನು ಕಟುವಾಗಿ ಟೀಕಿಸುತ್ತಿದ್ದರು.

ಸಾರಾ ಅಬೂಬಕ್ಕರ್‌ ಅವರು 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ಅವರ ತಂದೆ ಪಿ.ಅಹಮದ್ ನ್ಯಾಯವಾದಿಯಾಗಿದ್ದರು. ಅವರ ತಾಯಿ ಚೈನಾಬಿ. ಹುಟ್ಟಿದೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಅವರು, ಕಾಸರಗೋಡಿನಲ್ಲಿ ಹೈಸ್ಕೂಲಿನವರೆಗೆ ಕಲಿತದ್ದರು. ಅರೆಬಿಕ್ ಕಲಿತಿದ್ದ ಅಜ್ಜಿ ಹೇಳುತ್ತಿದ್ದ ಕಥೆಗಳಿಂದ ಆಕರ್ಷಿತರಾಗಿ ಸಾಹಿತ್ಯದಲ್ಲಿ ಏನಾದರೂ ಸಾಧಿಸಬೇಕೆಂಬ ಆಶಯ ಸಾರಾರಿಗೆ ಬಾಲ್ಯದಲ್ಲೇ ಮೂಡಿತ್ತು.

ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ವಿಚಾರ: ಬಿಜೆಪಿ-ಜೆಡಿಎಸ್ ಲೆಕ್ಕಾಚಾರ ಏನು..?

ಎಂಜನಿಯರ್ ಆಗಿದ್ದ ಅಬೂಬಕ್ಕರ್‌ ಅವರೊಡನೆ ಸಾರಾ ವಿವಾಹವಾದ ಬಳಿಕ ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತಿ ಹೊಂದಿದ್ದ ಸಾರಾ ಅವರು ಶಿವರಾಮ ಕಾರಂತ, ವಿ.ಎಂ.ಇನಾಂದಾರ್, ಎಸ್.ಎಲ್.ಭೈರಪ್ಪ, ಯು.ಆರ್.ಅನಂತಮೂರ್ತಿ ಸೇರಿದಂತೆ ಅನೇಕ ಸಾಹಿತಿಗಳ ಬರವಣಿಗೆಗೆ ಮಾರುಹೋಗಿ ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಮನೋವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳು ಸಾರಾರಲ್ಲಿ ಹೆಚ್ಚಿನ ಆಕರ್ಷಣೆ ಹುಟ್ಟಿಸಿದವು.

ಬದುಕುತ್ತಿದ್ದ ಸುತ್ತಮುತ್ತಲಿನ ಪರಿಸರದಲ್ಲಿ ಮನೋವ್ಯಾಕುಲತೆಗೊಳಗಾಗುತ್ತಿದ್ದ ಬಹಳಷ್ಟು ಸಹ ಧರ್ಮೀಯರ ಕುರಿತು ಅವರ ಮನ ನಿರಂತರವಾಗಿ ಮಿಡಿಯುತ್ತಿತ್ತು. ತಲಾಕ್ ಸಂಪ್ರದಾಯ, ಮಕ್ಕಳಾದ ನಂತರದ ಅಸಹನೀಯ ಬದುಕು ಇವೆಲ್ಲಾ ಅವರನ್ನು ಕಾಡುತ್ತಿದ್ದವು. ಅಣ್ಣ ತಂದುಕೊಡುತ್ತಿದ್ದ ವೈಕಂ ಮಹಮದ್ ಬಷೀರ್‌ ಅವರ ಕಾದಂಬರಿಗಳ ಓದಿನ ಪ್ರಭಾವದಿಂದ ಅವರಲ್ಲಿ ಬರೆಯಬೇಕೆಂಬ ಅಂತರಾಳದ ಒತ್ತಡ ನಿರಂತರವಾಗಿ ಹೊರಹೊಮ್ಮುತ್ತಿತ್ತು. ಹಲವಾರು ವರ್ಷ ಸಾಮಾಜಿಕ ಸಮಸ್ಯೆಗಳ ಮಥನದಿಂದಾಗಿ ಎಂ.ಕೆ.ಇಂದಿರಾ ಅವರಂತೆ 40 ದಾಟಿದ ನಂತರ ಸಾರಾ ಅಬೂಬಕ್ಕರ್ ಬರೆಯಲು ಪ್ರಾರಂಭಿಸಿದರು. ಹೀಗೆ ಅವರು ಬರೆದ ಮೊದಲ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಲಂಕೇಶ್ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು. ಈ ಕಥೆಯಲ್ಲಿ ಹೊರಹೊಮ್ಮಿದ ವಾಸ್ತವಿಕ ಬದುಕಿನ ಚಿತ್ರಣ ಮತ್ತು ಧರ್ಮದ ಕಟ್ಟುಪಾಡುಗಳಲ್ಲಿ ಶೋಷಿತಗೊಂಡ ಮಹಿಳೆಯರ ದ್ವನಿಗಳು ಅಸಂಖ್ಯಾತ ಓದುಗರ ಹೃದಯವನ್ನು ತಟ್ಟಿ ಈ ಕಾದಂಬರಿ ವ್ಯಾಪಕ ಮೆಚ್ಚುಗೆ ಪಡೆಯಿತು. ಆ ನಂತರದಲ್ಲಿ ಸಾರಾ ಅಬೂಬಕ್ಕರ್ ಬರೆದ ಇತರ ಹಲವಾರು ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕ ಮತ್ತು ಓದುಗರಿಗೆ ಇಷ್ಟವಾದವು.

ಚಂದ್ರಗಿರಿಯ ತೀರದಲ್ಲಿ(1984), ಸಹನಾ(1985), ವಜ್ರಗಳು, ಕದನ ವಿರಾಮ(1988), ಸುಳಿಯಲ್ಲಿ ಸಿಕ್ಕವರು (1994), ಪ್ರವಾಹ-ಸುಳಿ (ಸುಳಿಯಲ್ಲಿ ಸಿಕ್ಕವರು ಕೃತಿಯ ಭಾಗ-೨), ತಳ ಒಡೆದ ದೋಣಿ(1997), ಪಂಜರ, ಇಳಿಜಾರು ಮತ್ತು ಕಾಣಿಕೆ ಸಾರಾ ಅಬೂಬಕ್ಕರ್‍ ಬರೆದ ಕೃತಿಗಳಾಗಿವೆ. ಚಪ್ಪಲಿಗಳು(1989), ಪಯಣ ಮತ್ತು ಇತರ ಕಥೆಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು(1997), ಖೆಡ್ಡ, ಸಮಯ್ಯಾ (ಜನಪದ ಆಧರಿಸಿದ ಕಥೆಗಳು-2004) ಮತ್ತು ಗಗನ ಸಖಿ(2007) ಅವರು ಬರೆದ ಕಥಾ ಸಂಕಲನಗಳು.

ಇದನ್ನೂ ಓದಿ: ಸ್ಯಾಂಟ್ರೋ ರವಿ ಯಾರು ಎಂಬುದೇ ನನಗೆ ಗೊತ್ತಿಲ್ಲ: ಸಂಸದ ರಾಜಾ ಅಮರೇಶ್ವರ ನಾಯ್ಕ್

ಕಮರಿದ ಕನಸು, ಮಗಳು ಹುಟ್ಟಿದಳು, ತೇಲಾಡುವ ಮೋಡಗಳು, ತಾಳ, ಹೀಗೂ ಒಂದು ಬದುಕು ಮುಂತಾದುವುಗಳು ಬಾನುಲಿ ನಾಟಕಗಳಾಗಿವೆ. ಲೇಖನ ಗುಚ್ಛ, ಮನೋಮಿ, ಬಲೆ, ನಾನಿನ್ನು ನಿದ್ರಿಸುವೆ(ಕಾದಂಬರಿಗಳು) ಅವರ ಲೇಖನ ಮತ್ತು ಅನುವಾದಗಳಾಗಿವೆ. ಇದರ ಜೊತೆಗೆ ಐಷಾರಾಮದ ಆಳದಲ್ಲಿ ಎಂಬ ಪ್ರವಾಸ ಕಥನವನ್ನೂ ಸಾರಾ ಬರೆದಿದ್ದಾರೆ.

ಸಾರಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಸರೋಜಾದೇವಿ ಪ್ರಶಸ್ತಿ, ‘ಸಹನಾ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಹಾಗೂ ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿವಿಯ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಸೇರಿದಂತೆ ಇನ್ನೂ ಹತ್ತು-ಹಲವಾರು ಪ್ರಮುಖ ಪ್ರಶಸ್ತಿ ಗೌರವಗಳು ಸಂದಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News