ನಾನು-ಶ್ರೀರಾಮುಲು ಅಣ್ಣ-ತಮ್ಮ ಇದ್ದಂತೆ; ಭಿನ್ನಮತ ಶಮನಕ್ಕೆ ಮುಂದಾದ ಸುಧಾಕರ್

ಯಡಿಯೂರಪ್ಪ ಮಧ್ಯಪ್ರವೇಶದ ಬಳಿಕ  ಸುಧಾಕರ್ ಮತ್ತು ಶ್ರೀರಾಮುಲು ಇಬ್ಬರ ನಡುವಿನ ಮುನಿಸು ಸ್ವಲ್ಪ ಮರೆಯಾಗಿತ್ತು. ಈಗ ಮತ್ತೆ ಅದು ಉಲ್ಬಣಿಸಿದೆ ಎಂದು ಹೇಳಲಾಗುತ್ತಿದೆ. ದೂರು ಹೈಕಮಾಂಡ್ ಅಂಗಳವನ್ನೂ ತಲುಪಿದೆ ಅಥವಾ ತಲುಪಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

Written by - Yashaswini V | Last Updated : Apr 4, 2020, 11:57 AM IST
ನಾನು-ಶ್ರೀರಾಮುಲು ಅಣ್ಣ-ತಮ್ಮ ಇದ್ದಂತೆ; ಭಿನ್ನಮತ ಶಮನಕ್ಕೆ ಮುಂದಾದ ಸುಧಾಕರ್ title=

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮಾಹಾಮಾರಿ ವಿರುದ್ದ ಹೋರಾಡಬೇಕಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮತ್ತು ಆರೋಗ್ಯ ಸಚಿವ ಬಿ. ಶ್ರೀರಾಮುಲು ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ಬಗ್ಗೆ ಸುದ್ದಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸುಧಾಕರ್ ಸ್ಪಷ್ಟನೆ ನೀಡಿದ್ದು, 'ನಾನೂ ಮತ್ತು ಶ್ರೀರಾಮುಲು (B Sriramulu) ಅಣ್ಣ-ತಮ್ಮ ಇದ್ದಂತೆ, ನಾವಿಬ್ಬರೂ ಜೊತೆಯಾಗಿ ಕೊರೋನಾ ವಿರುದ್ಧ ಹೋರಾಡುತ್ತಿದ್ದೇವೆ' ಎಂದು ಹೇಳಿದ್ದಾರೆ.

ಕೆಲದಿನಗಳ ಹಿಂದೆ ಸುಧಾಕರ್ ಮತ್ತು ಶ್ರೀರಾಮುಲು ನಡುವೆ ಭಿನ್ನಾಭಿಪ್ರಾಯ ಉಂಟಾದಾಗ ಬಿಕ್ಕಟ್ಟು ಶಮನಕ್ಕೆ ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ (BS Yeddyurappa)  ಅವರೇ ಮಧ್ಯಪ್ರವೇಶ ಮಾಡಿದ್ದರು. ಜವಾಬ್ದಾರಿ ಹಂಚಿಕೆ ಬದಲು ಮಾಡುವ ಪ್ರಯತ್ನವೂ ಆಗಿತ್ತು. ಯಡಿಯೂರಪ್ಪ ಮಧ್ಯಪ್ರವೇಶದ ಬಳಿಕ ಇಬ್ಬರ ನಡುವಿನ ಮುನಿಸು ಸ್ವಲ್ಪ ಮರೆಯಾಗಿತ್ತು. ಈಗ ಮತ್ತೆ ಅದು ಉಲ್ಬಣಿಸಿದೆ ಎಂದು ಹೇಳಲಾಗುತ್ತಿದೆ. ದೂರು ಹೈಕಮಾಂಡ್ ಅಂಗಳವನ್ನೂ ತಲುಪಿದೆ ಅಥವಾ ತಲುಪಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸುಧಾಕರ್ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.

'ನನ್ನ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಇಬ್ಬರೂ ಒಟ್ಟಾಗಿ ಕೊರೋನಾ ವಿರುದ್ಧ ಟೊಂಕ ಕಟ್ಟಿ ಹೋರಾಡುತ್ತಿದ್ದೇವೆ. ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೇವೆ. ನಾನು ಮತ್ತು ಶ್ರೀರಾಮುಲು ಅಣ್ಣ-ತಮ್ಮಂದಿರಂತೆ ಇದ್ದೇವೆ. ಇಬ್ಬರೂ ಒಂದಾಗಿ ರಾಜ್ಯದ ಜನರಿಗಾಗಿ ಶ್ರಮಿಸುತ್ತಿದ್ದೇವೆ' ಎಂದು ಟ್ವೀಟ್ ಮಾಡುವ ಮೂಲಕ ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಇದಾದ ಮೇಲೆ ಮತ್ತೊಂದು ಟ್ವೀಟ್ ಮಾಡಿರುವ ಸುಧಾಕರ್, 'ರಾಜ್ಯದಲ್ಲಿ ಕೊರೋನಾದಿಂದ ಸಾವಿನ ಆತಂಕ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುನಿಸಿನ ರಾಜಕೀಯ ಮಾಡಲು ನಾವು ಸಣ್ಣ ಮಕ್ಕಳಲ್ಲ. ನಮಗೆ ನಮ್ಮದೇ ಆದ ಜವಾಬ್ದಾರಿಗಳಿವೆ. ಈ ಸುಳ್ಳು ಸುದ್ದಿಗಳ ಹಿಂದೆ ನೀಚ ರಾಜಕಾರಣದ ಷಡ್ಯಂತ್ರವಿದೆ' ಎಂದು ಹೇಳಿದ್ದಾರೆ.

ಈ ರೀತಿ ತಮ್ಮ ಮತ್ತು ಶ್ರೀರಾಮುಲು ನಡುವಿನ ಭಿನ್ನಾಭಿಪ್ರಾಯದ ಸುದ್ದಿಯನ್ನು ತಣ್ಣಗೆ ಮಾಡಲು ಪ್ರಯತ್ನಿಸಿರುವ ಸುಧಾಕರ್ ಇತ್ತಿಚೆಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಬಂದು ಗೆದ್ದು ಸಚಿವರಾದವರು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದವರಲ್ಲಿ‌ ಇವರು ಒಬ್ಬರೆಂದು ಬಹಳ ಪ್ರಮುಖವಾದ ವೈದ್ಯಕೀಯ ಸಚಿವ ಸ್ಥಾನ ನೀಡಲಾಗಿತ್ತು.  ವಲಸಿಗ ಸುಧಾಕರ್ ಗೆ ವೈದ್ಯಕೀಯಯಂಥ ಮಹತ್ವದ ಖಾತೆ ಕೊಟ್ಟ ಬಗ್ಗೆ ಬಿಜೆಪಿಯಲ್ಲಿ ಮೊದಲಿಂದಲೂ ಅಸಮಾಧಾನ ಇತ್ತು. ಈ ನಡುವೆ ಶ್ರೀರಾಮುಲು ಜೊತೆಗಿನ ಭಿನ್ನಮತದ‌ ಕಾರಣ ಇಟ್ಟುಕೊಂಡು ಹೈಕಮಾಂಡ್ ಮಟ್ಟದಲ್ಲಿ ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಬಹುದೆಂಬ ಕಾರಣಕ್ಕೆ ಸುಧಾಕರ್ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಅದರ ಭಾಗವಾಗಿ ಭಿನ್ನಮತವನ್ನು ತಾವೇ ಶಮನಗೊಳಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
 

Trending News