ಬೆಂಗಳೂರು: ರಾಜ್ಯ ಸರ್ಕಾರದಿಂದ ಶಿಕ್ಷಕರಿಗೆ ಸಿಹಿ ಸುದ್ದಿಯೊಂದು ದೊರೆತಿದ್ದು, ಶಿಕ್ಷಕರಿಗೆ ಸಂಬಳ ವಿಳಂಬವಾದಲ್ಲಿ ‘ಆರ್ಥಿಕ ಅಪರಾಧ’ವೆಂದೇ ಪರಿಗಣಿಸಲು ಸರ್ಕಾರ ನಿರ್ಧರಿಸಲು ಮುಂದಾಗಿದ್ದು, ಪ್ರತಿ ತಿಂಗಳು ಮೊದಲ ವಾರದಲ್ಲಿ ಶಿಕ್ಷಕರಿಗೆ ವೇತನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ವೇತನ ಬಿಡುಗಡೆಯಾಗುತ್ತಿಲ್ಲ, ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂಬ ಶಿಕ್ಷಕರು ಹಾಗೂ ಸಂಘಟನೆಗಳ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಸಂಬಳ ನೀಡಬೇಕೆಂಬ ಖಡಕ್ ನಿರ್ದೇಶನವನ್ನು ಜಾರಿಗೆ ತರಲು ಮುಂದಾಗಿದೆ.
ವಾಸ್ತವವಾಗಿ ಕೇಂದ್ರ ಸರ್ಕಾರದ ಅನುದಾನದ ನೆರವಿನ ಯೋಜನೆಯಡಿಗಳಲ್ಲಿ, ಅಂದರೆಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣಕ್ಕೆ ಸರ್ವ ಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಲ್ಲಿ ನೇಮಕವಾಗಿರುವ 50 ಸಾವಿರಕ್ಕೂ ಅಧಿಕ ಶಿಕ್ಷಕರಿಗೆ ಪ್ರತಿ ತಿಂಗಳು ಸರಿಯಾಗಿ ವೇತನ ಸಿಗುತ್ತಿಲ್ಲ ಎಂಬ ಬಗ್ಗೆ ಶಿಕ್ಷಕರು ದೂರಿದ್ದರು. ಎರಡು ಮೂರು ತಿಂಗಳಿಗೊಮ್ಮೆ ವೇತನ ಸಿಗುವುದರಿಂದ ತೊಂದರೆಯಾಗುತ್ತಿದೆ, ಇದಕ್ಕೆ ಪರಿಹಾರ ನೀಡಿ ಎಂದು ಸರ್ಕಾರಕ್ಕೆ ಒತ್ತಡ ಹೇರಿದ್ದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರತಿ ತಿಂಗಳು ಮೊದಲ ವಾರದಲ್ಲೇ ಎಲ್ಲಾ ಶಿಕ್ಷಕರಿಗೆ ವೇತನ ನೀಡಿ, ನಂತರ ಕೇಂದ್ರದಿಂದ ಬರುವ ಹಣ ಹೊಂದಾಣಿಕೆ ಮಾಡಿಕೊಳ್ಳುವಂತೆ ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ವಿಧಾನ ಪರಿಷತ್ನ ಶಿಕ್ಷಕ ಹಾಗೂ ಪದವೀಧರ ಪ್ರತಿನಿಧಿಗಳ ಜತೆ ನಡೆಸಿದ ಸಭೆಯಲ್ಲಿ ಆರ್ಥಿಕ ಅಪರಾಧವೆಂದು ಪರಿಗಣಿಸುವ ಬಗ್ಗೆ ಪ್ರಕಟಿಸಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್, ಸದ್ಯದಲ್ಲೇ ಈ ಸಂಬಂಧಿಸಿದ ಇಲಾಖೆಗಳ ಜತೆ ಸಭೆ ನಡೆಸುವುದಾಗಿ ತಿಳಿಸಿದ್ದರು.