ಸಿದ್ದರಾಮಯ್ಯ ಅವರಿಗೂ COVID-19 ಪಾಸಿಟಿವ್; ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ ಆಗುವಂತೆ ಮನವಿ

ಸ್ವತಃ ಸಿದ್ದರಾಮಯ್ಯ ಅವರೇ ಟ್ವೀಟ್ ಮಾಡಿ ತಮಗೆ COVID-19 ಪಾಸಿಟಿವ್ ಇರುವುದನ್ನು ದೃಢಪಡಿಸಿದ್ದಾರೆ. 

Yashaswini V Yashaswini V | Updated: Aug 4, 2020 , 08:41 AM IST
ಸಿದ್ದರಾಮಯ್ಯ ಅವರಿಗೂ COVID-19 ಪಾಸಿಟಿವ್; ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ ಆಗುವಂತೆ ಮನವಿ

ಬೆಂಗಳೂರು: ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ (BS Yediyurappa)  ನಂತರ ಈಗ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ (Siddaramaiah)  ಅವರಿಗೂ COVID-19 ಪಾಸಿಟಿವ್ ಇರುವುದು ದೃಢಪಟ್ಟಿದೆ.

ಸ್ವತಃ ಸಿದ್ದರಾಮಯ್ಯ ಅವರೇ ಟ್ವೀಟ್ ಮಾಡಿ ತಮಗೆ  ಕೋವಿಡ್ -19 (Covid 19)  ಪಾಸಿಟಿವ್ ಇರುವುದನ್ನು ದೃಢಪಡಿಸಿದ್ದಾರೆ. 'ನನ್ನ COVID-19  ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ. ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ನಿನ್ನೆ ರಾತ್ರಿಯೇ ಆಸ್ಪತ್ರೆಗೆ ದಾಖಲಾಗಿದ್ದೇನೆ. ಇದರಿಂದ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೆ ಸ್ವತಃ ವೈದ್ಯರೂ ಆಗಿರುವ ಸಿದ್ದರಾಮಯ್ಯ ಪುತ್ರ ಹಾಗೂ ಶಾಸಕ ಡಾ. ಯತೀಂದ್ರ ಕೂಡ ಟ್ವೀಟ್ ಮಾಡಿ ತಮ್ಮ ತಂದೆ ಸಿದ್ದರಾಮಯ್ಯ ಅವರಿಗೆ COVID-19 ಪಾಸಿಟಿವ್ ಇದೆ. ಆದುದರಿಂದ ಅವರ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್ ಆಗಬೇಕೆಂದು ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಅವರಿಗೆ COVID-19 ಪಾಸಿಟಿವ್ ಬಂದಿರುವುದರಿಂದ ಅವರ ಕುಟುಂಬ ವರ್ಗದವರು, ಕಾಂಗ್ರೆಸ್ ನಾಯಕರು, ನ್ಯಾಯವಾದಿಗಳು ಆತಂಕಗೊಳ್ಳುವಂತಾಗಿದೆ. ಏಕೆಂದರೆ ಜುಲೈ 27ರಂದು ಸಿದ್ದರಾಮಯ್ಯ ಭೂ ಸುಧಾರಣೆ ಬಗ್ಗೆ ತಿದ್ದುಪಡಿ ಬಗ್ಗೆ ನ್ಯಾಯವಾದಿಗಳ ಜೊತೆ ಚರ್ಚಿಸಿದ್ದರು.‌ ಜುಲೈ 28ರಂದು ಕಾಂಗ್ರೆಸ್ ಹಿರಿಯ ನಾಯಕರ ಜೊತೆ ಸಭೆ ನಡೆಸಿದ್ದರು. 

ಸಿಎಂ ಯಡಿಯೂರಪ್ಪ ಸೇರಿ ಅವರ ಮನೆಯಲ್ಲೇ 11 ಮಂದಿಗೆ COVID-19 ಪಾಸಿಟಿವ್

ಅಂದು 'ಪ್ರಜಾಪ್ರಭುತ್ವ ರಕ್ಷಿಸಿ, ಸಂವಿಧಾನ ಉಳಿಸಿ' ಎಂಬ  ಬೃಹತ್ ಪ್ರತಿಭಟನೆಯಲ್ಲೂ ಪಾಲ್ಗೊಂಡಿದ್ದರು. ಇದಲ್ಲದೆ ಜುಲೈ 29 ರಾತ್ರಿ ಮೈಸೂರಿನ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.‌ ಜುಲೈ 30ನೇ ತಾರೀಖು ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ್ದರು. ಜುಲೈ 31ರಂದು ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿದ್ದರು. ಸುದ್ದಿಗೋಷ್ಟಿಯಲ್ಲಿ ಸ್ಥಳೀಯ ಜಿಲ್ಲಾ ನಾಯಕರು ಭಾಗಿಯಾಗಿದ್ದರು. ಇದೇ ವೇಳೆ ಮೈಸೂರಿನಲ್ಲಿ ತಮ್ಮ ಕುಟುಂಬದ ಜೊತೆ ಕಾಲ ಕಳೆದಿದ್ದ ಸಿದ್ದರಾಮಯ್ಯ ಮೊಮ್ಮಗ (ದಿವಂಗತ ರಾಕೇಶ್ ಸಿದ್ದರಾಮಯ್ಯ ಪುತ್ರ)ನ ಜೊತೆ ಚೆಸ್ ಆಡಿದ್ದರು.

Big Breaking: ಯಡಿಯೂರಪ್ಪ ಇರುವ ಮಣಿಪಾಲ್ ಆಸ್ಪತ್ರೆಗೆ ಸಿದ್ದರಾಮಯ್ಯ ಕೂಡ

ಯುರಿನರಿ ಇನ್ಫೆಕ್ಷನ್ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿನ್ನೆ ಮಧ್ಯರಾತ್ರಿ 3.30ರ ಸುಮಾರಿಗೆ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ COVID -19 ಪರೀಕ್ಷೆ ಮಾಡಲಾಗಿತ್ತು. ಸದ್ಯ COVID -19 ಪರೀಕ್ಷೆಯ ವರದಿ ಬಂದಿದ್ದು ಪಾಸಿಟಿವ್ ಇರುವುದು ದೃಢಪಟ್ಟಿದೆ.

ಮಣಿಪಾಲ್ ಆಸ್ಪತ್ರೆಯಲ್ಲಿ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿಗಳಿಬ್ಬರಿಗೂ ಒಂದೇ ಮಹಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.‌ ಮಹಡಿಯ ಎಡಭಾಗದ ವಾರ್ಡ್ ನಲ್ಲಿ ಸಿದ್ದರಾಮಯ್ಯ ಮತ್ತು ಬಲ ಭಾಗದ ವಾರ್ಡಿನಲ್ಲಿ ಯಡಿಯೂರಪ್ಪ ಇದ್ದಾರೆ. ಇಬ್ಬರಿಗೂ ವಿಶೇಷ ವಾರ್ಡ್ ಕಲ್ಪಿಸಲಾಗಿದೆ. ಇಬ್ಬರಿಗೂ ಓದಲು ಪೇಪರ್ ಹಾಗೂ ವಾಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.