close

News WrapGet Handpicked Stories from our editors directly to your mailbox

ದೇವೇಗೌಡರ ವಿರುದ್ಧ ಗುಡುಗಿದ ಸಿದ್ದರಾಮಯ್ಯ!

ದೇವೇಗೌಡರು ನನ್ನ ಮೇಲೆ ಗಂಭೀರ ಆರೋಪ ಮಾಡಿದಾರೆ. ನಾನು ಮೌನವಾಗಿದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗಲಿದೆ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  

Yashaswini V Yashaswini V | Updated: Aug 23, 2019 , 12:44 PM IST
ದೇವೇಗೌಡರ ವಿರುದ್ಧ ಗುಡುಗಿದ ಸಿದ್ದರಾಮಯ್ಯ!

ಬೆಂಗಳೂರು: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ನನ್ನ ವಿರುದ್ಧ ಕೆಲವು ಗುರುತರ ಆರೋಪಗಳನ್ನು ಮಾಡಿದ್ದಾರೆ. ಅವೆಲ್ಲಾ ಆಧಾರ ರಹಿತ ಹಾಗೂ ರಾಜಕೀಯ ದುರುದ್ದೇಶದಿಂದ ಮಾಡಿರುವ ಆರೋಪಗಳಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಪತ್ರಿಕೆಯೊಂದಕ್ಕೆ ಸಂದರ್ಶನ ಕೊಟ್ಟಿರುವ ಮಾಜಿ ಪ್ರಧಾನಿ ದೇವೇಗೌಡರು ಕೆಲವು ವಿಷಯ ಪ್ರಸ್ತಾಪಿಸಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಅಂದಿದ್ದಾರೆ, ನನ್ನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಡದಿದ್ದರೆ ತಪ್ಪಾಗುತ್ತೆ. ಮೌನವಾಗಿರುವುದು ಸರಿಯಲ್ಲ. ಹಾಗಾಗಿ ಮಾಧ್ಯಮಗಳ ಜತೆ ಮಾತಾಡುತಿದ್ದೇನೆ. ನಾನು ಮೌನವಾಗಿದ್ದರೆ ಜನರಿಗೆ ತಪ್ಪು ಸಂದೇಶ ಹೋಗಲಿದೆ ಎಂಬ ಕಾರಣಕ್ಕೆ ನಾನು ಮಾತನಾಡುತ್ತಿದ್ದೇನೆ.

ದೋಸ್ತಿ ಸರ್ಕಾರದ ಪತನಕ್ಕೆ ನಾನೇ ಕಾರಣ ಎಂಬ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಆರೋಪ ಸತ್ಯಕ್ಕೆ ದೂರವಾದದು. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನನ್ನು ಕೇಳದೆ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿರುವುದನ್ನು ಸಿದ್ದರಾಮಯ್ಯಗೆ ಸಹಿಸಲು ಸಾಧ್ಯವಿಲ್ಲ. ಹೀಗಾಗಿಯೇ ಮೈತ್ರಿ ಸರ್ಕಾರ ಪತನವಾಗಿದೆ ಎಂದು ಬೊಟ್ಟು ತೋರಿಸುತ್ತಿದ್ದಾರೆ. ಅವರ ಆರೋಪಗಳಲ್ಲಿ ಹುರುಳಿಲ್ಲ ಎಂದು ಹರಿಹೈದರಲ್ಲದೇ, ಇವೆಲ್ಲವೂ ರಾಜಕೀಯ ದುರುದ್ದೇಶದಿಂದ ನೀಡುತ್ತಿರುವ ಹೇಳಿಕೆ ಎಂದರು.

ದೇಶದಲ್ಲಿ ಕೋಮುವಾದಿ ಪಕ್ಷ ಅಧಿಕಾರದಲ್ಲಿದೆ. ಸಾಂವಿಧಾನಿಕ ಸಂಸ್ಥೆಗಳು ದುರ್ಬಳಕೆ ಆಗುತ್ತಿವೆ. ಇಂತಹ ಸಂದರ್ಭದಲ್ಲಿ ರಾಜಕೀಯವಾಗಿ ಎಲ್ಲರೂ ಒಟ್ಟಾಗಿರಬೇಕಾಗುತ್ತೆ ಎಂದು ಕಿವಿಮಾತು ಹೇಳಿದ ಸಿದ್ದರಾಮಯ್ಯ, ದೇಶದಲ್ಲಿ ‌ಕೋಮುವಾದಿ ಪಕ್ಷ ಅಧಿಕಾರದಲ್ಲಿದೆ. ಕೇಂದ್ರ ಸರ್ಕಾರ ವಿಪಕ್ಷ‌ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸುವ ಕೆಲಸವಾಗಬೇಕಿದೆ. ಜಾತ್ಯತೀತ ಶಕ್ತಿ ಉಳಿಸುವ ಕೆಲಸವಾಗಬೇಕಿದೆ. 

ನನ್ನ ಮತ್ತು ಅವರ ಮಧ್ಯೆ ರಾಜಕೀಯ ದ್ವೇಷ ಇದೇ ಎಂದು ಅವರೇ ಹೇಳ್ತಾಯಿದ್ದಾರೆ. ನಾನೆಂದೂ ಹಾಗೆ ಅಂದುಕೊಂಡಿಲ್ಲ. ಬಿಜೆಪಿಗೆ ಅಧಿಕಾರ ಬಿಟ್ಟು ಕೊಡಬಾರದು ಎಂಬ ಕಾರಣಕ್ಕೆ ಜೆಡಿಎಸ್ ನಮಗಿಂತ ಕಡಿಮೆ ಸ್ಥಾನ ಹೊಂದಿದ್ದರೂ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡೋಣ ಎಂದು ಹೈ ಕಮಾಂಡ್ ಪರವಾಗಿ ಗುಲಾಂ ನಬಿ ಆಜಾದ್, ಅಶೋಕ್ ಗೆಹ್ಲೋಟ್ ಅವರು ಹೇಳಿದೊಡನೆ ಮರುಮಾತಾಡದೇ ಒಪ್ಪಿಕೊಂಡಿದ್ದೇನೆ. 14 ತಿಂಗಳು ಅವರಿಗೆ ಸಂಪೂರ್ಣ ಸಹಕಾರ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಮೈತ್ರಿ ಸರ್ಕಾರದ ಪತನಕ್ಕೆ ದಳಪತಿಗಳೇ ಕಾರಣ:
ಮೈತ್ರಿ ಸರ್ಕಾರದ ಪತನಕ್ಕೆ ರೇವಣ್ಣ, ಕುಮಾರಸ್ವಾಮಿ, ದೇವೇಗೌಡರೇ ಕಾರಣರೇ ಹೊರತು ನಾನಲ್ಲ ಎಂದು ತಿರುಗೇಟು ನೀಡಿದ ಸಿದ್ದರಾಮಯ್ಯ, ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದು ನನ್ನ ಆಶಯವಾಗಿತ್ತು. ‌ನಾವು 80 ಶಾಸಕರಿದ್ದರೂ ಜೆಡಿಎಸ್ ಗೆ ‌ಬೆಂಬಲ ನೀಡಿದ್ದೆವು. ನಾನು ಕುಮಾರಸ್ವಾಮಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ನಿರ್ಲಕ್ಷ್ಯ ಮಾಡಿ ಏಕಪಕ್ಷೀಯ ನಿರ್ಧಾರ ಮಾಡಿ‌ ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸರ್ಕಾರ ಪತನಕ್ಕೆ ಕಾರಣ.

ಕುಮಾರಸ್ವಾಮಿ ನಡವಳಿಕೆಯಿಂದ ಶಾಸಕರು ಬೇಸತ್ತಿದ್ದರು. ಏಕಪಕ್ಷೀಯ ನಿರ್ಧಾರಗಳು ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿತ್ತು. ಏಕಪಕ್ಷೀಯ ನಿರ್ಧಾರ ಮತ್ತು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದೇ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣ. ಆದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ದೃಷ್ಟಿಯಿಂದ ನಮ್ಮ ಪಕ್ಷದ ವತಿಯಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಐದು ವರ್ಷ ಸಿಎಂ ಆಗಿದ್ದೆ. ಒಬ್ಬ ಶಾಸಕರು ಸರ್ಕಾರದ ವಿರುದ್ದ ಏಕೆ ಮಾತನಾಡಲಿಲ್ಲ. 14 ತಿಂಗಳಲ್ಲಿ ಐದರಿಂದ ಆರು ಬಾರಿ ಸಮನ್ವಯ ಸಮಿತಿ ಸಭೆ ಕರೆದಿದ್ದೇವೆ. ಸಮನ್ವಯ ಸಮಿತಿಯಲ್ಲಿ ಕೈಗೊಂಡ ಯಾವ ತೀರ್ಮಾನವನ್ನು ಸಿಎಂ ಕುಮಾರಸ್ವಾಮಿ ಜಾರಿ‌ಮಾಡಲಿಲ್ಲ. ಕುಮಾರಸ್ವಾಮಿ ನಡವಳಿಕೆಯಿಂದ ಶಾಸಕರು ಬೇಸತ್ತಿದ್ದರು. ಏಕಪಕ್ಷೀಯ ನಿರ್ಧಾರಗಳು ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರಲು ದೇವೇಗೌಡ, ಕುಮಾರಸ್ವಾಮಿ ನೇರ ಕಾರಣ ಎಂದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕನಾಗುವ ಸಲುವಾಗಿ ಸಿದ್ದರಾಮಯ್ಯ ಮೈತ್ರಿ ಸರ್ಕಾರವನ್ನು ಪತನಗೊಳಿಸಿದ್ದಾರೆ ಎಂಬ ದೆವೆಗೌದರ್ ಆರೋಪಕ್ಕೆ ತಿರುಗೇಟು ನೀಡಿದ ಅವರು, ಮುಖ್ಯಮಂತ್ರಿಯಾಗುವ ಸಲುವಾಗಿ ಸರ್ಕಾರ ಬೀಳಿಸುವುದನ್ನು ಕಂಡಿದ್ದೇನೆ, ಆದರೆ ವಿರೋಧ ಪಕ್ಷದ ನಾಯಕನಾಗುವ ಸಲುವಾಗಿ ಸರ್ಕಾರ ಬೀಳಿಸಿದ್ದನ್ನು ನಾನೆಂದೂ ನೋಡಿಲ್ಲ. ಅದನ್ನು ದೇವೇಗೌಡರು ನೋಡಿದ್ದರೇನೋ ನನಗೆ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.

ನಾನ್ಯಾವತ್ತೂ ನೀಚ ರಾಜಕಾರಣ ಮಾಡಲ್ಲ:
ನಾನೆಂದೂ ಅಧಿಕಾರದ ಹಿಂದೆ ಬಿದ್ದವನಲ್ಲ. ಸಮ್ಮಿಶ್ರ ಸರಕಾರವನ್ನು ಉರುಳಿಸುವಂತಹ ನೀಚ ಕೆಲಸವನ್ನು ನಾನು ಮಾಡಲ್ಲ. ಅಂತಹ ನೀಚ ರಾಜಕಾರಣವನ್ನು ನಾನೆಂದೂ ಮಾಡಿಲ್ಲ. ಅದೇನಿದ್ದರೂ ದೇವೇಗೌಡ ಮತ್ತು ಅವರ ಮಕ್ಕಳ ಹುಟ್ಟುಗುಣ ಎಂದು ನೇರವಾಗಿ ಆರೋಪ ಮಾಡಿದರು. ಸರ್ಕಾರ ಕೆಡವೋದ್ರಲ್ಲಿ ದೇವೇಗೌಡ್ರು ನಿಪುಣರು. ಇತಿಹಾಸ ಕೆದಕಿದರೆ ಯಾರು ಏನು ಮಾಡಿದ್ರು ಎಲ್ಲ ಬಣ್ಣ ಬಯಲಾಗುತ್ತೆ. ಧರಂಸಿಂಗ್ ಸರ್ಕಾರ ಇದ್ದಾಗ ಏನ್ ಮಾಡಿದ್ರು ಗೊತ್ತಿಲ್ವಾ. ಧರಂ ಸಿಂಗ್ ಸರ್ಕಾರ ಬೀಳಿಸಿ ಬಿಜೆಪಿ ಜತೆ ಕುಮಾರಸ್ವಾಮಿ ಕೈಜೋಡಿಸಲು ದೇವೇಗೌಡರೇ ಕಾರಣ. ಯಡಿಯೂರಪ್ಪಗೆ ಸಿಎಂ ಹುದ್ದೆ ನೀಡದೆ ವಚನ ಭ್ರಷ್ಟ ರಾದವರು ದೇವೇಗೌಡ, ಕುಮಾರಸ್ವಾಮಿ ಎಂದು ಹೇಳಿದರು.

ದೇವೇಗೌಡರು ವಚನ ಭ್ರಷ್ಟರು:
ಕುಮಾರಸ್ವಾಮಿ ಹೇಳ್ತಾರೆ ಬಿಜೆಪಿ ಜೊತೆ ಸರ್ಕಾರ ರಚಿಸಿದರೆ ನನ್ನ ಹೆಣದ ಮೇಲೆ ರಚಿಸಲಿ ಎಂದು ಹೇಳಿದ್ದರು ಎಂದು, ಆದರೆ ದೇವೇಗೌಡರ ಸಹಕಾರವಿಲ್ಲದೆ ಬಿಜೆಪಿ ಜೊತೆ ಸರ್ಕಾರ ರಚಿಸಲು ಸಾಧ್ಯವೇ? ಎಂದರು.

ಲೋಕಸಭೆ ಚುನಾವಣೆಯಲ್ಲಿ ದೋಸ್ತಿ ಬೇಡ ಎಂದಿದ್ದು ನಿಜ:
ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್-ಜೆಡಿಎಸ್ ಚುನಾವಣಾ ಸಂದರ್ಭದಲ್ಲಿ ಸಾಕಷ್ಟು ಕಚ್ಚಾಡಿಕೊಂಡಿದ್ದೇವೆ. ಇದರಿಂದಾಗಿ ಲೋಕಸಭಾ ಚುನಾವಣೆಯಲ್ಲಿ ನಾವು ಒಟ್ಟಿಗೆ ಸ್ಪರ್ಧಿಸುವುದರಿಂದ ಕಾಂಗ್ರೆಸ್ ಮತಗಳು ಜೆಡಿಎಸ್ ಪಕ್ಷಕ್ಕಾಗಲೀ ಅಥವಾ ಜೆಡಿಎಸ್ ಮತಗಳು ಕಾಂಗ್ರೆಸ್ ಪಕ್ಷಕ್ಕಾಗಲೀ ಬರುವುದಿಲ್ಲ. ಹಾಗಾಗಿ ಸ್ನೇಹಮಯವಾಗಿ ಸ್ಪರ್ಧಿಸೋಣ ಎಂದು ಹೈಕಮಾಂಡ್ ಗೆ ತಿಳಿಸಿದ್ದೆ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ತುಮಕೂರು, ಮಂಡ್ಯದಲ್ಲಿ ಅಭ್ಯರ್ಥಿ ಸೋಲಿಗೆ ನಾನೇ ಕಾರಣ ಎಂದು ದೇವೇಗೌಡರು ಆರೋಪ ಮಾಡಿದ್ದಾರೆ. ಹಾಗಾದರೆ ಉಳಿದ ಭಾಗಗಳಲ್ಲಿ ನಮ್ಮ ಪಕ್ಷದ ಸೋಲಿಗೆ ಜೆಡಿಎಸ್ ಕಾರಣವೇ... ಎಂದು ಪ್ರಶ್ನಿಸಿದರಲ್ಲದೆ, ಸಿಂಪತಿಗಾಗಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸೋದೇ ದೇವೇಗೌಡರ ಕೆಲಸ. ಇಲ್ಲಸಲ್ಲದ್ದನ್ನು ಹೇಳಿ ಬಳಿಕ ಅಳೋದು ಅವರ ಟ್ರಿಕ್ಸ್ ಎಂದು ವ್ಯಂಗ್ಯವಾಡಿದರು.

ದೇವೇಗೌಡರು ಕುಟುಂಬದವರನ್ನು ಬಿಟ್ಟು ಬೇರೆಯಾರನ್ನೂ ಬೆಳೆಸುವುದುದಿಲ್ಲ ಎಂದು ಆರೋಪ ಮಾಡಿದ ಸಿದ್ದರಾಮಯ್ಯ, ಸ್ವಜಾತಿಯವರನ್ನು, ಸ್ವಪಕ್ಷದವರನ್ನೇ ದೇವೇಗೌಡರು ಬೆಳೆಸಿಲ್ಲ ಎಂದರು.

ರಾಜ್ಯದ ಜನರು ಇಬ್ಬರ ಇತಿಹಾಸವನ್ನೂ ನೋಡಿದ್ದಾರೆ. ಜನತೆಗೆ ನನ್ನ ನಡವಳಿಕೆಯೂ ಗೊತ್ತಿದೆ, ದೇವೇಗೌಡರ ನಡವಳಿಕೆಯ ಬಗ್ಗೆಯೂ ಗೊತ್ತಿದೆ. ರಾಜ್ಯದ ಜನರು ಇದನ್ನು ಅರ್ಥಮಾಡಿಕೊಳ್ಳುವ ವಿಶ್ವಾಸ ನನಗಿದೆ ಎಂದು ಹೇಳಿದರು.