ಸಿದ್ದರಾಮಯ್ಯನವರ ರಾಜಕೀಯ ಖೆಡ್ಡಾದಲ್ಲಿ ಬೀಳುತ್ತಾರಾ ಮೋದಿ?

ಸಿದ್ದರಾಮಯ್ಯ ಸರ್ಕಾರದ 'ಕರ್ನಾಟಕ ಮಾದರಿ' ಅಭಿವೃದ್ದಿಯು ಇಲ್ಲಿಯವರೆಗೂ 'ಡೆವಲಪ್ಮೆಂಟ್' ನ ಧ್ವನಿ ವರ್ಧಕದಂತೆ ಬಿಂಬಿತವಾಗುತ್ತಿದ್ದ 'ಗುಜರಾತ್ ಮಾದರಿ' ಗೆ ಪರ್ಯಾಯ ಎನ್ನುವ ಸ್ಪಷ್ಟ ಅಂಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ

Last Updated : Mar 8, 2018, 07:42 PM IST
  • ಸಿದ್ದರಾಮಯ್ಯನವರು ಕಾಲಕ್ರಮಾನುಸಾರವಾಗಿ ಕನ್ನಡದ ಅಸ್ಮಿತೆ ಮತ್ತು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸ್ವಾಯತ್ತ ಸ್ಥಾನಮಾನಗಳ ಬೇಡಿಕೆ ದಾಳ ಉರುಳಿಸುವ ಮೂಲಕ ಬಿಜೆಪಿಗೆ ನೇರವಾಗಿ ಚೆಕ್ ಮೇಟ್ ನೀಡಿದ್ದಾರೆ.
  • ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಪ್ರತಿನಿಧಿಸುವ 'ಒಳಗೊಳ್ಳುವಿಕೆಯ ಅಭಿವೃದ್ದಿ ರಾಜಕಾರಣ' ದೇಶದೆಲ್ಲಡೆ ಚರ್ಚೆಯ ಸಂಗತಿಯಾಗಿದೆ.
  • ಸಿದ್ದರಾಮಯ್ಯ ಸರ್ಕಾರದ 'ಕರ್ನಾಟಕ ಮಾದರಿ' ಅಭಿವೃದ್ದಿಯು ಇಲ್ಲಿಯವರೆಗೂ 'ಡೆವಲಪ್ಮೆಂಟ್' ನ ಧ್ವನಿ ವರ್ಧಕದಂತೆ ಬಿಂಬಿತವಾಗುತ್ತಿದ್ದ 'ಗುಜರಾತ್ ಮಾದರಿ' ಗೆ ಪರ್ಯಾಯ ಎನ್ನುವ ಸ್ಪಷ್ಟ ಅಂಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಈ ನಡೆಯನ್ನು ವೆಲೆರಿಯನ್ ರೋಡ್ರಿಗಸ್ ಜೇಮ್ಸ್ ಮೇನರ್ ಹಾಗೂ ಕ್ರಿಸ್ಟೋಫರ್ ಜಾಫ್ರೊಲಟ ರಂತಹ ರಾಜಕೀಯ ಚಿಂತಕರು ಕೂಡ ಶ್ಲಾಘಿಸಿದ್ದಾರೆ.
ಸಿದ್ದರಾಮಯ್ಯನವರ ರಾಜಕೀಯ ಖೆಡ್ಡಾದಲ್ಲಿ ಬೀಳುತ್ತಾರಾ ಮೋದಿ? title=

ಕರ್ನಾಟಕ ರಾಜ್ಯ ವಿಧಾನಸಭೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ. ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಭಾಗ್ಯಗಳ ಮೂಲಕ ನವ-ಕರ್ನಾಟಕದ ನಿರ್ಮಾಣಕ್ಕೆ ದಾಪುಗಾಲು ಇಡುತ್ತಿದ್ದರೆ, ಇನ್ನೊಂದೆಡೆ ಈ ನಡೆ ಬಿಜೆಪಿಯಲ್ಲಿ ನಡುಕ ಹುಟ್ಟಿಸಿದೆ.
 
ಸಿದ್ದರಾಮಯ್ಯನವರು ಕಾಲಕ್ರಮಾನುಸಾರವಾಗಿ ಕನ್ನಡದ ಅಸ್ಮಿತೆ ಮತ್ತು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸ್ವಾಯತ್ತ ಸ್ಥಾನಮಾನಗಳ ಬೇಡಿಕೆ ದಾಳ ಉರುಳಿಸುವ ಮೂಲಕ ಬಿಜೆಪಿಗೆ ನೇರವಾಗಿ ಚೆಕ್ ಮೇಟ್ ನೀಡಿದ್ದಾರೆ. ಆದ್ದರಿಂದ ಸಿದ್ದರಾಮಯ್ಯನವರ ಈ ಆರ್ಭಟಕ್ಕೆ ಬಿಜೆಪಿಯವರು ನಿಜಕ್ಕೂ ಬೆಚ್ಚಿ ಬಿದ್ದಿದ್ದಾರೆ. ಕಳೆದ ಒಂದು ವರ್ಷಗಳಲ್ಲಿನ ಸಿದ್ದರಾಮಯ್ಯನವರ ರಾಜಕೀಯ ಪಟ್ಟುಗಳು ರಾಜ್ಯದ ಬಿಜೆಪಿ ನಾಯಕರಿರಲಿ, ಸ್ವತಃ ಪ್ರಧಾನಿ ನರೇಂದ್ರ ಮೊದಿಯವರಿಗೂ ಕೂಡಾ ನಿಲುಕದಂತೆ ಮಾಡಿವೆ.

ಈಗ ಸಿದ್ದರಾಮಯ್ಯನವರ ರಾಜಕೀಯ ತಂತ್ರಗಳ ಮರ್ಮ ಅರಿತಿರುವ ಮೋದಿ, ಇನ್ನು ಕೆಲವೇ ದಿನಗಳಲ್ಲಿ ರಾಜ್ಯದ ಚುನಾವಣೆಯನ್ನು ಎದುರಿಸಲು ಇಡೀ ಕೇಂದ್ರ ಸಚಿವ ಸಂಪುಟವೇ ಕರ್ನಾಟಕಕ್ಕೆ ಬಂದು ಠಿಕಾಣಿ ಹೂಡಲು ಕಳುಹಿಸಲಿದ್ದಾರೆ ಎನ್ನಲಾಗಿದೆ. ಇದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವೂ ಸಹಿತ ಬೂತ್ ಮಟ್ಟದಲ್ಲಿ ಬಿಜೆಪಿಗೆ ಸಾಥ್ ನೀಡಲಿದೆ. ಈ ಎಲ್ಲ ಕಾರಣಕ್ಕಾಗಿಯೇ ರಾಜ್ಯದ ಚುನಾವಣೆ ಒಂದರ್ಥದಲ್ಲಿ ಸಿದ್ದರಾಮಯ್ಯ ಮತ್ತು ನರೇಂದ್ರ ಮೋದಿ ವಿರುದ್ಧ ಎನ್ನುವಂತೆ ಮಾರ್ಪಾಡಾಗಿದೆ. 

ಪ್ರಾರಂಭದಿಂದಲೂ ಬಿಜೆಪಿಯನ್ನು ಹಿಂದಿ ಪಕ್ಷ ಮತ್ತು ಉತ್ತರ ಭಾರತದ ಪಕ್ಷ ಎನ್ನುವ ಭಾವನೆ ದಕ್ಷಿಣ ಭಾರತದಲ್ಲಿದೆ. ಇದಕ್ಕೆ ಪ್ರಮುಖ ಕಾರಣ ಅದು ಪ್ರತಿನಿಧಿಸುವ ಸಂಗತಿ ಮತ್ತು ವಿಚಾರಗಳು. ಆದ್ದರಿಂದ ಈ ಕಾರಣಕ್ಕಾಗಿಯೇ ಅದು ಕರ್ನಾಟಕವೊಂದನ್ನು ಹೊರತುಪಡಿಸಿ ದಕ್ಷಿಣದ ಬೇರೆ ಭಾಗಗಳಲ್ಲಿ ತನ್ನ ನೆಲೆಯನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಈಗ ಸಿದ್ದರಾಮಯ್ಯ ಈ ಐಡೆಂಟಿಟಿಯನ್ನೇ ದಾಳವಾಗಿಸಿ ಬಿಜೆಪಿಯನ್ನು ಖೆಡ್ಡಾದಲ್ಲಿ ಬೀಳಿಸುವ ಪ್ರಯತ್ನವನ್ನು ಭಾಷೆ ಮತ್ತು ಧರ್ಮದ ಸಂಗತಿಗಳ ಮೂಲಕ  ಮಾಡುತ್ತಿದ್ದಾರೆ. ಮೂಲತಃವಾಗಿ ಈ ಹಿಂದೆ ಬಿಜೆಪಿ ಕೂಡಾ ಹಿಂದಿ, ಹಿಂದು, ಹಿಂದುಸ್ತಾನ ಎನ್ನುವ ತ್ರಿಕೋನ ವರ್ತುಲವನ್ನೇ ದಾಳವನ್ನಾಗಿಸಿ ಈಗ ರಾಜಕೀಯ ಚುಕ್ಕಾಣಿಯನ್ನು ಹಿಡಿದಿರುವುದನ್ನು ನಾವು ಗಮನಿಸಬಹುದು. 

ಈ ಕಾರ್ಯದ ಮೊದಲ ಹಂತವಾಗಿ ಕನ್ನಡಪರ ಸಂಘಟನೆಗಳ ಪ್ರತ್ಯೇಕ ರಾಜ್ಯ ಧ್ವಜದ ಬೇಡಿಕೆಗೆ ಪೂರಕವಾಗಿ ಸ್ಪಂಧಿಸಿರುವ ಸಿದ್ದರಾಮಯ್ಯ, ಆ ಮೂಲಕ ಏಕ ಭಾಷೆ ಅಸ್ಮಿತೆಯನ್ನು ಪ್ರತಿಪಾದಿಸುತ್ತಾ ಬಂದಿದ್ದ ಬಿಜೆಪಿಗೆ ಇದು ನಿಜಕ್ಕೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನೊಂದೆಡೆ  ಕರ್ನಾಟಕದಲ್ಲಿ ಬಿಜೆಪಿಯ ವೋಟ್ ಬ್ಯಾಂಕ್ ಆಗಿದ್ದ ಲಿಂಗಾಯತ ಸಮುದಾಯ ಈಗ ಪ್ರತ್ಯೇಕ ಧರ್ಮದ ಕೂಗನ್ನು ಎತ್ತಿದೆ. ಈ ಕೂಗಿಗೆ ಪೂರಕವಾಗಿ ಐತಿಹಾಸಿಕ ಕಾರಣಗಳ ಮೂಲಕ ತಾವು ಹೇಗೆ ಹಿಂದುಗಳಿಗಿಂತ ಭಿನ್ನ ಎನ್ನುವುದಕ್ಕೆ ರಾಜಕೀಯ ಮತ್ತು ಕಾನೂನಾತ್ಮಕ ಪರಿಹಾರವನ್ನು ಕಂಡುಹಿಡಿಯಲು ಹೊರಟಿದ್ದಾರೆ. ಈ ವಿಷಯದಲ್ಲೂ  ಕೂಡಾ ಸಿದ್ದರಾಮಯ್ಯ ಜಾಣ ನಡೆ ಇಟ್ಟಿದ್ದಾರೆ. ಲಿಂಗಾಯತ ಸಮುದಾಯದ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಏಳು ಸದಸ್ಯರ ಸಮಿತಿಯನ್ನು ನೇಮಕ ಮಾಡಿದೆ. ಈಗಾಗಲೇ ಈ ಸಮಿತಿಯು ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನಕ್ಕೆ ಒಪ್ಪಿಗೆ ನೀಡಿ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ಮುಂಬರುವ ದಿನಗಳಲ್ಲಿ ಈ ವರದಿಯನ್ನು ಜಾರಿ ಮಾಡಲು ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ರವಾನಿಸಲಿದ್ದಾರೆ.

ಒಂದು ಕಡೆ ಬಿಜೆಪಿ ಉತ್ತರದಿಂದ ದೇಶದ ಎಲ್ಲ ದಿಕ್ಕುಗಳಿಗೆ ತನ್ನ ಛಾಪನ್ನು ಮೂಡಿಸುತ್ತಿದೆ. ಆದರೆ, ಅದಕ್ಕೆ ಕರ್ನಾಟಕದಲ್ಲಿ ಮಾತ್ರ ಭಿನ್ನ ಅನುಭವವಾಗುತ್ತಿದೆ. ಕಾರಣ ಕಳೆದ 40 ವರ್ಷಗಳಲ್ಲಿ ದೇವರಾಜ ಅರಸು ನಂತರ ಸದ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೂರ್ಣಾವಧಿ ಸರ್ಕಾರ ಹೊಂದುವ ಖ್ಯಾತಿಗೆ ಒಳಗಾಗಲಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ಪ್ರತಿನಿಧಿಸುವ  'ಒಳಗೊಳ್ಳುವಿಕೆಯ ಅಭಿವೃದ್ದಿ ರಾಜಕಾರಣ' ದೇಶದೆಲ್ಲಡೆ ಚರ್ಚೆಯ ಸಂಗತಿಯಾಗಿದೆ. ಆ ಮೂಲಕ ಸಿದ್ದರಾಮಯ್ಯ ಸರ್ಕಾರದ 'ಕರ್ನಾಟಕ ಮಾದರಿ' ಅಭಿವೃದ್ದಿಯು ಇಲ್ಲಿಯವರೆಗೂ 'ಡೆವಲಪ್ಮೆಂಟ್' ನ ಧ್ವನಿ ವರ್ಧಕದಂತೆ ಬಿಂಬಿತವಾಗುತ್ತಿದ್ದ 'ಗುಜರಾತ್ ಮಾದರಿ' ಗೆ ಪರ್ಯಾಯ ಎನ್ನುವ ಸ್ಪಷ್ಟ ಅಂಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಈ ನಡೆಯನ್ನು ವೆಲೆರಿಯನ್ ರೋಡ್ರಿಗಸ್  ಜೇಮ್ಸ್ ಮೇನರ್ ಹಾಗೂ ಕ್ರಿಸ್ಟೋಫರ್ ಜಾಫ್ರೊಲಟ ರಂತಹ ರಾಜಕೀಯ ಚಿಂತಕರು ಕೂಡ ಶ್ಲಾಘಿಸಿದ್ದಾರೆ.

ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಹಿತ ಸಿದ್ದರಾಮಯ್ಯ ನಾಯಕತ್ವದ ಮೇಲೆ ಅವಲಂಭಿತವಾಗಿ ಮತ್ತೆ ತನ್ನ ರಾಜಕೀಯ ಪುನರ್ಜನ್ಮವನ್ನು ಕರ್ನಾಟಕದ ಮೂಲಕ ಕಾಣುವ ಹೆಬ್ಬಯಕೆಯನ್ನು ಹೊಂದಿದೆ. ಇತ್ತ ಕಡೆ ಕಾಂಗ್ರೆಸ್ ಮುಕ್ತ ಭಾರತದ ಕನಸು ಕಾಣುತ್ತಿರುವ ಬಿಜೆಪಿಗೆ ಕರ್ನಾಟಕವು ಪ್ರತಿಷ್ಠೆಯ ಕಣವಾಗಿದೆ. ಕಾರಣ, ಒಂದು ವೇಳೆ ಇಲ್ಲಿ ಬಿಜೆಪಿ ಸೋತಿದ್ದೇ ಆದಲ್ಲಿ, ರಾಷ್ಟ್ರ ರಾಜಕಾರಣದಲ್ಲಿ ಕರ್ನಾಟಕದ ಫಲಿತಾಂಶವು ವ್ಯಾಪಕವಾದ ಪರಿಣಾಮವನ್ನು ಬೀರಲಿದೆ. ಈಗಾಗಲೇ ಸಣ್ಣ ಮಟ್ಟದ ಪ್ರಾದೇಶಿಕ ಪಕ್ಷಗಳಂತೂ ಮೋದಿ ಸರ್ಕಾರದ ವಿರುದ್ಧ ಕತ್ತಿ ಮಸೆಯುವಂತೆ ತೋರುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ತೆಲುಗು ದೇಶಂ ಮೋದಿ ಸರ್ಕಾರದಿಂದ ಹೊರಬಂದದ್ದು ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ.

Trending News