ಟ್ವೀಟ್ ವಾರ್ ಮಾಡುತ್ತಿರುವ ಹೆಚ್‌ಡಿಕೆ-ಸಿದ್ದುಗೆ ಹಳ್ಳಿಹಕ್ಕಿ ಕುಟುಕು

‌ಮೈತ್ರಿ ಸರ್ಕಾರ ಪತನಕ್ಕೆ ‌ಸಿದ್ದರಾಮಯ್ಯ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಇಬ್ಬರೂ ಸಮಾನ ಕಾರಣರು- ಹೆಚ್. ವಿಶ್ವನಾಥ್

Yashaswini V Yashaswini V | Updated: Oct 25, 2019 , 12:03 PM IST
ಟ್ವೀಟ್ ವಾರ್ ಮಾಡುತ್ತಿರುವ ಹೆಚ್‌ಡಿಕೆ-ಸಿದ್ದುಗೆ ಹಳ್ಳಿಹಕ್ಕಿ ಕುಟುಕು
File image

ನವದೆಹಲಿ: ಟ್ವೀಟ್ ವಾರ್ ನಲ್ಲಿ ತೊಡಗಿರುವ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಕುಟುಕಿರುವ ಅನರ್ಹ ಶಾಸಕ ಹೆಚ್. ವಿಶ್ವನಾಥ್, ಮೈತ್ರಿ ಸರ್ಕಾರ ಪತನಕ್ಕೆ ‌ಸಿದ್ದರಾಮಯ್ಯ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಇಬ್ಬರೂ ಸಮಾನ ಕಾರಣರು ಎಂದಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನರ್ಹ ಶಾಸಕ ಹೆಚ್.ವಿಶ್ವನಾಥ್,ಮೈತ್ರಿ ಸರ್ಕಾರ ಪತನಕ್ಕೆ ‌ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸಮಾನ ಕಾರಣರು. ‌ಇಬ್ಬರೂ ಸಮಬಲರು. ಮೈತ್ರಿ ಸರ್ಕಾರ ರಚಿಸುವಾಗ ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯ ಕೇಳಿರಲಿಲ್ಲ. ಅದೇ ರೀತಿ ಕುಮಾರಸ್ವಾಮಿ ಜೆಡಿಎಸ್ ಶಾಸಕರ ಜತೆ ಚರ್ಚೆ ಮಾಡದೆ ಸರ್ಕಾರ ಮಾಡಿದರು. ಈಗ ಪರಸ್ಪರ ಆರೋಪ ಮಾಡುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

ಯಾರನ್ನೂ ಹೇಳದೆ ಕೇಳದೆ ಸರ್ಕಾರ ರಚಿಸಿದ್ದೀರಿ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ ವಿಶ್ವನಾಥ್, ಪಕ್ಷ ರಾಜಕಾರಣ ಇಲ್ಲದೆ ಇರೋದ್ರಿಂದ ಪಕ್ಷಾಂತರಕ್ಕೆ ಕಾರಣವಾಗುತ್ತೆ ಎಂದರು.

ಹೆಚ್‌ಡಿಕೆ- ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪ ಮಾಡುತ್ತಿದ್ದಾರೆ: ಹೆಚ್.ಎಂ. ರೇವಣ್ಣ
ನವದೆಹಲಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಮಾಜಿ ಸಚಿವ ಹೆಚ್.ಎಂ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಈ ಬಗ್ಗೆ ಜೆಡಿಎಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಹೆಚ್‌ಡಿಕೆ ಅವರು ಸಿದ್ದರಾಮಯ್ಯ ವಿರುದ್ದ ಅನಗತ್ಯ ಆರೋಪ ಮಾಡಿದ್ದಾರೆ. ನಾವು ಕೇಳಿದ ಯಾವ ಕೆಲಸವನ್ನು ಹೆಚ್‌ಡಿಕೆ ಮಾಡಿಕೊಡುತ್ತಿರಲಿಲ್ಲ‌. ನಮ್ಮ ಜತೆ ಚೆನ್ನಾಗಿ ಮಾತನಾಡುತ್ತಿದ್ದರೇ ಹೊರತು ನಮ್ಮ ಯಾವ ಕೆಲಸವನ್ನು ಮಾಡಿಕೊಡುತ್ತಿರಲಿಲ್ಲ. ಅವರ ಶಾಸಕರನ್ನೇ ಹಿಡಿದಿಟ್ಟುಕೊಳ್ಳಲು ಕುಮಾರಸ್ವಾಮಿಗೆ ಸಾಧ್ಯವಾಗಲಿಲ್ಲ ಲೇವಡಿ ಮಾಡಿದರಲ್ಲದೆ, ಈಗ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.