close

News WrapGet Handpicked Stories from our editors directly to your mailbox

ದೇವೇಗೌಡರ ಬೀಗರ ಮನೆಯಲ್ಲಿ ಸಿದ್ದರಾಮಯ್ಯಗೆ ಆತಿಥ್ಯ!

ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಅವರ ನಿವಾಸದಲ್ಲಿ ಉಪಹಾರ ಸವಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

Yashaswini V Yashaswini V | Updated: Sep 16, 2019 , 11:48 AM IST
ದೇವೇಗೌಡರ ಬೀಗರ ಮನೆಯಲ್ಲಿ ಸಿದ್ದರಾಮಯ್ಯಗೆ ಆತಿಥ್ಯ!
File Image

ಮೈಸೂರು: ನಗರದ ಬೋಗಾದಿಯಲ್ಲಿರುವ ಹೆಚ್.ಡಿ. ದೇವೇಗೌಡರ ಬೀಗರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳೂ ಆದ ಪ್ರೊ.ಕೆ.ಎಸ್‌.ರಂಗಪ್ಪ ತಮ್ಮ ನಿವಾಸದಲ್ಲಿಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆತಿಥ್ಯ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಚಾಮರಾಜ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದೇವೇಗೌಡರ ಬೀಗರೂ ಆದ ಪ್ರೊ.ಕೆ.ಎಸ್‌.ರಂಗಪ್ಪ ಅವರ ನಿವಾಸದಲ್ಲಿಂದು ಸಿದ್ದರಾಮಯ್ಯ ಅವರಿಗೆ ಆತಿಥ್ಯ ನೀಡಲಾಗಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ರಂಗಪ್ಪ ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂಬ ಊಹಾಪೋಹಗಳು ಕೂಡ ಕೇಳಿಬರುತ್ತಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೊ. ರಂಗಪ್ಪ, ನನ್ನ ಹಾಗೂ ಸಿದ್ದರಾಮಯ್ಯ ಅವರ ಒಡನಾಟ ಇಂದು, ನಿನ್ನೆಯದಲ್ಲ. ನಾನು ಸಿದ್ದರಾಮಯ್ಯ ಅವರನ್ನು ನಮ್ಮ ಮನೆಗೆ ಉಪಹಾರಕ್ಕೆ ಬರುವಂತೆ ಆಹ್ವಾನಿಸಿದ್ದೆ. ಅವರು ಸಂತಸದಿಂದ ಉಪಹಾರಕ್ಕೆ ಬಂದಿದ್ದರು ಅಷ್ಟೇ ಎಂದರು.

ಈ ಸಂದರ್ಭದಲ್ಲಿ ರಾಜಕೀಯ ವಿಷಯವಾಗಿ ಚರ್ಚೆ ಏನಾದರೂ ನಡೆದಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರೊ.ರಂಗಪ್ಪ, ರಾಜಕೀಯ ವಿಚಾರವಾಗಿ ನಾನೂ ಏನನ್ನೂ ಮಾತನಾಡಿಲ್ಲ, ಸಿದ್ದರಾಮಯ್ಯನವರೂ ಏನೂ ಮಾತಾಡಿಲ್ಲ ಎಂದು ಹೇಳಿದರು.

ಚಾಮರಾಜ ಕ್ಷೇತ್ರದಲ್ಲಿ ನಾನು ಸೋತ ಬಳಿಕ ಜೆಡಿಎಸ್ ಪಕ್ಷದ ಯಾರೋಬ್ಬರೂ ನನ್ನನ್ನು ಮಾತನಾಡಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಪ್ರೊ.ರಂಗಪ್ಪ ಹೀಗಾಗಿಯೇ ತಾವು ಜೆಡಿಎಸ್ ಚಟುವಟಿಕೆಗಳಿಂದ ದೂರ ಉಳಿದಿರುವುದಾಗಿ ಹೇಳಿಕೊಂಡಿದ್ದಾರೆ.