ಬೆಂಗಳೂರು: ಅವಧಿ ಮುಗಿದಿದ್ದರೂ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ ಸದಸ್ಯರನ್ನು ನೇಮಿಸಿ ಹಿಂಬಾಗಿಲ ಮೂಲಕ ಬಿಜೆಪಿ ಅಧಿಕಾರ ನಡೆಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮೂಲಕವೇ ಸದಸ್ಯರು ಆಯ್ಕೆಯಾಗಬೇಕು. ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದೆ. ಆದುದರಿಂದ ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸಬೇಕು ಎಂದು ಪ್ರತಿಪಕ್ಷದ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ಇಂದು ರಾಜ್ಯ ಚುನಾವಣಾ ಅಯುಕ್ತರನ್ನು ಭೇಟಿಮಾಡಿ ಒತ್ತಾಯಿಸಿತು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗ ರಾಜ್ಯ ಚುನಾವಣಾ ಅಯುಕ್ತರಿಗೆ ಸಲ್ಲಿಸಿದ ಮನವಿಯ ಮುಖ್ಯಾಂಶಗಳು ಈ ರೀತಿ ಇವೆ.
ಸಂವಿಧಾನದ 243ಇ ವಿಧಿಯಂತೆ ಗ್ರಾಮ ಪಂಚಾಯತಿಯೊಂದು ಮೊದಲ ಸಭೆ ನಡೆಸಿದ ದಿನಾಂಕದಿಂದ ಐದು ವರ್ಷಗಳ ಅವಧಿಯವರೆಗೆ ಅಧಿಕಾರ ಹೊಂದಿರುತ್ತದೆ. ಅದರಂತೆ 2015 ನೇ ಇಸವಿಯಲ್ಲಿ ನಮ್ಮ ರಾಜ್ಯದ 6024 ಗ್ರಾಮ ಪಂಚಾಯತಿಗಳ ಸದಸ್ಯರ ಸ್ಥಾನಗಳಿಗಾಗಿ ಚುನಾವಣೆಯು ನಡೆದಿರುತ್ತದೆ. ಬಹುಪಾಲು ಗ್ರಾಮ ಪಂಚಾಯತಿಗಳ ಅಧಿಕಾರಾದ ಅವಧಿಯು ಇದೇ ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಕ್ತಾಯವಾಗುತ್ತದೆ.
ಗ್ರಾಮ ಪಂಚಾಯತಿಗಳ ಅಧಿಕಾರಾವಧಿ ಮುಕ್ತಾಯ ಆಗುತ್ತಿದ್ದರೂ ಸಹ ರಾಜ್ಯ ಚುನಾವಣಾ ಆಯೋಗವು ರಾಜ್ಯದ ಗ್ರಾಮ ಪಂಚಾಯತಿಗಳ ಚುನಾವಣಾ (Gram Panchayat elections) ಪ್ರಕ್ರಿಯೆಗಳ ಬಗ್ಗೆ ಪ್ರಾಮಾಣಿಕವಾಗಿ ಪ್ರಕ್ರಿಯೆಯನ್ನು ಭಾರತೀಯ ಸಂವಿಧಾನ 1950 ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಕಾಯ್ದೆ 1993 ರ ಆಶಯದಂತೆ ಆರಂಭಿಸಿಲ್ಲದಿರುವುದು ಸಂವಿಧಾನ ವಿರೋಧಿಯಾದ ನಡೆಯಾಗಿರುತ್ತದೆ.
ರಾಜ್ಯ ಚುನಾವಣಾ ಆಯೋಗವು ರಾಜ್ಯದ ಗ್ರಾಮ ಪಂಚಾಯತಿಗಳಿಗೆ ನಿಗಧಿತ ಅವಧಿಯಲ್ಲಿ ಚುನಾವಣೆಗಳನ್ನು ನಡೆಸದೆ ಇರುವುದರಿಂದ ಗ್ರಾಮಗಳ ವಿಕೇಂದ್ರೀಕೃತ ಸ್ಥಳೀಯ ಸ್ವಯಂ ಆಡಳಿತ ವ್ಯವಸ್ಥೆಯನ್ನು ದಮನ ಮಾಡಿದಂತಾಗುತ್ತದೆ. ಇದರಿಂದ ಸಂವಿಧಾನದ 73 ನೇ ತಿದ್ದುಪಡಿಯ ಧ್ಯೇಯೋದ್ದೇಶಗಳನ್ನು ಉಲ್ಲಂಘಿಸಿದಂತಾಗುತ್ತದೆ.
ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ,1993 ರ ಸೆಕ್ಷನ್ 308ಎಎ ಪ್ರಕಾರ ರಾಜ್ಯ ಚುನಾವಣಾ ಆಯೋಗವು ಪಂಚಾಯತಿಗಳ ಹಾಲಿ ಅಧಿಕಾರಾವಧಿ ಮುಗಿಯುವ ಮೊದಲೆ ಚುನಾವಣಾ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಬೇಕಾಗಿದೆ. ಇದಕ್ಕಾಗಿ ಚುನಾವಣಾ ವೇಳಾಪಟ್ಟಿ ಮತ್ತು ಮೀಸಲಾತಿಗಳ ವಿವರಗಳನ್ನು ಚುನಾವಣೆಗಳ ಅಧಿಸೂಚನೆ ಹೊರಡಿಸುವ 45 ದಿನಗಳ ಮೊದಲೇ ಹೊರಡಿಸಬೇಕಾಗುತ್ತದೆ.
ಆದರೆ ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳ ಅಧಿಕಾರಾವಧಿ ಮುಗಿದು ಹೋಗುತ್ತಿದ್ದರೂ ಕೂಡ ರಾಜ್ಯ ಚುನಾವಣಾ ಆಯೋಗವು ಮೀಸಲಾತಿಯ ನಿಗಧಿ, ವೇಳಾಪಟ್ಟಿಗಳ ಪ್ರಕಟ ಮುಂತಾದ ಯಾವುದೇ ಚುನಾವಣಾ ಪ್ರಕ್ರಿಯೆಗಳನ್ನು ಪ್ರಾರಂಭಿಸಿರುವ ಕುರಿತು ಯಾವ ಮಾಹಿತಿಯೂ ಇಲ್ಲ. ಸೂಚನೆಯೂ ಇಲ್ಲ. ಇದರಿಂದಾಗಿ ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 308ಎಎ ಅನ್ನು ಉದ್ದೇಶ ಪೂರ್ವಕವಾಗಿ ಉಲ್ಲಂಘನೆ ಮಾಡಿದೆ ಮತ್ತು ಕಾಯ್ದೆಯ ಕುರಿತು ಸಂಪೂರ್ಣ ನಿರ್ಲಕ್ಷ್ಯ ತೋರಿದೆ.
ಭಾರತದ ಸಂವಿಧಾನದ ಅನುಚ್ಛೇದ 243ಇ[3] ರ ಅನ್ವಯ ಯಾವುದೇ ಪಂಚಾಯತಿಯ ಐದು ವರ್ಷಗಳ ಅದಿಕಾರಾವಧಿ ಮುಕ್ತಾಯಗೊಳ್ಳುವ ಮೊದಲೇ ಚುನಾವಣೆಗಳನ್ನು ನಡೆಸಬೇಕೆಂಬ ಸ್ಪಷ್ಟ ನಿರ್ದೇಶನವಿದೆ. ಆದ ಕಾರಣ ನಿಗಧಿತ ಅವಧಿಯಲ್ಲಿ ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಕಡ್ಡಾಯ ಕರ್ತವ್ಯವಾಗಿರುತ್ತದೆ.
ಭಾರತದ ಸಂವಿಧಾನದ ಅನುಚ್ಛೇದ 243ಇ[3] ರ ಅನ್ವಯ ಯಾವುದೇ ಪಂಚಾಯತಿಯ ಐದು ವರ್ಷಗಳ ಅದಿಕಾರಾವಧಿ ಮುಕ್ತಾಯಗೊಳ್ಳುವ ಮೊದಲೇ ಚುನಾವಣೆಗಳನ್ನು ನಡೆಸಬೇಕೆಂಬ ಸ್ಪಷ್ಟ ನಿರ್ದೇಶನವಿದೆ. ಆದ ಕಾರಣ ನಿಗಧಿತ ಅವಧಿಯಲ್ಲಿ ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗದ ಕಡ್ಡಾಯ ಕರ್ತವ್ಯವಾಗಿರುತ್ತದೆ.
ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ,1993 ರ ನಿಯಮ 8 ರಂತೆ ಜಿಲ್ಲಾಧಿಕಾರಿಗಳು ಗ್ರಾಮ ಪಂಚಾಯತುಗಳಿಗೆ ಚುನಾವಣೆ ನಡೆಸಲು ಸಾಧ್ಯವಾಗದಿದ್ದಾಗ ಮತ್ತು ಎರಡು ಬಾರಿ ನಿರಂತರವಾಗಿ ಚುನಾವಣೆ ನಡೆಸಿದರೂ ಸದಸ್ಯರು ಆಯ್ಕೆಯಾಗದಿದ್ದಾಗ ಅಥವಾ ಇನ್ನಾವುದೇ ಸಮರ್ಥನೀಯವಾದ ಸ್ಪಷ್ಟ ಕಾರಣಗಳಿದ್ದರೆ ಮಾತ್ರ ಆಡಳಿತ ಸಮಿತಿಯನ್ನು ಅಧಿಸೂಚನೆ ಹೊರಡಿಸುವುದರ ಮೂಲಕ ರಚಿಸಬಹುದಾಗಿದೆ.
ಗ್ರಾಮ ಪಂಚಾಯತಿಗಳಿಗೆ ಸದಸ್ಯರನ್ನು ಚುನಾಯಿಸುವುದು ಅಸಾಧ್ಯವಾದಾಗ ಅಥವಾ ನಿರಂತರವಾಗಿ ಎರಡು ಚುನಾವಣೆಗಳನ್ನು ನಡೆಸಿದರೂ ಸದಸ್ಯರನ್ನು ಆಯ್ಕೆ ಮಾಡಲು ಸಾಧ್ಯವಾಗದಿದ್ದಾಗ ರಾಜ್ಯ ಸರ್ಕಾರವು ಆಡಳಿತ ಸಮಿತಿಯನ್ನು ನೇಮಿಸಬಹುದಾಗಿದೆ. ಪ್ರಸ್ತುತ ಇಂಥಹ ಯಾವುದೇ ಪರಿಸ್ಥಿತಿ ರಾಜ್ಯದಲ್ಲಿ ಉದ್ಭವವಾಗಿಲ್ಲ. ಹಾಗಾಗಿ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 8 ರಂತೆ ಆಡಳಿತ ಸಮಿತಿಗಳನ್ನು ರಚಿಸಲು ಅವಕಾಶವಿಲ್ಲ.
ರಾಜ್ಯ ಚುನಾವಣಾ ಆಯೋಗ (Election Commission)ವು ತನ್ನ ಸಾಂವಿಧಾನಿಕ ಜವಾಬ್ಧಾರಿಯನ್ನು ನ್ಯಾಯಬದ್ಧವಾಗಿ, ಪಕ್ಷಪಾತರಹಿತವಾಗಿ ರಾಷ್ಟ್ರದ ಸಂವಿಧಾನ ಹಾಗೂ ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 ರಂತೆ ನೈಜ ಸ್ಫೂರ್ತಿಯಿಂದ ವರ್ತಿಸಿ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಿಸುತ್ತೇವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ನಿಯೋಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್, ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಸೇರಿದಂತೆ ಇತರೆ ನಾಯಕರು ಇದ್ದರು.