ಕೃಷಿ ಭೂಮಿ ದುಡ್ಡಿರುವವರ ಪಾಲಾಗಲು ಅವಕಾಶ ನೀಡಿರುವ ತಿದ್ದುಪಡಿ ಕೈಬಿಡುವಂತೆ ಸಿದ್ದರಾಮಯ್ಯ ಪತ್ರ

ಕೇರಳ ರಾಜ್ಯದಲ್ಲಿ ಕುಟುಂಬವೊಂದು ಗರಿಷ್ಠ 20 ಎಕರೆ ಭೂಮಿಯನ್ನು ಹೊಂದಬಹುದು. ತಮಿಳುನಾಡಿನಲ್ಲಿ 30 ಎಕರೆ, ಆಂಧ್ರಪ್ರದೇಶದಲ್ಲಿ 54 ಎಕರೆ, ಬಿಹಾರದಲ್ಲಿ 45 ಎಕರೆಗಳನ್ನು ಹೊಂದಬಹುದಾಗಿದೆ. ಆದರೆ  ಕರ್ನಾಟಕದಲ್ಲಿ 216 ಎಕರೆ ಭೂಮಿಯನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ.

Last Updated : Jun 17, 2020, 02:25 PM IST
ಕೃಷಿ ಭೂಮಿ ದುಡ್ಡಿರುವವರ ಪಾಲಾಗಲು ಅವಕಾಶ ನೀಡಿರುವ ತಿದ್ದುಪಡಿ ಕೈಬಿಡುವಂತೆ ಸಿದ್ದರಾಮಯ್ಯ ಪತ್ರ title=

ಬೆಂಗಳೂರು: ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯು ಕರ್ನಾಟಕ ಭೂ ಸುಧಾರಣೆ ಕಾಯ್ದೆಯ ವಿವಿಧ ಸೆಕ್ಷನ್ ಗಳಿಗೆ ತಿದ್ದುಪಡಿ ತಂದು ಹಣ ಇರುವ ಯಾರೂ ಬೇಕಾದರೂ ಕೃಷಿ ಜಮೀನು ಕೊಂಡುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. 

ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳೂ ಆದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ಅವರಿಗೆ ಪತ್ರ ಬರೆದು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯ (Siddaramaiah) ಪತ್ರವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.

ಮಾನ್ಯ ಶ್ರೀ ಯಡಿಯೂರಪ್ಪ ರವರೆ,
ದಿನಾಂಕ: 11-06-2020 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರವು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಸೆಕ್ಷನ್ 79 ಎ, ಬಿ, ಸಿ ಮತ್ತು 80 ನ್ನು ಪೂರ್ವಾನ್ವಯವಾಗುವಂತೆ ರದ್ದುಪಡಿಸುವುದು ಹಾಗೂ ಪ್ರಸ್ತುತ ಬಾಕಿ ಉಳಿದಿರುವ 79ಎ ಮತ್ತು 79ಬಿ ಪ್ರಕರಣಗಳನ್ನು ವಜಾ ಮಾಡುವುದು. ಸೆಕ್ಷನ್ 63 ರಡಿ ವ್ಯಕ್ತಿಗೆ ಅಥವಾ ಒಂದು ಕುಟುಂಬ ಕೃಷಿ ಭೂಮಿ ಹೊಂದಬಹುದಾದ ಪ್ರಮಾಣವನ್ನು 10 ಯುನಿಟ್‍ನಿಂದ 20 ಯುನಿಟ್‍ಗೆ, ಗರಿಷ್ಠ 40 ಯುನಿಟ್‍ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಕೇರಳ ರಾಜ್ಯದಲ್ಲಿ ಕುಟುಂಬವೊಂದು ಗರಿಷ್ಠ 20 ಎಕರೆ ಭೂಮಿಯನ್ನು ಹೊಂದಬಹುದು. ತಮಿಳುನಾಡಿನಲ್ಲಿ 30 ಎಕರೆ, ಆಂಧ್ರಪ್ರದೇಶದಲ್ಲಿ 54 ಎಕರೆ, ಬಿಹಾರದಲ್ಲಿ 45 ಎಕರೆಗಳನ್ನು ಹೊಂದಬಹುದಾಗಿದೆ. ಆದರೆ  ಕರ್ನಾಟಕದಲ್ಲಿ 216 ಎಕರೆ ಭೂಮಿಯನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ. ಅಕ್ಕಪಕ್ಕದ ಎಲ್ಲಾ ರಾಜ್ಯಗಳಲ್ಲಿ ತೋಟದ ಭೂಮಿ 10 ಎಕರೆ ಹೊಂದಬಹುದಾದರೆ ನಮ್ಮಲ್ಲಿ 56 ಎಕರೆ ಮತ್ತು ನೀರಾವರಿ ಭೂಮಿಯನ್ನು 80 ಎಕರೆಯವರೆಗೆ ಹೊಂದಲು ಅವಕಾಶ ಮಾಡಲು ಹೊರಟಿರುವುದಾಗಿ ತಿಳಿದು ಬಂದಿದೆ ಇದರಿಂದಾಗಿ ನೀರಾವರಿ ಭೂಮಿಯು ಬಂಡವಾಳಶಾಹಿಗಳ ಪಾಲಾಗುತ್ತದೆ.

ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ಅತ್ಯಂತ ದೊಡ್ಡ ಇತಿಹಾಸವಿದೆ.ಸ್ವಾತಂತ್ರ್ಯ ಹೋರಾಟದಲ್ಲಿ ಭೂ ಸುಧಾರಣೆಯು ಸಹ ಮುಖ್ಯ ಅಜೆಂಡಾವಾಗಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು 1935 ರ ಆಸುಪಾಸಿನಲ್ಲಿ ಭೂಮಿಯು ರಾಷ್ಟ್ರೀಕರಣ ಆಗಬೇಕೆಂದು ಹೇಳಿದ್ದರು. ಅಸಂಖ್ಯಾತ ಜನ ಭೂ ಸುಧಾರಣೆಗಾಗಿ ಪ್ರಾಣ ತೆತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕಾಗೋಡಿನ ಗೇಣಿ ಪದ್ಧತಿ ವಿರುದ್ಧದ ಹೋರಾಟವು 1961 ರ ಭೂ ಸುಧಾರಣಾ ಕಾಯ್ದೆಗೆ ದಾರಿ ಮಾಡಿಕೊಟ್ಟಿತ್ತು. ಆನಂತರ ದೇವರಾಜು ಅರಸು ರವರು 1974ರಲ್ಲಿ ತಂದ ತಿದ್ದುಪಡಿಗಳಿಂದಾಗಿ ರಾಜ್ಯದ ಕೃಷಿಕರು ನೆಮ್ಮದಿ ಕಾಣುವಂತಾಯಿತು. ಒಬ್ಬರಿಗೆ ಒಂದು ವೃತ್ತಿ ಎಂಬ ಸಮಾಜವಾದಿ ತತ್ವದಡಿಯಲ್ಲಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಸೆಕ್ಷನ್ 79ಎ,ಬಿ,ಸಿ, ಮತ್ತು 80 ಹಾಗೂ 63 ನ್ನು  ರೂಪಿಸಿ ಜಾರಿಗೊಳಿಸಿದರು. ಈ ತಿದ್ದುಪಡಿಯು ಆ ಕಾಯ್ದೆಯ ಆತ್ಮರೂಪಿಯೆಂದೆನ್ನಿಸಿಕೊಂಡಿತು. 

ಕರ್ನಾಟಕದಂತಹ ರಾಜ್ಯಗಳು ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವಹಿಸಿದ್ದರೆ ಅದರ ಹಿಂದೆ ಭೂ ಸುಧಾರಣೆಯ ಅಡಿಪಾಯವಿದೆ. ನಮ್ಮಲ್ಲಿ  ಭೂ ಸುಧಾರಣೆ ಕೃಷಿ ಮತ್ತು ಕೈಗಾರಿಕೆಗಳೆರಡು ಸಮತೋಲಿತ ಅಭಿವೃದ್ಧಿ ಸಾಧಿಸಿವೆ ಎಂದರೆ ಅದರ ಹಿಂದೆ ಭೂಮಿಯ ಹಂಚಿಕೆ ಕಾರಣವಾಗಿದೆ. ಸಾಮಾಜಿಕ ಮೂಲಭೂತ ಸೌಕರ್ಯವಾದ ಭೂಮಿಯ ಲಭ್ಯತೆಯ ಆಧಾರದ ಮೇಲೆಯೇ ರಾಜ್ಯದ ರೈತರ ಖರೀದಿ ಸಾಮಥ್ರ್ಯ ಹೆಚ್ಚಿ ಆರ್ಥಿಕತೆಗೆ ವೇಗ ಬರಲು ಸಾಧ್ಯವಾಗಿದೆ. ಜನ ಭೂಮಿ ಮಾರುವುದರಿಂದ ತಕ್ಷಣಕ್ಕೆ  ಆರ್ಥಿಕತೆಗೆ ಚೈತನ್ಯ ಬರಬಹುದಾದರೂ ಭವಿಷ್ಯದಲ್ಲಿ ಜನರ ಕೈಯ್ಯಲ್ಲಿದ್ದ ಹಣ ಖರ್ಚಾಗಿ ಖರೀದಿ ಸಾಮಥ್ರ್ಯ ಕುಸಿದು ರಾಜ್ಯದ ಆರ್ಥಿಕತೆ ಪಾತಾಳದತ್ತ ಸಾಗುತ್ತದೆ.

2015-16ರ ಕೃಷಿ ಗಣತಿ ಪ್ರಕಾರ ರಾಜ್ಯದಲ್ಲಿ 86.81 ಲಕ್ಷ ರೈತರು 2 ಕೋಟಿ 60 ಲಕ್ಷ ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಕುಟುಂಬವೊಂದು ಸರಾಸರಿ 3 ಎಕರೆ ಭೂಮಿ ಹೊಂದಿದೆ. 2015-16 ರಲ್ಲಿ ಪರಿಶಿಷ್ಟ ಜಾತಿಯ 97,300 ಕುಟುಂಬಗಳು 2,43,760 ಎಕರೆ ಭೂಮಿಯ ಒಡೆತನ ಹೊಂದಿದ್ದರೆ,ಪರಿಶಿಷ್ಟ ಪಂಗಡದ 52,100 ಕುಟುಂಬಗಳು 1,60,600 ಎಕರೆ ಭೂಮಿಯ ಒಡೆತನವನ್ನು ಹೊಂದಿವೆ. ಅಂದರೆ ಸುಮಾರು 4 ಕೋಟಿ ಜನ ಕೃಷಿ ಚಟುವಟಿಕೆಯಲ್ಲಿ ನೇರವಾಗಿ ತೊಡಗಿದ್ದಾರೆಂಬುದು ಇದರ ಅರ್ಥ.

ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಸಮರ್ಥಿಸಲು ಮುಖ್ಯವಾಗಿ ಮಂಡಿಸುತ್ತಿರುವ ವಾದ ರಾಜ್ಯಕ್ಕೆ ಬಂಡವಾಳದ ಹರಿವು ಹೆಚ್ಚಾಗುತ್ತದೆ ಎಂಬುದಾಗಿದೆ. ವಾಸ್ತವ ಏನೆಂದರೆ ದೇಶಗಳ  ಮುಂದಿನ ಭವಿಷ್ಯ ರೂಪುಗೊಳ್ಳುವುದೇ ಜ್ಞಾನ ಆಧಾರಿತ ಆರ್ಥಿಕತೆಯಿಂದ. ನಾಲೆಡ್ಜ್ ಎಕಾನಮಿ ಮೂಲಭೂತ ಸೌಕರ್ಯಗಳನ್ನು ಆಧರಿಸಿ ರೂಪುಗೊಳ್ಳುತ್ತದೆಯೇ ಹೊರತು ಭೂಮಿಯನ್ನು ಆಧರಿಸಿ ಅಲ್ಲ.

ರಾಷ್ಟ್ರದುದ್ದಕ್ಕು ಕೊರೋನಾ ಸಂಕಷ್ಟ ಆವರಿಸಿಕೊಂಡು ಜನತೆ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯಗಳೆರಡು ಹಠಕ್ಕೆ ಬಿದ್ದ ಹಾಗೆ ಜನ ವಿರೋಧಿಯಾದ ಕಾಯ್ದೆಗಳನ್ನು ತರಲು ಸುಗ್ರೀವಾಜ್ಞೆಗಳ ಮೊರೆ ಹೋಗಲಾಗುತ್ತಿದೆ. ಜನದ್ರೋಹಿಯಾದ ಮತ್ತು ಕಾರ್ಪೊರೇಟ್ ಪರವಾದ ಕಾನೂನುಗಳನ್ನು ತರುತ್ತಿದ್ದೀರಿ. ಸಣ್ಣ ಪ್ರಮಾಣದ ಭೂಮಿಯ ಆಸರೆ ಇದ್ದರೂ ಕೂಡ ರೈತಾಪಿ ಕುಟುಂಬಗಳು ಬಿಕ್ಕಟ್ಟನ್ನು ನಿಭಾಯಿಸುತ್ತವೆ. ಹೊಟ್ಟೆ ಬಟ್ಟೆಗೆ ಆಗುವಷ್ಟಾದರೂ ಬೆಳೆದು ಜೀವ ಉಳಿಸಿಕೊಳ್ಳಲು ಭೂಮಿಯನ್ನು ಆಶ್ರಯಿಸುತ್ತವೆ. ನೀವೀಗ  ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ನೇರವಾಗಿ ರೈತರ ಹೊಟ್ಟೆಗೆ ಬೆಂಕಿ ಹಾಕಲು ಹೊರಟಿದ್ದೀರಿ.

ಉಳುವವನೆ ಹೊಲದ ಒಡೆಯನೆಂಬ ಕಾಗೋಡು ಸತ್ಯಾಗ್ರಹದ ಆಶಯವನ್ನು ನೀವು ಉಳ್ಳವನೇ ಭೂಮಿಯ ಒಡೆಯ ಎಂದು ಬದಲಾಯಿಸಿ ರಾಜ್ಯದ ಚರಿತ್ರೆಯಲ್ಲಿ ಶಾಶ್ವತವಾಗಿ ಖಳನಾಯಕನ ಪಾತ್ರವನ್ನು ವಹಿಸಿಕೊಳ್ಳಲು ಹೊರಟಿದ್ದೀರಿ. ಹಾಗಾಗಲು ಬಿಡದೆ ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ದುರ್ಬಲಗೊಳಿಸದೆ ಕಾಯ್ದೆಯ ಆಶಯಗಳನ್ನು ಇನ್ನಷ್ಟು ಶಕ್ತಗೊಳಿಸಬೇಕೆಂದು ಒತ್ತಾಯಿಸುತ್ತೇನೆ.

ಪ್ರಸ್ತುತ ಸರ್ಕಾರಗಳು ಮಾಡಬೇಕಾದ ಕೆಲಸ ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಬೇಕಾಗಿರುವುದು. ಇದಕ್ಕೆ ಡಾ. ಎಂ.ಎಸ್. ಸ್ವಾಮಿನಾಥನ್ ಅವರ ಶಿಫಾರಸ್ಸುಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು. ರೈತ ಬೆಳೆದ ಬೆಳೆಗಳಿಗೆ ನ್ಯಾಯಯುತವಾದ ಬೆಲೆಯನ್ನು ಕಲ್ಪಿಸಬೇಕು. ಈಗ ನಾಮಕಾವಸ್ತೆಗೆ ಇರುವ ಕೇಂದ್ರದ ಫಸಲ್ ವಿಮಾ ಯೋಜನೆಯ ಬದಲಾಗಿ ನಿಜಾರ್ಥದಲ್ಲಿ ಕೃಷಿ ವಿಮಾ ನೀತಿಯನ್ನು ಜಾರಿಗೊಳಿಸಬೇಕು. ಅತೀ ಹೆಚ್ಚಿನ ಸಂಖ್ಯೆಯ ಉದ್ಯೋಗವನ್ನು ಒದಗಿಸಿರುವ ಕೃಷಿ ವಲಯವನ್ನು ಸಶಕ್ತಗೊಳಿಸಬೇಕಾಗಿದೆ ಮತ್ತು ಭೂ ಸುಧಾರಣೆ ಕಾಯ್ದೆಯ ಆಶಯಗಳನ್ನು ಇನ್ನಷ್ಟು ಕಠಿಣ ರೂಪದಲ್ಲಿ ಜಾರಿಗೊಳಿಸಬೇಕಾದ ಅಗತ್ಯ ಇದೆ. ಅದರ ಬದಲಾಗಿ ನೀವು ಇಡೀ ಭೂ ಸುಧಾರಣಾ ಕಾಯ್ದೆಯ ಆಶಯಗಳನ್ನೆ ನಾಶ ಮಾಡಲು ಹೊರಟಿದ್ದೀರಿ.

ನಮ್ಮಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿ ಇದ್ದಾಗಲೇ  ಕೈಗಾರಿಕಾ ವಲಯದಲ್ಲಿ ರಾಜ್ಯ ಯಾವತ್ತಿಗೂ ಮುಂಚೂಣಿಯಲ್ಲಿತ್ತು. ವಿಶ್ವದ ಬಂಡವಾಳಿಗರು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ಬಯಸುತ್ತಿದ್ದರು.ಕೃಷಿ ಮತ್ತು ಕೈಗಾರಿಕೆಗಳ ಸಮತೋಲಿತ ಬೆಳವಣಿಗೆಯಿಂದಾಗಿ ರಾಜ್ಯದಲ್ಲಿ ನಿರುದ್ಯೋಗದ ಪ್ರಮಾಣ ಇಡೀ ದೇಶದಲ್ಲೇ ಅತ್ಯಂತ ಕಡಿಮೆ ಇತ್ತು.  ಇಂಥ ಸುಗಮವಾದ, ಸುಭದ್ರವಾದ ವ್ಯವಸ್ಥೆಯನ್ನು ನೀವು ಸಂಪೂರ್ಣ ನಾಶ ಮಾಡಲು ಹೊರಟಿದ್ದೀರಿ.ಗ್ರಾಮೀಣ ಆರ್ಥಿಕತೆಯನ್ನು ಸಂಪೂರ್ಣ ನಾಶ ಮಾಡಿ ನಗರಗಳಲ್ಲಿ ಬಿಡಿಗಾಸಿಗೆ ದುಡಿಯುವ ಕಾರ್ಮಿಕ ವರ್ಗವನ್ನು ಸೃಷ್ಟಿಸುವುದು ಸಹ ಇದರ ಹಿಂದೆ ಇರುವ ಹುನ್ನಾರಗಳಲ್ಲಿ ಒಂದು.

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ರಾಜ್ಯ ಸರ್ಕಾರ ಹಣ ಇದ್ದವರು ಎಷ್ಟು ಬೇಕಾದರೂ ಭೂಮಿಯನ್ನು ಪಡೆಯಬಹುದು ಎನ್ನುವ ಆಘಾತಕಾರಿ ನಿಯಮ ಜಾರಿಗೆ ತರಲು ಹೊರಟಿದೆ. ಈ ಮೂಲಕ ಸರ್ಕಾರ ಕೃಷಿ ವಲಯವನ್ನು ನಾಶ ಮಾಡಿ,  ಗ್ರಾಮೀಣ ಆರ್ಥಿಕತೆಯನ್ನು ಸಂಪೂರ್ಣ ಕೊಂದು ಹಾಕಿ ಇಡೀ ದೇಶದ ಆರ್ಥಿಕತೆಯನ್ನು ಅಲ್ಲೋಲ ಕಲ್ಲೋಲ ಮಾಡಲು ಹೊರಟಿದೆ.

ದಮನಿತ ವರ್ಗಗಳು ಆರ್ಥಿಕ ಚೈತನ್ಯ ಕಳೆದುಕೊಂಡರೆ, ಅಧಿಕಾರದಿಂದ ವಂಚಿತಗೊಂಡರೆ ಶಾಶ್ವತವಾಗಿ ಗುಲಾಮಗಿರಿಯತ್ತ ಸಾಗುತ್ತವೆ. ಈ ದುರುದ್ದೇಶವನ್ನು ಇಟ್ಟುಕೊಂಡೇ ಬಿಜೆಪಿ ನೇತೃತ್ವದ  ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ದಮನಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಆರ್ಥಿಕ ಚೈತನ್ಯವನ್ನು ಕುಗ್ಗಿಸುತ್ತಿದ್ದವು. ಇದೀಗ ಭೂಮಿ ಸಂಬಂಧಿತ, ಕೃಷಿ ಸಂಬಂಧಿತ ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ಕೃಷಿ ವಲಯಕ್ಕೆ ಹಣ ಉಳ್ಳವರನ್ನು ಸೇರಿಸಿ ಅವರಿಂದ ರೈತರ ಭೂಮಿ ಕುಸಿಯುವ ಮೂಲಕ ಅನ್ನದಾತರ ಆರ್ಥಿಕ ಚೈತನ್ಯವನ್ನು ಶಾಶ್ವತವಾಗಿ ನಾಶ ಮಾಡುವ ಹುನ್ನಾರ ಆರಂಭವಾಗಿದೆ.

ಕಾರ್ಪೋರೇಟ್ ಕಂಪನಿಗಳು ಈ ವರೆಗೂ ನಮ್ಮಲ್ಲಿ  ಕೃಷಿ ಉತ್ಪಾದನೆಗೆ ಕೈ ಹಾಕಲು ಸಾಧ್ಯವಾಗಿರಲಿಲ್ಲ. ಈಗ ನೀವು ತರಲು ಹೊರಟಿರುವ ಮಾರ್ಪಾಡಿನಿಂದಾಗಿ ಕಾರ್ಪೊರೇಟ್ ಕಂಪನಿಗಳು ಕೃಷಿ ಭೂಮಿಗೆ ಲಗ್ಗೆ ಹಾಕುತ್ತವೆ. ಕೃಷಿ ಕ್ಷೇತ್ರ ತನ್ನ ಮೂಲ ಸ್ವರೂಪ ಕಳೆದುಕೊಂಡು ಕೈಗಾರೀಕರಣದತ್ತ ಹೊರಳುತ್ತದೆ. ಇದರಿಂದಾಗಿ ಅಂತರ್ಜಲ ಕುಸಿತವಾಗುತ್ತದೆ.ವಿಪರೀತ ಪ್ರಮಾಣದ ಔಷಧ,ರಸಗೊಬ್ಬರ ಮುಂತಾದ ರಾಸಾಯನಿಕಗಳನ್ನು ಬಳಕೆ ಮಾಡುವುದರಿಂದ ಭೂಮಿ ನಾಶವಾಗುತ್ತದೆ.ಇದರಿಂದ ಜೀವ ವೈವಿಧ್ಯ ನಾಶವಾಗಿ ಉಳಿದ ರೈತರು ಕೃಷಿ ಮಾಡುವುದೇ ದುಸ್ತರವಾಗುತ್ತದೆ. ಭೂಮಿ ತನ್ನ ಸೃಷ್ಟಿಶೀಳತೆಯನ್ನು ಕಳೆದುಕೊಂಡು ಬರಡಾಗುತ್ತದೆ.ವಿಷಯುಕ್ತ ನೀರು, ಕ್ಷಾರಯುಕ್ತ ಭೂಮಿ ಮುಂತಾದವುಗಳ ಸಮಸ್ಯೆ ವಿಪರೀತವಾಗುತ್ತದೆ.ಭೂಮಿ ಕುರಿತಾದ ವ್ಯಾಜ್ಯಗಳಿಗೂ ಇದು ದಾರಿ ಮಾಡಿಕೊಡುತ್ತದೆ. ಕೃಷಿ ವೈವಿಧ್ಯ ನಾಶವಾಗಿ ಏಕರೂಪಿ ಕೃಷಿ ಸಂಸ್ಕೃತಿ ಪ್ರಾರಂಭವಾಗುತ್ತದೆ.

ಬಂಡವಾಳಿಗರಲ್ಲಿರುವ ಅಪಾರ ಪ್ರಮಾಣದ ಹಣದಿಂದ ಸಣ್ಣಪುಟ್ಟ ರೈತರ ಭೂಮಿಯನ್ನು ಕಸಿದುಕೊಳ್ಳಲು ಸಾಧ್ಯವಾಗುತ್ತದೆ. ಕೃಷಿಯಲ್ಲಿ ಬಂಡವಾಳಿಗರ ಏಕಸ್ವಾಮ್ಯ (ಮೊನಾಪಲಿ) ಸಾಧಿಸಲಾಗುತ್ತದೆ.  ಬಹುಪಾಲು ಜನರು ಸೇರಿ ಉತ್ಪಾದನೆ ಮಾಡಿ ಎಲ್ಲರೂ ಬದುಕುವ ವಾತಾವರಣ ನಿರ್ಮಾಣವಾಗುವುದರ ಬದಲು ಕೆಲವರು ಉತ್ಪಾದನೆ ಮಾಡಿ ಇಡೀ ದೇಶಕ್ಕೆ ಹಂಚುವ ಅಪಾಯಕಾರಿ ದಿನಗಳು ಬರಲಿವೆ. ಇದರಿಂದ ಜನರ ಆಹಾರದ ಹಕ್ಕು ಮೊಟಕಾಗುತ್ತದೆ. ವಿಪರೀತ ನಿರುದ್ಯೋಗ ಸಮಸ್ಯೆ ಪ್ರಾರಂಭವಾಗುತ್ತದೆ.

ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳು,ದೊಡ್ಡ ಬಂಡವಾಳಿಗರಿಗೆ ಬೇಕಾದ ವೇದಿಕೆಯನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳೆರಡು ಹಠಕ್ಕೆ ಬಿದ್ದ ಹಾಗೆ ಜಾರಿಗೆ ತರುತ್ತಿದ್ದೀರಿ. ಅವರುಗಳಿಗೆ ರತ್ನಗಂಬಳಿ ಹಾಸಿ ಕೃಷಿ ಕ್ಷೇತ್ರಕ್ಕೆ ಸ್ವಾಗತಿಸಲು ನಿಂತಿದ್ದೀರಿ. ಅವರುಗಳ ಮಾರುಕಟ್ಟೆ ಸುಗುಮವಾಗಿರಲೆಂದು ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ತರುತ್ತಿದ್ದೀರಿ. ರೈತರೊಂದಿಗೆ ಕೃಷಿ ಕ್ಷೇತ್ರದಲ್ಲಿ ಒಪ್ಪಂದದ ಕೃಷಿ ಮಾಡಲು ಕಾಯ್ದೆಯನ್ನು ತರುತ್ತಿದ್ದೀರಿ. ಬಂಡವಾಳಿಗ ಬೆಳೆದ ಆಹಾರ ಧಾನ್ಯಗಳು, ಬೇಳೆ ಕಾಳುಗಳು, ಎಣ್ಣೆ ಕಾಳುಗಳು, ಖಾದ್ಯತೈಲ, ಈರುಳ್ಳಿ, ಆಲೂಗಡ್ಡೆ ಮುಂತಾದ ಬೆಳೆಗಳನ್ನು ಎಷ್ಟು ಪ್ರಮಾಣದಲ್ಲಿ ಸಂಗ್ರಹಿಸಿಕೊಳ್ಳಲು ಎಸ್ಮಾ ಕಾಯ್ದೆಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರ ಕೆಲವರಿಗಷ್ಟೆ ಅನುಕೂಲ ಮಾಡಲು ಹೊರಟಿದೆ.ಇದರಿಂದ ಬೆಲೆ ಮೇಲೆ ನಿಯಂತ್ರಣ ತಪ್ಪಿ ನಗರದ ಗ್ರಾಹಕರ ಮೇಲೂ ದುಷ್ಪರಿಣಾಮ ಬೀರುತ್ತದೆ.

ಕೇಂದ್ರ ಹಾಗೂ ರಾಜ್ಯಗಳಲ್ಲಿ ಒಂದೇ ಪಕ್ಷದ ಸರ್ಕಾರಗಳಿದ್ದರೆ ಸ್ವರ್ಗ ಸೃಷಿಯಾಗುತ್ತದೆ ಎಂದು ನಂಬಿಸಿ ರೈತನ ಬಡವರ, ಹಿಂದುಳಿದವರ, ದಮನಿತರ ಶೋಷಗೊಳಗಾದವರ ಮೈಯಲ್ಲಿ ಜಾಗವೇ ಇಲ್ಲದಷ್ಟು ಪ್ರಮಾಣದಲ್ಲಿ ಇರಿಯುತ್ತಿದ್ದೀರಿ. ಇದು ರೈತರ ಹೆಸರು ಹೇಳಿ ಅಧಿಕಾರಕ್ಕೆ ಬಂದ ನಿಮ್ಮಂಥವರಿಗೆ ಶೋಭೆ ತರುವ ವಿಚಾರವಲ್ಲ. ಕಾಯಿದೆಯ ಅನುಷ್ಠಾನದಲ್ಲಿ ಲೋಪದೋಷಗಳಿರಬಹುದು. ಕೆಲವು ಲಜ್ಜೆಗೆಟ್ಟ ಅಧಿಕಾರಿಗಳು ತಪ್ಪು ಮಾಡುತ್ತಿರಬಹುದು. ಅದನ್ನು ಸರಿಪಡಿಸಬೇಕಾದ್ದು ಸರ್ಕಾರದ ಕರ್ತವ್ಯ. ಅಧಿಕಾರಿಗಳು ತಪ್ಪು ಮಾಡುತ್ತಿದ್ದಾರೆ ಎಂಬ ನೆಪ ಹೇಳಿ ಕಾಯ್ದೆಯನ್ನೇ ರದ್ದುಪಡಿಸಲು ಹೊರಟಿರುವುದು ಮೂರ್ಖತನದ ಪರಮಾವಧಿ.
ಕೆಲವು ಅಧಿಕಾರಿಗಳ ದುರ್ವರ್ತನೆಯನ್ನು ನೆಪವಾಗಿಟ್ಟುಕೊಂಡು ಬೆರಳೆಣಿಕೆಯಷ್ಟು ಕಾರ್ಪೊರೇಟ್ ಕಂಪನಿಗಳ ಅಥವಾ ಉಳ್ಳವರ ಹಿತಾಸಕ್ತಿಗಾಗಿ ಕೋಟ್ಯಂತರ ರೈತರ ಮೇಲೆ ಸಮಾಧಿ ಕಟ್ಟಲು ಹೊರಟಿರುವುದು ಅಕ್ಷಮ್ಯ ಅಪರಾಧ.ಇದು ನಾಗರಿಕ ಸರ್ಕಾರವೊಂದರಿಂದ ಘಟಿಸಬಹುದಾದ ಘೋರ ಕೃತ್ಯ. 

ದೇಶದಲ್ಲಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರತಿಭಟನೆಗಳನ್ನು ನಿರ್ಬಂಧಿಸಲಾಗಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಜನವಿರೋಧ ಕಾಯ್ದೆಗಳನ್ನು ಜಾರಿಗೆ ತರುವ ದುಷ್ಟತನವನ್ನು ಕೇಂದ್ರ, ರಾಜ್ಯ ಸರ್ಕಾರಗಳೆರಡು ಮಾಡುತ್ತಿವೆ. ಸರ್ಕಾರಗಳು ಕೊರೋನ ಸಮಸ್ಯೆಯನ್ನು ಬಗೆ ಹರಿಸುವ ಬದಲು ಇಂಥ ಘಾತುಕ ಕೃತ್ಯ ಮಾಡಲು ಹೊರಟರೆ ನಿಮ್ಮನ್ನು ರಕ್ಷಕರೆನ್ನಲಾದೀತೆ? ಕೇಂದ್ರ ರಾಜ್ಯ ಸರ್ಕಾರಗಳು ಜನರ ಸಂಕಷ್ಟವನ್ನು ದುರುಪಯೋಗ ಮಾಡಿಕೊಂಡು ಬೆನ್ನಲ್ಲಿ ಇರಿಯಹೊರಟಿರುವ ಕೃತ್ಯವನ್ನು ನಿಲ್ಲಿಸಿ ಈಗ ಹೊರಡಿಸಿರುವ ಸುಗ್ರೀವಾಜ್ಞೆಗಳನ್ನು ರದ್ದು ಪಡಿಸದಿದ್ದರೆ,ಸರ್ಕಾರಗಳ ವಿರುದ್ಧ ಜನರ ಚಳುವಳಿಯನ್ನು ಪ್ರಾರಂಭಿಸಬೇಕಾದ ಅನಿವಾರ್ಯತೆ ಸೃಷಿಯಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಆದುದರಿಂದ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ  ಹೆಸರಿನಲ್ಲಿ ಕಾಯ್ದೆಯ ಆತ್ಮವನ್ನೇ ಕೊಲ್ಲಲು ಹೊರಟಿರುವ ತೀರ್ಮಾನವನ್ನು ತಕ್ಷಣವೇ ಕೈ ಬಿಡಬೇಕು. ಜೊತೆಗೆ  ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ತರಲು ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಈ ಕ್ಷಣದಿಂದ ರದ್ದುಪಡಿಸಬೇಕು. ಮತ್ತು ಕೇಂದ್ರ ಸರ್ಕಾರ  ಈ ಎರಡು ಕಾಯ್ದೆಗಳನ್ನು ಕೇಂದ್ರವು ಕೈಬಿಡುವಂತೆ ರಾಜ್ಯ ಸರ್ಕಾರ ಒತ್ತಾಯಿಸಬೇಕೆಂದು ಆಗ್ರಹಿಸುತ್ತೇನೆ. 

ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
ಸಿದ್ದರಾಮಯ್ಯ

Trending News